ಪುಸ್ತಕದ ಮುಖಪುಟವೇ ಒಂದು ಕಾವ್ಯ. ಸಾಗರದ ನಡುವೆ ತೆರೆದ ಚಿಪ್ಪಿನಲ್ಲಿ ಬೆಳಗುವ ಒಂಟಿ ಮುತ್ತು, ಹನಿಯೊಂದು ಸಾಗರಕ್ಕೆ ಬೀಳುವಾಗ ಮೂಡುವ ತರಂಗ. ಇದು ಕೇವಲ ಚಿತ್ರವಲ್ಲ, ಕೃತಿಯ ತಾತ್ವಿಕ ನೆಲೆಗಟ್ಟು. 'ಹನಿಯಿಂದ ಸಾಗರಕ್ಕೆ' ಎನ್ನುವುದು ಈ ಸಂಕಲನದ ಆಶಯವಾಕ್ಯ. ನ್ಯಾನೋ ಕಥೆ ಎಂದರೆ ಹನಿಯಷ್ಟು ಚಿಕ್ಕದು, ಆದರೆ ಅದರ ಒಳಗಿರುವ ಚಿಂತನೆ ಸಾಗರದಷ್ಟು ಆಳವಾದದ್ದು ಎಂಬುದನ್ನು ಲೇಖಕರು ಶೀರ್ಷಿಕೆಯಲ್ಲೇ ಸೂಚಿಸಿದ್ದಾರೆ. ಚಿಪ್ಪಿನೊಳಗಿನ ಮುತ್ತಿನಂತೆ ಪುಟಗಳೊಳಗೆ ಮೌಲ್ಯದ ಹೊಳಪನ್ನು ತುಂಬುವ ಪ್ರಯತ್ನವಿದು. ಇದು ಕೇವಲ ಕಥೆಗಳ ಗುಚ್ಛವಲ್ಲ, ಬದುಕಿನ ಸೂಕ್ಷ್ಮ ಸಂವೇದನೆಗಳ ದರ್ಶನ.
ಬೆನ್ನುಡಿಯಲ್ಲಿ ಖ್ಯಾತ ಹಿನ್ನೆಲೆ ಗಾಯಕರಾದ ಶ್ರೀ ಮೆಹಬೂಬ್ ಸಾಬ್ ಅವರು ಹೇಳಿದಂತೆ, ಇದು ಬಾಹ್ಯ ಪ್ರಪಂಚವನ್ನು ನೋಡಲು ಇರುವ ಎರಡು ಕಣ್ಣುಗಳ ಕಥೆಯಲ್ಲ, ಅಂತರಂಗದ ಮೂರನೇ ಕಣ್ಣನ್ನು ಜಾಗೃತಗೊಳಿಸುವ ಪ್ರಯತ್ನ.
ಶಿಕ್ಷಕ ಶ್ರೀ ಮುತ್ತು ವಡ್ಡರ ಗುರುಗಳು ಬರೆದಿರುವ ಕೆಲವು ನ್ಯಾನೋ ಕಥೆಗಳ ಬಗ್ಗೆ ಹೇಳುವುದಾದರೆ, ಇಲ್ಲಿ 'ದೇವರು ಯಾರು' ಎಂಬ ಕಥೆಯಲ್ಲಿ ದೇವಸ್ಥಾನದಲ್ಲಿ ದೇವರನ್ನು ಕಾಣಲು ಹೋದ ಶ್ರೀಮಂತನು ಭಿಕ್ಷುಕರನ್ನು ನೋಡದೇ ಹೋದ, ಆದರೆ ಬಡವನೊಬ್ಬ ತನ್ನ ಬಳಿಯಿದ್ದ ಪ್ರಸಾದವನ್ನೇ ಹಂಚಿ, ಭಿಕ್ಷುಕರ ಪಾಲಿಗೆ ನಿಜವಾದ ದೇವರಾದನು. 'ಸಮಾಜ ಸೇವಕ' ಎಂಬ ಕಥೆಯಲ್ಲಿ ದೇವರು ಹಣ ತೆಗೆದುಕೊಳ್ಳುವುದಿಲ್ಲ ಎಂದು ಗೊತ್ತಿದ್ದರೂ ಹುಂಡಿಗೆ ಹಾಕುವ ನಾವು, ಹಸಿದವನಿಗೆ ಅನ್ನ ನೀಡುವುದೇ ನಿಜವಾದ ಸೇವೆ ಎಂದು ತೋರಿಸಿದ್ದಾರೆ. 