ಇತ್ತೀಚೆಗೆ ಮನೆ ಕೆಲಸದ ಹೆಣ್ಣು ಮಕ್ಕಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಾನು ನೋಡಿದ ವಿಡಿಯೋ ಒಂದರಲ್ಲಿ ಮನೆ ಕೆಲಸದ ಹೆಣ್ಣು ಮಕ್ಕಳು ತೋರುವ ದಿಮಾಕಿನ ಕುರಿತು ಹೇಳಲಾಗಿತ್ತು. ಕೆಲಸದ ಹೆಣ್ಣು ಮಕ್ಕಳನ್ನು ಟೀಕಿಸುತ್ತಾ ಅವರು ಮಾಡುವ ಕೆಲಸವನ್ನು ಹೊರತುಪಡಿಸಿ ಹೆಚ್ಚಿನ ಕೆಲಸವನ್ನು ಅವರು ಮಾಡುವುದಿಲ್ಲ ಎಂಬುದರ ಕುರಿತು ಅತ್ಯಂತ ವ್ಯಂಗವಾಗಿ ಹೀಯಾಳಿಸಲಾಗಿತ್ತು.
ಹೀಗೊಂದು ಕಥೆಯ ಮೂಲಕ ನಾನು ನಿಮಗೆ ಕೆಲವು ಇತಿಮಿತಿಗಳನ್ನು ವಿವರಿಸಿದ್ದೇನೆ. ಆ ಹೆಣ್ಣು ಮಗಳು ಕಳೆದ ಹಲವಾರು ವರ್ಷಗಳಿಂದ ಅವರ ಮನೆಯಲ್ಲಿ ಕಸ ಹೊಡೆಯುವ ನೆಲ ಒರೆಸುವ, ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಸಿಕೊಂಡವಳಾಗಿದ್ದಳು. ಪ್ರತಿದಿನ ನಿಗದಿತ ಸಮಯಕ್ಕೆ ಅವರ ಮನೆಗೆ ಬಂದು ಪಾತ್ರೆಗಳನ್ನು ಹಿತ್ತಲಿಗೆ ಕೊಂಡೊಯ್ಡು ನೀರು ಹಾಕಿ ನೆನೆಯಲು ಬಿಡುತ್ತಿದ್ದಳು.
ನಂತರ ಮನೆಯ ಒಳಗಿನ ಎಲ್ಲ ಭಾಗವನ್ನು ಸ್ವಚ್ಛವಾಗಿ ಕಸಗುಡಿಸಿ ನೆಲ ಒರೆಸುತ್ತಿದ್ದಳು. ತದನಂತರ ಪಾತ್ರೆಗಳನ್ನು ಚೆನ್ನಾಗಿ ತಿಕ್ಕಿ ತೊಳೆದು ನಿಗದಿತ ಬುಟ್ಟಿಯಲ್ಲಿ ಇರಿಸಿ ತಾನು ಬಳಸಿದ ಆ ಪುಟ್ಟ ಯುಟಿಲಿಟಿ ಏರಿಯಾ ವನ್ನು ಸ್ವಚ್ಛಗೊಳಿಸುತ್ತಿದ್ದಳು. ಇದಿಷ್ಟು ಆಕೆಗೆ ಪ್ರತಿದಿನ ಮಾಡಲೇಬೇಕೆಂದು ನಿಗದಿಗೊಳಿಸಿದ ಕೆಲಸ. ಅದೊಂದು ರವಿವಾರದ ದಿನ ದೀಪಾವಳಿಗಾಗಿ ಮನೆ ಸ್ವಚ್ಛತೆ ಕಾರ್ಯವನ್ನು ಕೈಗೊಂಡಿದ್ದ ಮನೆಯ ಯಜಮಾನಿ ಕೆಲಸದ ಹೆಣ್ಣು ಮಗಳಿಗೆ ತುಸು ತಡವಾಗಿ ಬರಲು ಹೇಳಿದ್ದರು ಮನೆಯ ಮೂಲೆ ಮೂಲೆಗಳಲ್ಲಿ ಕಟ್ಟಿಕೊಂಡಿದ್ದ ಜೇಡರ ಬಲೆಗಳನ್ನು ಸ್ವಚ್ಛಗೊಳಿಸಿ ಕಿಟಕಿ ಬಾಗಿಲುಗಳನ್ನು ವರೆಸಿ ಕಿಟಕಿಗೆ ಹಾಗೂ ಬಾಗಿಲಿಗೆ ಹಾಕಿದ ಎಲ್ಲಾ ಕರ್ಟನ್ ಗಳನ್ನು ಬೆಡ್ ಶೀಟ್ ಗಳನ್ನು ವಾಷಿಂಗ್ ಮಷೀನ್ ಗೆ ಹಾಕಿ ಸ್ವಚ್ಛಗೊಳಿಸಲು ಬಟನ್ ಒತ್ತುವ ಸಮಯಕ್ಕೆ ಕೆಲಸದಾಕೆ ಬಂದಳು.
