ದೇವದುರ್ಗ, ಅ.8: ರಾಯಚೂರು ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್ ಗಲಗ್ ಅವರನ್ನು ದಿಢೀರ್ ವರ್ಗಾವಣೆ ಮಾಡಿರುವ ಕ್ರಮದ ಹಿಂದೆ ರಾಜಕೀಯ ಒತ್ತಡ ಹಾಗೂ ಪ್ರಭಾವಿ ನಾಯಕರ ಹಸ್ತಕ್ಷೇಪವಿರುವ ಅನುಮಾನ ವ್ಯಕ್ತವಾಗುತ್ತಿದೆ. ಸರ್ಕಾರ ಕೂಡಲೇ ವರ್ಗಾವಣೆ ಆದೇಶವನ್ನು ಹಿಂಪಡೆಯದಿದ್ದರೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ವಿಶ್ವನಾಥ್ ಬಲ್ಲಿದವ್ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೆಂಕಟೇಶ್ ಗಲಗ್ ಅವರ ವರ್ಗಾವಣೆ ಆದೇಶ ಹೊರಡಿಸಿರುವ ಸಂದರ್ಭ, ಅದರ ಹಿಂದಿನ ಕಾರಣಗಳು ಹಾಗೂ ಅನುಸರಿಸಿರುವ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಗಮನಿಸಿದರೆ ಹಲವು ಅನುಮಾನಗಳು ಮೂಡುತ್ತವೆ. ಈ ವರ್ಗಾವಣೆಯು ನಿಯಮಾನುಸಾರ ನಡೆದಿದೆಯೇ ಅಥವಾ ರಾಜಕೀಯ ಒತ್ತಡಕ್ಕೆ ಮಣಿದು ಕೈಗೊಂಡ ನಿರ್ಧಾರವೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಪ್ರಸ್ತುತ ಪದವೀಧರರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಅಧಿಕಾರಿಯೊಬ್ಬರನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ಪ್ರಶ್ನಾರ್ಹವಾಗಿದೆ. ಚುನಾವಣಾ ಪ್ರಕ್ರಿಯೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಅಧಿಕಾರಿಗಳ ವರ್ಗಾವಣೆಗೆ ಚುನಾವಣಾ ಆಯೋಗದ ಪೂರ್ವಾನುಮತಿ ಅಗತ್ಯವಿರುವ ನಿಯಮಗಳಿವೆ. ಹೀಗಿರುವಾಗ ವೆಂಕಟೇಶ್ ಗಲಗ್ ಅವರ ವರ್ಗಾವಣೆಗೆ ಯಾವ ಆಧಾರದಲ್ಲಿ ಆದೇಶ ಹೊರಡಿಸಲಾಗಿದೆ? ಚುನಾವಣಾ ಆಯೋಗದಿಂದ ಅನುಮತಿ ಪಡೆಯಲಾಗಿದೆಯೇ ಎಂಬುದನ್ನು ಸಂಬಂಧಪಟ್ಟವರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಮಾತೃ ಇಲಾಖೆಯನ್ನು ಬಿಟ್ಟು ನಿಯೋಜನೆ ಆಧಾರದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿದ್ದಾರೆ. ಅಂತಹವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ, ವೆಂಕಟೇಶ್ ಗಲಗ್ ಅವರನ್ನು ಮಾತ್ರ ಈ ಸಂದರ್ಭದಲ್ಲಿ ವರ್ಗಾವಣೆ ಮಾಡಿರುವುದೇಕೆ? ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸರ್ಕಾರ ಎಲ್ಲರಿಗೂ ಒಂದೇ ರೀತಿಯ ನಿಯಮಗಳನ್ನು ಅನ್ವಯಿಸಬೇಕು ಎಂದು ಪ್ರಶ್ನಿಸಿದರು.

ವೆಂಕಟೇಶ್ ಗಲಗ್ ಅವರು ತಮ್ಮ ಕರ್ತವ್ಯದ ಅವಧಿಯಲ್ಲಿ ವಿವಿಧ ತಾಲೂಕುಗಳ ಸಣ್ಣ ಗುತ್ತಿಗೆದಾರರಿಗೆ ಕೆಲಸದ ಅವಕಾಶ ದೊರೆಯುವಂತೆ ಸಹಕರಿಸಿದ್ದಾರೆ. ಇದರಿಂದ ಅನೇಕ ಸಣ್ಣ ಗುತ್ತಿಗೆದಾರರು ಜೀವನೋಪಾಯ ಕಂಡುಕೊಳ್ಳುತ್ತಿದ್ದಾರೆ. ಇಂತಹ ಅಧಿಕಾರಿಯ ವರ್ಗಾವಣೆಯ ಹಿಂದೆ ರಾಜಕೀಯ ಕಾರಣಗಳಿದ್ದರೆ ಅದು ಸರಿಯಾದ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.

ವೆಂಕಟೇಶ್ ಗಲಗ್ ಅವರು ದೇವದುರ್ಗ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಎಲ್ಲಿಯೂ ಅಧಿಕೃತವಾಗಿ ಘೋಷಿಸಿಲ್ಲ. ಆದರೂ ಅವರ ಬಗ್ಗೆ ಕೆಲವರಿಗೆ ಆತಂಕವೇಕೆ ಎಂಬುದು ಅರ್ಥವಾಗುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಹಕ್ಕು ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಇದೆ. ಯಾರನ್ನು ಗೆಲ್ಲಿಸಬೇಕು ಅಥವಾ ಸೋಲಿಸಬೇಕು ಎಂಬ ಅಂತಿಮ ನಿರ್ಧಾರವನ್ನು ಮತದಾರರೇ ಕೈಗೊಳ್ಳುತ್ತಾರೆ. ಹೀಗಿರುವಾಗ ರಾಜಕೀಯ ದ್ವೇಷವನ್ನು ಮುಂದಿಟ್ಟುಕೊಂಡು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಹೇಳಿದರು.

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ವೈಯಕ್ತಿಕ ದ್ವೇಷವೇ ರಾಜಕೀಯದ ಮುಖ್ಯ ಉದ್ದೇಶವಾಗಬಾರದು. ಜನಪ್ರತಿನಿಧಿಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗುವುದಕ್ಕಿಂತ ಕ್ಷೇತ್ರದ ಅಭಿವೃದ್ಧಿ, ಸಾರ್ವಜನಿಕ ಸಮಸ್ಯೆಗಳ ಪರಿಹಾರ ಹಾಗೂ ಜನರ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ವೆಂಕಟೇಶ್ ಗಲಗ್ ಅವರ ವರ್ಗಾವಣೆಗೆ ಸಂಬಂಧಿಸಿದಂತೆ ಸರ್ಕಾರ ಮರುಪರಿಶೀಲನೆ ನಡೆಸಿ ಆದೇಶವನ್ನು ತಕ್ಷಣ ರದ್ದುಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ವಿಶ್ವನಾಥ್ ಬಲ್ಲಿದವ್ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಂಗಪ್ಪ ಗೋಸಲ್, ಮಾನಶಯ್ಯ, ಗುಂಡಪ್ಪ ನಾಯಕ್, ಬಾಬು ಗೌರಂಪೇಟೆ, ಬಾಬು ಕವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.