'ದೇವರ ಆಶೀರ್ವಾದ ಯಾರಿಗೆ' ಎಂಬ ಕಥೆಯಲ್ಲಿ ಕಳೆದುಕೊಂಡ ಬಂಗಾರ ಸಿಗಲಿ ಎಂದು ಒಬ್ಬನು ದೇವರ ಬಳಿ ನೂರು ಕಾಯಿ ಒಡೆಯುವುದಾಗಿ ಬೇಡಿದರೆ, ಅದನ್ನೇ ಕದ್ದ ಕಳ್ಳನು ಅದೇ ದೇವರ ಬಳಿ ಕದ್ದ ಬಂಗಾರದಲ್ಲಿ ಅರ್ಧ ಕೊಡುತ್ತೇನೆಂದು ಮೊದಲೇ ಬೇಡಿಕೊಂಡಿದ್ದ. 'ದೇವರಾದ ಅಜ್ಜ' ಎಂಬ ಕಥೆಯಲ್ಲಿ ಬರಗಾಲದಲ್ಲಿ ಊರ ಹೊರಗೆ ಬಾವಿಯಲ್ಲಿ ನೀರಿಲ್ಲ ಎಂದಾಗ ಮಧ್ಯರಾತ್ರಿ ಎದ್ದು ಊರಿಗೆ ನೀರು ತರಲು ಹೋದ ಅಜ್ಜ ಬಾವಿಗೆ ಹಾರಿ ಪ್ರಾಣ ಬಿಟ್ಟು, ಊರವರ ಪಾಲಿಗೆ ದೇವರೇ ಆಗಿ ಹೋದ. 'ಬಿರುಕು ಬಿಟ್ಟ ಗೋಡೆ' ಎಂಬ ಕಥೆಯಲ್ಲಿ ಹೆತ್ತವರು ತೀರಿದ ಮೇಲೆ ಆಸ್ತಿಗಾಗಿ ಮಧ್ಯೆ ಗೋಡೆ ಕಟ್ಟಿಕೊಂಡ ಅಣ್ಣ-ತಮ್ಮಂದಿರು, ಆ ಗೋಡೆ ಬಿರುಕು ಬಿಟ್ಟಾಗ ಆ ಬಿರುಕಿನಲ್ಲಿ ಒಬ್ಬರಿಗೊಬ್ಬರು ಕಾಣಿಸಿಕೊಂಡು ಬಾಲ್ಯದ ಪ್ರೀತಿಯನ್ನು ನೆನೆದು, ಬಿರುಕು ಬಿಟ್ಟ ಗೋಡೆಯನ್ನೇ ಕೆಡವಿ ಮತ್ತೆ ಒಂದಾಗಿ ಬಾಳಿದರು. 'ಅಣ್ಣನ ನೆರಳು' ಎಂಬ ಕಥೆಯಲ್ಲಿ ಅಣ್ಣ-ಅತ್ತಿಗೆ ಸತ್ತ ಮೇಲೆ ಅವರ ಇಬ್ಬರು ಮಕ್ಕಳನ್ನು ದುಡಿಮೆಗೆ ಹಚ್ಚಿ, ಅವರ ಅರ್ಧ ಮನೆಯನ್ನೇ ತನ್ನದಾಗಿಸಿಕೊಂಡ ತಮ್ಮ, ಗೃಹಪ್ರವೇಶದ ದಿನ ಮನೆಗೆ 'ಅಣ್ಣನ ನೆರಳು' ಎಂದು ಹೆಸರಿಟ್ಟು ತನ್ನ ದೊಡ್ಡತನ ಮೆರೆದ. 'ಬಿದ್ದಲ್ಲಿಯೇ ಎದ್ದು ನಿಲ್ಲಬೇಕು' ಎಂಬ ಕಥೆಯಲ್ಲಿ ನೆಲಕ್ಕೆ ಬಿದ್ದ ಬೇವಿನ ಬೀಜವು ಮರದ ಮೇಲಿನ ಇನ್ನೊಂದು ಬೀಜವನ್ನು ನತದೃಷ್ಟ ಎಂದು ಅಪಹಾಸ್ಯ ಮಾಡಿತು, ಆದರೆ ಗಾಳಿಗೆ ನದಿಗೆ ಬಿದ್ದು ಕೊಳೆತು ಹೋದ ತಾನೇ ನಾಶವಾದರೆ, ತಾನು ಹೀಯಾಳಿಸಿದ ನೆಲದ ಬೀಜವೇ ಸಸಿಯಾಗಿ ಬೆಳೆದು ಮರವಾಯಿತು - ಯಾರನ್ನೂ ಅಪಹಾಸ್ಯ ಮಾಡಬಾರದು ಎಂಬ ನೀತಿ ಈ ನ್ಯಾನೋ ಕಥೆಯಲ್ಲಿ ಕಂಡು ಬರುತ್ತದೆ . 