ಸರಿಯಾದ ಸಮಯಕ್ಕೆ ಬಂದ ಕೆಲಸದಾಕೆಯನ್ನು ಮನಸ್ಸಿನಲ್ಲಿ ಮೆಚ್ಚಿಕೊಂಡ ಮನೆಯ ಯಜಮಾನಿ ಆಕೆ ಪಾತ್ರೆಗಳನ್ನು ನೆನೆ ಇಡುವ ಹೊತ್ತಿಗೆ ಪ್ರತಿದಿನದ ವಾಡಿಕೆಯಂತೆ ಆಕೆಗೆ ಒಂದು ಕಪ್ ಚಹಾ ಮಾಡಿಕೊಟ್ಟರು. ಯಜಮಾನಿ ಕೊಟ್ಟ ಚಹಾವನ್ನು ಕುಡಿದ ಕೆಲಸದ ಹೆಣ್ಣು ಮಗಳು ಮನೆಯ ಸ್ವಚ್ಛತೆಯಿಂದಾಗಿ ಉಂಟಾದ ಹೆಚ್ಚುವರಿ ಕಸವನ್ನು ಚೆನ್ನಾಗಿ ಗುಡಿಸಿ ನೆಲವನ್ನು ವರೆಸಿದಳು.
ಮನೆಯ ಯಜಮಾನಿ ಕೆಲಸದಾಕೆಯನ್ನು ಕುರಿತು ಮನೆಯ ಬಚ್ಚಲು, ಅಡುಗೆ ಕೋಣೆ ಹಾಗೂ ತಲೆಬಾಗಿಲುಗಳಲ್ಲಿ ಹಾಕಿದ ಕಾಲೊರೆಸುವ ಮ್ಯಾಟ್ ಗಳನ್ನು ನೆನೆಸಿ ಇಟ್ಟಿದ್ದೇನೆ. ಅವುಗಳನ್ನು ಮಿಷಿನ್ ಗೆ ಹಾಕಲು ಸಾಧ್ಯವಿಲ್ಲ ಒಗೆದು ಕೊಡ್ತೀಯಾ ಎಂದು ಕೇಳಿದರು.
ಆಗ ಕೆಲಸದಾಕೆ ಸರಾಸಗಟಾಗಿ ಮನೆಯ ಯಜಮಾನಿಯನ್ನು ಕುರಿತು ಅಕ್ಕ ನೀವು ಮೊದಲೇ ಹೇಳಿದ್ದರೆ ನಾನು ಒಂದಷ್ಟು ಸಮಯ ಮಿಗಿಸಿಕೊಂಡು ಬರುತ್ತಿದ್ದೆ ನನಗೆ ಇನ್ನೂ ಎರಡು ಮನೆಗಳಿಗೆ ಹೋಗುವುದಿದೆ... ಆದ್ದರಿಂದ ಮ್ಯಾಟ್ ಗಳನ್ನು ಒಗೆಯಲು ಸಾಧ್ಯವಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದಳು.
