ಗಬ್ಬೂರು: ಯುವಜನರು ಕೇವಲ ಉದ್ಯೋಗ ಹುಡುಕುವ ಮನೋಭಾವಕ್ಕೆ ಸೀಮಿತವಾಗದೆ, ಕೌಶಲ್ಯಾಭಿವೃದ್ಧಿ ಹಾಗೂ ಸ್ವಾವಲಂಬನೆಯ ಮೂಲಕ ಉದ್ಯೋಗ ಸೃಷ್ಟಿಸುವತ್ತ ಹೆಜ್ಜೆ ಇಡಬೇಕು. ಯುವಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡಾಗ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮಹತ್ವದ ಕೊಡುಗೆ ನೀಡಬಹುದು ಎಂದು ಸುಲ್ತಾನಪುರದ ಶ್ರೀ ಪಂಚಾಕ್ಷರಿ ಮಹಾಸಂಸ್ಥಾನ ತೀರ್ಥ ಬೃಹನ್ಮಠದ ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ರಾಯಚೂರು, ಜಿಲ್ಲಾ ವೀರಶೈವ ಲಿಂಗಾಯತ ಸಮಾಜ ಹಾಗೂ ಹೆಚ್.ಸಿ.ಎಂ.ಎಸ್.ಕೆ ಶಿಕ್ಷಣ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯುಕ್ತಾಶ್ರಯದಲ್ಲಿ ಗಬ್ಬೂರಿನಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದ ಐದನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಿರುದ್ಯೋಗ ನಿರ್ಮೂಲನೆಯಲ್ಲಿ ಯುವಜನರ ಪಾತ್ರ’ ವಿಷಯದ ಕುರಿತು ಆಶೀರ್ವಚನ ನೀಡಿದ ಶ್ರೀಗಳು, ಇಂದಿನ ಯುವಕರು ತಮ್ಮಲ್ಲಿರುವ ಪ್ರತಿಭೆ ಮತ್ತು ಕೌಶಲ್ಯವನ್ನು ಗುರುತಿಸಿಕೊಂಡು ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಸ್ವಯಂ ಉದ್ಯೋಗ, ಉದ್ಯಮಶೀಲತೆ ಹಾಗೂ ಕೌಶಲ್ಯಾಧಾರಿತ ಕ್ಷೇತ್ರಗಳತ್ತ ಹೆಚ್ಚಿನ ಆಸಕ್ತಿ ತೋರಿಸುವುದು ಅಗತ್ಯ ಎಂದರು.
ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಸದಸ್ಯ ವಿಜಯಕುಮಾರ್ ಮಾತನಾಡಿ, ಶಿಕ್ಷಣದ ಜೊತೆಗೆ ಉದ್ಯೋಗಮುಖಿ ತರಬೇತಿಯನ್ನು ಪಡೆಯುವ ಮೂಲಕ ಯುವಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾಜ್ಯೋತಿ ಸಂಸ್ಥೆಯ ಅಧ್ಯಕ್ಷ ಚನ್ನಪ್ಪ ಬೂದಿನಾಳ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಯುವಜನರು ತಮ್ಮ ಸಾಮರ್ಥ್ಯವನ್ನು ಅರಿತು ವಿವಿಧ ಕ್ಷೇತ್ರಗಳಲ್ಲಿ ದೊರೆಯುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ಎಸ್.ಎಲ್.ಡಿ. ಪಬ್ಲಿಕ್ ಶಾಲೆಯ ಮಲ್ಲಿಕಾರ್ಜುನ ದೇಸಾಯಿ ಮಾತನಾಡಿ, ಯುವಜನರಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಉದ್ಯೋಗ ಸೃಷ್ಟಿಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಂಜುನಾಥ ಪಾಟೀಲ ವಟಗಲ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಾಮಾಜಿಕ ಜವಾಬ್ದಾರಿ, ಸೇವಾ ಮನೋಭಾವ ಹಾಗೂ ಸ್ವಾವಲಂಬನೆಯ ಗುಣಗಳನ್ನು ಬೆಳೆಸುವ ಉತ್ತಮ ವೇದಿಕೆಯಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಬಂಡಿ ವಿರುಪನಗೌಡ ಮಾತನಾಡಿ, ಯುವಜನರು ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು, ಅವರ ಶಕ್ತಿ ಮತ್ತು ಪ್ರತಿಭೆಯನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಯೋಜಕ ಡಾ. ಸಿದ್ಧರಾಮಯ್ಯ ಹಿರೇಮಠ, ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶಶಿಕುಮಾರ, ಉಪನ್ಯಾಸಕರಾದ ವೀರನಗೌಡ, ಹೇಮರೆಡ್ಡಿ, ಉತ್ತಪ್ಪ, ಶರಣಮ್ಮ, ಈರಪ್ಪ ಸರ್ಜಾಪುರ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.