'ತಾಯಿಯೇ ನಮ್ಮ ದೇವರು' ಎಂಬ ಕಥೆಯಲ್ಲಿ ದೇವಸ್ಥಾನದಲ್ಲಿ ದೇವರಿಗೆ ಕೈಮುಗಿಯಲು ಹೇಳಿದ ತಾಯಿಗೆ ನಮಸ್ಕರಿಸಿದ ಮಗುವಿನ ಗುರುಗಳು ತಾಯಿಯೇ ದೇವರು ಎಂದಿದ್ದಾರೆ, ಗುರುಗಳು ಸುಳ್ಳು ಹೇಳುವುದಿಲ್ಲ ಎಂದು 5ನೇ ತರಗತಿಯ ಮಗ ತಾಯಿಯ ಪಾದಕ್ಕೆ ನಮಸ್ಕರಿಸಿದನು. 'ಮೌನ ಪ್ರೀತಿ' ಎಂಬ ಕಥೆಯಲ್ಲಿ ದಿನಾ ಕೂಗಿ ಕೂಗಿ I love you ಎಂದ ಹುಡುಗನಿಗೆ ಹುಡುಗಿ ಎಂದೂ ಉತ್ತರಿಸಲಿಲ್ಲ, ಆದರೆ ಅವಳ ಪ್ರೀತಿ ಮೌನವಾಗಿಯೇ ಉಳಿಯಿತು, ಏಕೆಂದರೆ ಅವಳಿಗೆ ಕಿವಿಯೂ ಇರಲಿಲ್ಲ, ಮಾತನಾಡಲು ಬಾಯಿಯೂ ಇರಲಿಲ್ಲ. 'ಅಪ್ಪು ಅಜರಾಮರ' ಎಂಬ ಕಥೆಯಲ್ಲಿ ಅಪ್ಪು ನಮ್ಮನ್ನೆಲ್ಲ ಬಿಟ್ಟು ಹೋದಾಗ ಏನಾಯಿತು ಎಂದು ಮಾಧ್ಯಮದವರು ಕೇಳಿದಾಗ, ಅಭಿಮಾನಿಯೊಬ್ಬ ಆ ದಿನ ಮನುಷ್ಯತ್ವವೇ ಸತ್ತು ಹೋಯಿತು ಎಂದು ಉತ್ತರಿಸಿದನು ಎಂಬ ಮಾತು ಕಣ್ಣಂಚಲ್ಲಿ ನೀರು ತರಿಸುತ್ತದೆ.'ನನ್ನೊಂದಿಗೆ ಅಪ್ಪನ ಹೆಸರು' ಎಂಬ ಕಥೆಯಲ್ಲಿ ಮದುವೆಯ ನಂತರ ಸರ್ಕಾರಿ ನೌಕರಿ ಬಂದರೆ ಗಂಡನ ಹೆಸರು ನನ್ನ ಹೆಸರಿನ ಮುಂದೆ ಬರುತ್ತೆ, ಮದುವೆಗಿಂತ ಮುಂಚೆಯೇ ಬಂದರೆ ಅಪ್ಪನ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂದು ವಿದ್ಯಾರ್ಥಿನಿ ತಂದೆಯ ಮೇಲಿನ ಪ್ರೀತಿಯನ್ನು ತೋರಿಸಿದಾಗ ಇಡೀ ತರಗತಿಯೇ ಚಪ್ಪಾಳೆ ತಟ್ಟಿತು ಎಂಬ ಅಂಶ ಸ್ಪೂರ್ತಿದಾಯಕವಾಗಿದೆ.