ಬಹುಶಹ ತಾನು ಯಜಮಾನಿ ಆಕೆ ಮನೆ ಕೆಲಸದಾಕೆ... ತನ್ನ ಮಾತನ್ನು ಆಕೆ ಕೇಳಲೇಬೇಕು ಎಂಬ ಭಾವವನ್ನು ಹೊಂದಿದ್ದ ಮಹಿಳೆಗೆ ಕೆಲಸದಾಕೆ ನೀಡಿದ ಉತ್ತರದಿಂದ ಆಕೆಯ ಅಹಂ ಭಾವಕ್ಕೆ ಪೆಟ್ಟು ಬಿದ್ದಂತೆ ಭಾಸವಾಯಿತು.
ಕೆಲಸದಾಕೆ ತನ್ನೆಲ್ಲ ಕೆಲಸ ಮುಗಿಸಿ ಹೊರಟು ಹೋದರೂ ಕೂಡ ಈಕೆಯ ಸಿಟ್ಟು ಅಸಹನೆ ಕಡಿಮೆಯಾಗಿರಲಿಲ್ಲ. ಅಂತೆಯೇ ಆಕೆಯ ಮೇಲಿನ ಎಲ್ಲ ಸಿಟ್ಟನ್ನು ಕಾಲೊರೆಸುವ ಮ್ಯಾಟ್ ಗಳ ಮೇಲೆ ಹಾಕಿದಳು. ಆ ಮ್ಯಾಟ್ ಗಳನ್ನು ಚೆನ್ನಾಗಿ ಎತ್ತಿ ಒಗೆದು ಸ್ವಚ್ಛ ಮಾಡಿ ಹಿಂಡಿ ಒಣ ಹಾಕುವುದರಲ್ಲಿ ಆಕೆಗೆ ಸಾಕಾಗಿ ಹೋಯಿತು. ಸಾಯಂಕಾಲ ಗಂಡ ಮನೆಗೆ ಬಂದಾಗ ಆತನಿಗೆ ತಿಂಡಿ ನೀಡಿ ಕಾಫಿ ಕುಡಿಯಲು ಕೊಟ್ಟ ಆಕೆ ತಾನೂ ಒಂದು ಕಪ್ ಕೈಯಲ್ಲಿ ಹಿಡಿದು ಕುಳಿತಾಗ ಏನಾಯಿತು? ಎಂಬಂತೆ ಗಂಡ ಆಕೆಯ ಮುಖವನ್ನು ನೋಡಿದ.
ಇದಕ್ಕಾಗಿಯೇ ಕಾದಿದ್ದೆ ಎಂಬಂತೆ ಆಕೆ ನಡೆದ ಘಟನೆಯನ್ನು ಹೇಳಿ ಅಲ್ಲ ನಾನು ಆಕೆಗೆ ಬಂದ ಕೂಡಲೇ ಟೀ ಮಾಡಿಕೊಡುತ್ತೇನೆ ಹಬ್ಬ ಹರಿದಿನಗಳಲ್ಲಿ ನಾನು ಮಾಡಿರುವ ಸ್ವೀಟ್ ಹಾಗೂ ಖಾರದ ತಿಂಡಿಗಳನ್ನು ಕೊಡುತ್ತೇನೆ. ವರ್ಷಕ್ಕೊಮ್ಮೆ ದೀಪಾವಳಿ ಹಬ್ಬಕ್ಕೆ ಉಡಲೆಂದು ಹೊಸ ಸೀರೆ ಕೊಡುತ್ತೇನೆ.... ಆಕೆ ರಜೆ ಮಾಡಿದಾಗ ಕೂಡ ಆಕೆಯ ತಿಂಗಳ ಸಂಬಳದ ಹಣವನ್ನು ಕಟ್ ಮಾಡುವುದಿಲ್ಲ. ಅಂತದ್ದರಲ್ಲಿ ಇವತ್ತು ನಾನು ಒಂದಷ್ಟು ಮ್ಯಾಟ್ ಗಳನ್ನು ತೊಳೆದು ಕೊಡಲು ಕೇಳಿದಾಗ ಆಕೆ ನನಗೆ ಆಗುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದಳು ಅದೆಷ್ಟು ಸೊಕ್ಕು ನೋಡಿ ಆಕೆಗೆ ಎಂದು ಪತಿಯ ಮುಂದೆ ದೂರಿದಳು.
