ಲಿಂಗಸುಗೂರು: ತಾಲೂಕಿನಲ್ಲಿ ರೈತರು ಬರ, ಬೆಳೆ ನಷ್ಟ, ಬೆಳೆ ವಿಮೆ ಬಾಕಿ, ವಿದ್ಯುತ್ ಕೊರತೆ ಹಾಗೂ ಕೃಷಿ ಪರಿಕರಗಳ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳಿಂದ ಸಂಕಷ್ಟದಲ್ಲಿದ್ದು, ಸರ್ಕಾರ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸಣ್ಣ ನೀರಾವರಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಕಬ್ಬು ಬೆಳೆಗಾರರು ಸೂಕ್ತ ಬೆಲೆ ಸಿಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕಬ್ಬಿಗೆ ಪ್ರತಿ ಕ್ವಿಂಟಲ್‌ಗೆ ₹3,300ರಿಂದ ₹6,300ರವರೆಗೆ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕಳೆದ ನಾಲ್ಕೈದು ವರ್ಷಗಳಿಂದ ರೈತರು ನಿಯಮಿತವಾಗಿ ಬೆಳೆ ವಿಮೆ ಪಾವತಿಸುತ್ತಿದ್ದರೂ, ಹಲವರಿಗೆ ಇನ್ನೂ ವಿಮಾ ಪರಿಹಾರ ದೊರೆತಿಲ್ಲ. ಸಂಬಂಧಪಟ್ಟ ವಿಮಾ ಕಂಪನಿಗಳಿಂದ ಬಾಕಿ ಇರುವ ವಿಮಾ ಮೊತ್ತವನ್ನು ಕೂಡಲೇ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬರ ಹಾಗೂ ಮಳೆಯ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಎಕರೆಗೆ ₹25 ಸಾವಿರದಂತೆ ಪರಿಹಾರ ನೀಡಬೇಕು. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿದಿನ ಕನಿಷ್ಠ 10 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು. ತಾಲೂಕಿನಲ್ಲಿ ತೋಟ ಹಾಗೂ ದೊಡ್ಡಿಗಳಲ್ಲಿರುವ ಮನೆಗಳಿಗೆ ಸಿಂಗಲ್‌ಫೇಸ್ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

ರಸಗೊಬ್ಬರ, ಕೀಟನಾಶಕ ಸೇರಿದಂತೆ ಕೃಷಿಗೆ ಅಗತ್ಯವಿರುವ ಪರಿಕರಗಳ ಬೆಲೆ ಏರಿಕೆಯಿಂದ ರೈತರ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. ಇವುಗಳ ದರವನ್ನು ನಿಯಂತ್ರಿಸಿ ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಕೆ ಮಾಡುವುದು ಹಾಗೂ ಕಾಳಸಂತೆ ವ್ಯಾಪಾರ ನಡೆಸುವವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶಿವರಾಜ ಗೌಡೂರು, ತಿಮ್ಮಪ್ಪ ಪೂಜಾರಿ, ರಂಗಪ್ಪ, ದುರಗಪ್ಪ ಪೂಲಭಾವಿ, ಬಾಲಯ್ಯ, ಹನುಮಂತ ಪರಾಂಪೂರ, ತಿಮ್ಮಪ್ಪ ಮಾನ್ವಿ, ಆದಪ್ಪ, ಬಸಪ್ಪ ದೊಡ್ಡಮನಿ, ಶಿವಪ್ಪ ಬಡಿಗೇರ, ಲಕ್ಷ್ಮಣ, ದುರಗಪ್ಪ, ದಾವಲಸಾಬ್, ಹನುಮಂತ, ಅಯ್ಯಪ್ಪ, ಅಮರಗುಂಡಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.