ಒಟ್ಟಾರೆ ಹೇಳುವುದಾದರೆ ಶಿಕ್ಷಕರು ಮತ್ತು ಲೇಖಕರಾದ ಮುತ್ತು ಸರ್ ಅವರು ಬರೆದಿರುವ ಪ್ರತಿಯೊಂದು ನ್ಯಾನೋ ಕಥೆಗಳು ದೊಡ್ಡ ದೊಡ್ಡ ಪದಗಳನ್ನು ಬಳಸದೆ ದಿನನಿತ್ಯ ನಮ್ಮ ಸುತ್ತ ನಡೆಯುವ ಸಣ್ಣ ಘಟನೆಗಳಲ್ಲೇ ದೊಡ್ಡ ಮೌಲ್ಯಗಳನ್ನು ತುಂಬಿದ್ದಾರೆ. ಪ್ರತಿ ಕಥೆಯೂ ಒಂದೇ ಪುಟದ್ದು ಆದರೆ ಅದರ ಸಾರಾಂಶ ಜೀವನಪೂರ್ತಿ ನೆನಪಿನಲ್ಲಿ ಉಳಿಯುವಂತದ್ದು. ಅದಕ್ಕಾಗಿಯೇ ಇವರ ಪ್ರತಿಯೊಂದು ನ್ಯಾನೋ ಕಥೆಯೂ ಮಹತ್ವದ್ದು. ಮಕ್ಕಳಿಗೆ ನೀತಿ ಕಥೆಯಾಗಿ, ದೊಡ್ಡವರಿಗೆ ಜೀವನ ಪಾಠವಾಗಿ ಈ ಪುಸ್ತಕ ಎಲ್ಲರ ಮನೆ ಸೇರಬೇಕು.
ಮೌಲ್ಯಗಳು ಮರೆಯಾಗುತ್ತಿರುವ ಈ ಹೊತ್ತಿನಲ್ಲಿ, ಹನಿ ಹನಿಯಲ್ಲೇ ಸಾಗರವನ್ನು ತೋರಿಸುವ ಪ್ರಯತ್ನವೇ ಈ ಕೃತಿ. ಆತ್ಮೀಯ ಗುರುಗಳು ನಮಗೆ ಈ ನ್ಯಾನೋ ಕಥಾ ಪುಷ್ಪಮಾಲೆಗೆ ಆಶಯ ನುಡಿ ಬರೆಯುವ ಸೌಭಾಗ್ಯವನ್ನು ಕರುಣಿಸಿದ್ದಾರೆ. ಅವರ ಈ ವಿಶ್ವಾಸಕ್ಕೆ ತುಂಬು ಹೃದಯದ ಧನ್ಯವಾದಗಳು.
