ಸಿಂಧನೂರು: ನಗರದ ದೊಡ್ಡ ಹಳ್ಳದ ದಂಡೆಯ ಬಫರ್ ಝೋನ್ ವ್ಯಾಪ್ತಿಯಲ್ಲಿ ನಗರಸಭೆಯಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯದೆ ಎರಡು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಎದ್ದಿವೆ.
ಹಳ್ಳ, ನದಿ ಹಾಗೂ ಕೆರೆಗಳ ಸುತ್ತಮುತ್ತ ಒತ್ತುವರಿ ಮತ್ತು ಜಲಮೂಲಗಳ ಮಾಲಿನ್ಯ ತಡೆಯುವ ಉದ್ದೇಶದಿಂದ ನಿರ್ದಿಷ್ಟ ಪ್ರದೇಶವನ್ನು ಬಫರ್ ಝೋನ್ ಆಗಿ ಗುರುತಿಸಲಾಗುತ್ತದೆ. ಜಲಮೂಲದ ಸ್ವರೂಪ ಹಾಗೂ ಸಂಬಂಧಪಟ್ಟ ನಿಯಮಗಳ ಆಧಾರದ ಮೇಲೆ ಕಟ್ಟಡ ನಿರ್ಮಾಣಕ್ಕೆ ನಿರ್ದಿಷ್ಟ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ.
ನಗರದ ದೊಡ್ಡ ಹಳ್ಳದ ದಂಡೆಯ ಸಮೀಪ ಬಫರ್ ಝೋನ್ ವ್ಯಾಪ್ತಿಯಲ್ಲಿಯೇ ಎರಡು ವಾಣಿಜ್ಯ ಮಳಿಗೆಗಳು ನಿರ್ಮಾಣಗೊಂಡಿವೆ ಎನ್ನಲಾಗಿದ್ದು, ಇವುಗಳಿಗೆ ನಗರಸಭೆಯಿಂದ ಅಧಿಕೃತ ಕಟ್ಟಡ ಪರವಾನಗಿ ನೀಡಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶ್ರೀ ಶರಣಬಸವೇಶ್ವರ ಟ್ರೇಡರ್ಸ್ ಹಾಗೂ ಶ್ರೀ ಬಸವ ಅನ್ನದಾತ ಆಗ್ರೋಸ್ ಹೆಸರಿನ ಮಳಿಗೆಗಳು ಈ ಪ್ರದೇಶದಲ್ಲಿ ನಿರ್ಮಾಣಗೊಂಡಿವೆ ಎಂದು ತಿಳಿದುಬಂದಿದೆ. ಕಟ್ಟಡ ಕಾಮಗಾರಿ ನಡೆಯುವ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಪಾಂಡುರಂಗ ಇಟಗಿ ಹಾಗೂ ಸಂಬಂಧಪಟ್ಟ ಎಇಇ, ಎಇ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆಯೇ ಎಂಬ ಪ್ರಶ್ನೆಯೂ ಕೇಳಿಬಂದಿದೆ.
ಈ ಕುರಿತು ಸಂಬಂಧಪಟ್ಟ ಎಇ ಪ್ರವೀಣ್ ಅವರಿಂದ ಮಾಹಿತಿ ಪಡೆಯಲು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ದೂರಲಾಗಿದೆ.
ಬಫರ್ ಝೋನ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುಮತಿಗಳು ಪಡೆಯಲಾಗಿದೆಯೇ ಎಂಬುದನ್ನು ನಗರಸಭೆ ಪರಿಶೀಲಿಸಿ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರಿಗೆ ವಾಸ್ತವಾಂಶ ಸ್ಪಷ್ಟಪಡಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.



