ಸಿಂಧನೂರು: ನಗರದಲ್ಲಿ ರಾಜಧನ ಪಾವತಿಸದೆ ಅಕ್ರಮವಾಗಿ ಮರಳು ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹನುಮೇಶ್ ಕೆ. ಒತ್ತಾಯಿಸಿದ್ದಾರೆ.
ನಗರದ ಎಲ್ಐಸಿ ಕಚೇರಿ ಹಿಂಭಾಗದಲ್ಲಿ ಹಗಲು-ರಾತ್ರಿ ಅಕ್ರಮವಾಗಿ ಮರಳು ಸಾಗಣೆ ನಡೆಯುತ್ತಿದ್ದು, ವಿವಿಧ ಸ್ಥಳಗಳಲ್ಲಿ ಸುಮಾರು 25ರಿಂದ 30 ಟ್ರಿಪ್ಗಳಷ್ಟು ಮರಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ಮಾರಾಟಕ್ಕೆ ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು.
ಮರಳು ಸಂಗ್ರಹಿಸಿರುವ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಎಎಸ್ಐ ವೀರೇಶ್ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.
ನಗರದ ಹೃದಯ ಭಾಗವನ್ನೇ ಅಕ್ರಮ ಮರಳು ಸಂಗ್ರಹ ಹಾಗೂ ಮಾರಾಟದ ಕೇಂದ್ರವನ್ನಾಗಿ ಮಾಡಿಕೊಂಡಿರುವುದು ಆತಂಕಕಾರಿ. ಯಾವುದೇ ರಾಜಧನ ಪಾವತಿಸದೆ ಮರಳು ಸಂಗ್ರಹಿಸಿ ವ್ಯಾಪಾರ ನಡೆಸುತ್ತಿದ್ದರೆ ಸರ್ಕಾರಕ್ಕೆ ಆದಾಯ ನಷ್ಟವಾಗುವುದರ ಜೊತೆಗೆ ಅಕ್ರಮ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಹನುಮೇಶ್ ಕೆ. ದೂರಿದರು.
ಸಂಬಂಧಪಟ್ಟ ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಕ್ರಮ ಮರಳು ಸಂಗ್ರಹ ಮತ್ತು ಸಾಗಾಣಿಕೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.