ಸಾಗರದಷ್ಟು ದೊಡ್ಡ ವಿಚಾರವನ್ನು ಒಂದು ಹನಿಯಲ್ಲಿ ಇಡುವುದು ಸುಲಭದ ಮಾತಲ್ಲ. ಲೇಖಕರು ಅದನ್ನು ಸಾಧಿಸಿದ್ದಾರೆ. ಇಲ್ಲಿನ ಪ್ರತಿಯೊಂದು ನ್ಯಾನೋ ಕಥೆಯೂ ಚಿಕ್ಕದೆಂದು ಕಂಡರೂ ಅದರೊಳಗೆ ಒಂದು ಬದುಕಿನ ದರ್ಶನವಿದೆ, ಒಂದು ಸಂಸ್ಕಾರದ ಸೌರಭವಿದೆ. ಹೀಗೆ ಪ್ರತಿ ಮುತ್ತು ಒಂದು ಮೌಲ್ಯದ ಪ್ರತಿಬಿಂಬ. ಇವು ಕಥೆಗಳಲ್ಲ, ಕಾಲದ ಅಗತ್ಯತೆಗಳು. ಇಂದಿನ ಮಕ್ಕಳಿಗೆ ದಾರಿದೀಪ, ಹಿರಿಯರಿಗೆ ನೆನಪಿನಂಗಳ. ಈ ಹನಿ ಓದುಗರ ಹೃದಯದಲ್ಲಿ ಸಾಗರವಾಗಲಿ. ಈ ಮೌಲ್ಯದ ಮುತ್ತು ಪ್ರತಿಯೊಬ್ಬರ ಬದುಕಿನಲ್ಲಿ ಮೌಲ್ಯವಾಗಲಿ ಎಂದು ಹೃದಯತುಂಬಿ ಪ್ರಾರ್ಥಿಸುತ್ತೇನೆ. ನಿಮ್ಮ ಈ ಸಾಹಿತ್ಯ ಯಾತ್ರೆಗೆ ನಮ್ಮ ಪ್ರೀತಿಯ ಶುಭಾಶಯಗಳು.
ಇಂದು ಪುಸ್ತಕಗಳು ಬರುತ್ತವೆ, ಹೋಗುತ್ತವೆ. ಆದರೆ ಕೆಲವು ಪುಸ್ತಕಗಳು ಮಾತ್ರ ಮನದಲ್ಲಿ ಉಳಿಯುತ್ತವೆ. ಈ ಕೃತಿ ಮನದಲ್ಲಿ ಉಳಿಯುವoತಹ ಸಾಲಿಗೆ ಸೇರಿದ್ದು. ಇಲ್ಲಿನ ಪ್ರತಿಯೊಂದು ನ್ಯಾನೋ ಕಥೆಯೂ ಒಂದು ಹನಿಯಂತೆ ಚಿಕ್ಕದು, ಆದರೆ ಆ ಹನಿಯೊಳಗೆ ಇಡೀ ಸಾಗರದ ಆಳವಿದೆ. ಅಜ್ಜನ ಪ್ರೀತಿಯಿದೆ, ಅಮ್ಮನ ಮಮತೆಯಿದೆ, ಅಣ್ಣನ ನೆರಳಿದೆ, ಬದುಕು ಕಲಿಸುವ ಪಾಠವಿದೆ. ಈ ಕೃತಿ ಕೇವಲ ಒಂದು ಊರಿಗೆ, ಒಂದು ಜಿಲ್ಲೆಗೆ ಸೀಮಿತವಾಗಬಾರದು. ಇದು ಕನ್ನಡ ನಾಡಿನ ಮನೆಮನೆಗೂ ತಲುಪಬೇಕು. ಶಾಲೆಯ ಮಕ್ಕಳ ಕೈಯಲ್ಲಿ, ಕಾಲೇಜಿನ ಯುವಕರ ಮನದಲ್ಲಿ, ಹಿರಿಯರ ನೆನಪಿನಂಚಿನಲ್ಲಿ ಈ ಮೌಲ್ಯದ ಮುತ್ತುಗಳು ಬೆಳಗಬೇಕು. ಏಕೆಂದರೆ ಇಂದು ನಮಗೆ ಬೇಕಾಗಿರುವುದು ದೊಡ್ಡ ದೊಡ್ಡ ಗ್ರಂಥಗಳಲ್ಲ, ಬದುಕನ್ನು ಬೆಸೆಯುವ ಇಂತಹ ಸಣ್ಣ ಸಣ್ಣ ಮೌಲ್ಯದ ಹನಿಗಳು. ಗುರುಗಳ ಈ ಲೇಖನಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಕೃತಿಗಳು ಹೊರಬರಲಿ. ಈ ಹನಿ ಸಾಗರವಾಗಲಿ, ಈ ಸಾಗರ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಲೆಯಾಗಲಿ ಎಂದು ಮನದುಂಬಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಶುಭವಾಗಲಿ ಗುರುಗಳೇ.
ಕು. ಜ್ಯೋತಿ ಆನಂದ ಚಂದುಕರ ಬಾಗಲಕೋಟ



