ಮಾನ್ವಿ, ಅ.8: ಕಕ್ಷಿದಾರರಿಗೆ ನ್ಯಾಯ ಒದಗಿಸುವ ಜವಾಬ್ದಾರಿಯೊಂದಿಗೆ ನಿರಂತರವಾಗಿ ವೃತ್ತಿಪರ ಚಟುವಟಿಕೆಗಳಲ್ಲಿ ತೊಡಗಿರುವ ವಕೀಲರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲಸದ ಒತ್ತಡದಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಮಾನ್ವಿಯ ಹಿರಿಯ ಶ್ರೇಣಿ ನ್ಯಾಯಾಧೀಶ ಕಂಚಿ ಮಾಯಣ್ಣ ಗೌತಮ್ ಸಲಹೆ ನೀಡಿದರು.
ಪಟ್ಟಣದ ವಕೀಲರ ಸಂಘ, ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ಬೆಂಗಳೂರಿನ ಸ್ವಾಸ್ತ್ಯ ಆರೋಗ್ಯ ಕ್ಲಿನಿಕ್ ಸಹಯೋಗದಲ್ಲಿ ವಕೀಲರ ಸಂಘದ ಸದಸ್ಯರಿಗಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಕಾನೂನಾತ್ಮಕ ಪರಿಹಾರ ಒದಗಿಸುವುದು, ಕಕ್ಷಿದಾರರ ಹಿತಾಸಕ್ತಿ ಕಾಪಾಡುವುದು ಹಾಗೂ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸುವಂತಹ ಹಲವು ಜವಾಬ್ದಾರಿಗಳನ್ನು ವಕೀಲರು ನಿರ್ವಹಿಸುತ್ತಾರೆ. ಈ ಕಾರ್ಯಗಳ ನಡುವೆ ವೈಯಕ್ತಿಕ ಆರೋಗ್ಯದ ಕಡೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದು ತಿಳಿಸಿದರು.
ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ವೃತ್ತಿಪರ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಆದ್ದರಿಂದ ವಕೀಲರು ತಮ್ಮ ದಿನನಿತ್ಯದ ಕೆಲಸಗಳ ಜೊತೆಗೆ ಆರೋಗ್ಯ ರಕ್ಷಣೆಗೆ ಅಗತ್ಯ ಸಮಯ ಮೀಸಲಿಡಬೇಕು. ನಿಯಮಿತ ವೈದ್ಯಕೀಯ ತಪಾಸಣೆಯಿಂದ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ನ್ಯಾಯಾಧೀಶ ಕಂಚಿ ಮಾಯಣ್ಣ ಗೌತಮ್ ಅವರು ಸ್ವತಃ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ ಆನಂದ್ ಕೊಣ್ಣೂರ್, ಮಾನ್ವಿ ವಕೀಲರ ಸಂಘದ ಅಧ್ಯಕ್ಷ ರವಿಕುಮಾರ್ ಪಾಟೀಲ್, ಉಪಾಧ್ಯಕ್ಷ ವಿಶ್ವನಾಥ್ ರಾಯಪ್ಪ, ಹಿರಿಯ ವಕೀಲರಾದ ಬಿ.ಕೆ. ಅಮರೇಶಪ್ಪ, ಅಯ್ಯಪ್ಪ ನಾಯಕ, ಶ್ರೀನಿವಾಸ್ ರಾವ್ ಕುಲಕರ್ಣಿ, ಡಿ. ರವಿಕುಮಾರ್, ಅರವಿಂದ್ ದೇಸಾಯಿ ಸೇರಿದಂತೆ ವಕೀಲರ ಸಂಘದ ಸದಸ್ಯರು ಹಾಗೂ ನ್ಯಾಯಾಲಯದ ಸಿಬ್ಬಂದಿ ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯ ಪಡೆದುಕೊಂಡರು.



