ಲಿಂಗಸುಗೂರು: ಹಿರಿಯ ನಾಗರಿಕರು ಕೇವಲ ಕುಟುಂಬದ ಹಿರಿಯರಲ್ಲ, ತಮ್ಮ ಅನುಭವ ಮತ್ತು ಜ್ಞಾನದಿಂದ ಸಮಾಜಕ್ಕೆ ದಿಕ್ಕು ತೋರಿಸುವ ಬೆನ್ನೆಲುಬಾಗಿದ್ದಾರೆ ಎಂದು ಹಿರಿಯ ಶ್ರೇಣಿ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ಲಯನ್ಸ್ ಕ್ಲಬ್, ಆರ್ಪಿಡಿ ಟಾಸ್ಕ್ ಫೋರ್ಸ್ ಹಾಗೂ ಚೇತನ ಅಂಗವಿಕಲರ ಅಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ-ತಾಯಿಗಳು ತಮ್ಮ ಜೀವಿತಾವಧಿಯಲ್ಲಿಯೇ ಸ್ವಂತ ಆಸ್ತಿಯನ್ನು ಮಕ್ಕಳ ಹೆಸರಿಗೆ ವರ್ಗಾಯಿಸಿ ನಂತರ ನಿರ್ಲಕ್ಷ್ಯಕ್ಕೆ ಒಳಗಾಗುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ. ಹಿರಿಯರು ತಮ್ಮ ಜೀವನೋಪಾಯ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಆಸ್ತಿ ವಿಚಾರದಲ್ಲಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ನಾಗರಿಕರ ಪೋಷಣೆ ಮತ್ತು ರಕ್ಷಣಾ ಕಾಯ್ದೆ–2007ರ ಸೆಕ್ಷನ್ 23ರಡಿ, ಆಸ್ತಿ ಪಡೆದುಕೊಂಡ ಬಳಿಕ ತಂದೆ-ತಾಯಿಯನ್ನು ಸಮರ್ಪಕವಾಗಿ ನೋಡಿಕೊಳ್ಳದಿದ್ದರೆ ಆಸ್ತಿ ವರ್ಗಾವಣೆಯನ್ನು ರದ್ದುಪಡಿಸಿ ಮರುಪಡೆಯಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದರು.
ಹಿರಿಯ ನಾಗರಿಕರಿಗೆ ಸಂಬಂಧಿಸಿದ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಆದ್ಯತೆ ನೀಡಲಾಗುತ್ತಿದ್ದು, ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಲು ಬರುವ ವೃದ್ಧರಿಗೆ ಸಹ ವಿಶೇಷ ಆದ್ಯತೆ ನೀಡಲಾಗುತ್ತದೆ. ಸರ್ಕಾರದ ಸಾರಿಗೆ ಸೌಲಭ್ಯ, ಬ್ಯಾಂಕ್ ಠೇವಣಿಗಳ ಮೇಲಿನ ವಿಶೇಷ ಬಡ್ಡಿದರ ಸೇರಿದಂತೆ ಲಭ್ಯವಿರುವ ಸವಲತ್ತುಗಳನ್ನು ಹಿರಿಯರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ತಂತ್ರಜ್ಞಾನ ಬಳಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ಕಾರಣಕ್ಕೆ ಹಿರಿಯರನ್ನು ಕಡೆಗಣಿಸುವ ಮನೋಭಾವ ಬೆಳೆಬಾರದು. ಜೀವನಾನುಭವದ ಮೂಲಕ ಸಮಸ್ಯೆಗಳಿಗೆ ಸರಳ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಹಿರಿಯರಲ್ಲಿದೆ. ಯುವಜನತೆ ಅವರ ಅನುಭವಕ್ಕೆ ಗೌರವ ನೀಡಬೇಕು ಎಂದು ಹೇಳಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಅಮರೇತಪ್ಪ ಹನೂರು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ಅಂಬಣ್ಣ ಕೆ., ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಸಿದ್ರಾಮ ರೆಡ್ಡಿ, ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಭೂಪನಗೌಡ ವಿ. ಪಾಟೀಲ್, ವೈದ್ಯಾಧಿಕಾರಿ ಡಾ. ರುದ್ರಗೌಡ ಪಾಟೀಲ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರತ್ನ, ಆರ್ಪಿಡಿ ಟಾಸ್ಕ್ ಫೋರ್ಸ್ ರಾಜ್ಯಾಧ್ಯಕ್ಷ ಸುರೇಶ ಬಂಡಾರಿ, ಚೇತನ ಅಂಗವಿಕಲರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಹುಸೇನ ಬಾಷಾ ಜಿ. ಬನ್ನಿಗೊಳ, ಉಪನ್ಯಾಸಕ ಡಿ.ಜಿ. ಗುರಿಕಾರ, ನಾಗರಾಜ ತಿಪ್ಪಣ್ಣ ಅಸ್ಕಿಹಾಳ್, ನಜ್ಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.