ಆಕೆಯ ಮಾತನ್ನು ಕೇಳಿ ಆಕೆಯ ಗಂಡ ಆತ್ಮೀಯವಾಗಿ ಆಕೆಯ ಎರಡು ಕೈಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಹೇಳಿದ. ನಿನ್ನ ಬೇಸರ ನನಗೆ ಅರ್ಥವಾಗುತ್ತದೆ ಆದರೆ ನೀನು ಕೂಡ ಕೊಂಚ ಯೋಚಿಸು. ಆಕೆಗೆ ಚಹಾ ತಿಂಡಿ ಕೊಡುವುದು ನಿನ್ನದೇ ಆಯ್ಕೆಯಾಗಿತ್ತೇ ಹೊರತು ಕಡ್ಡಾಯವಾಗಿರಲಿಲ್ಲ ಆದರೂ ನೀನು ಆಕೆಗೆ ಚಹಾ ತಿಂಡಿ ಕೊಡುವುದನ್ನು ಮಾಡಿದೆ. ಈಗ ಹೇಳು ಆಕೆ ಎಂದಾದರೂ ನಿನಗೆ ಚಹಾ ಕೊಟ್ಟಿಲ್ಲ ತಿಂಡಿಯನ್ನು ಕೊಟ್ಟಿಲ್ಲ ಎಂದು ಕೇಳಿದ್ದಾಳೆಯೇ? ಪತಿಯ ಮಾತನ್ನು ಕೇಳಿ ಕೆಲ ಕ್ಷಣಗಳ ಕಾಲ ಗಂಭೀರವಾಗಿ ಯೋಚಿಸಿದ ಪತ್ನಿ ಹೌದು ರೀ ಆಕೆ ನಾನಾಗಿಯೇ ಕೊಟ್ಟರೆ ಚಹಾ ಕುಡಿಯುತ್ತಿದ್ದಳು ಹೊರತು ತಾನಾಗಿ ಎಂದೂ ಕೇಳಿಲ್ಲ.. ಬಟ್ಟೆನಾದರೂ ಅಷ್ಟೇ . ಮನೆಗೆ ಆಗಾಗ ಅತಿಥಿಗಳು ಬಂದರೆ ಕೂಡ ಆಕೆ ಕಿರಿಕಿರಿ ಮಾಡಿಲ್ಲ. ಆದರೆ ನಾನೇ ಆ ಸಮಯದಲ್ಲಿ ಹಣದ ಬದಲಾಗಿ ಆಕೆಗೆ ನಿಮ್ಮ ಹಳೆಯ ಶರ್ಟು , ಪ್ಯಾಂಟ್, ನನ್ನ ಕುರ್ತಾ ಮತ್ತೆ ಮಕ್ಕಳ ಬಟ್ಟೆಗಳನ್ನು ಕೊಡ್ತಾ ಇದ್ದೆ.
ನೋಡಿದೆಯಾ ಇಲ್ಲೇ ಆಕೆಯ ಸ್ವಾಭಿಮಾನ ಇರೋದು.... ಸಂಬಳದ ಹೊರತಾಗಿ ತಾನಾಗಿ ಏನನ್ನು ಕೇಳದ ಆಕೆ ತನ್ನ ಸುತ್ತ ಒಂದು ಮಿತಿಯನ್ನು ಹಾಕಿಕೊಂಡಿದ್ದಾಳೆ... ಹಾಗೆಯೇ ನೀನು ಕೂಡ ಅ ಮಿತಿಯನ್ನು ಅತಿಕ್ರಮಿಸದಿರಲಿ ಎಂಬಂತೆ ಹೆಚ್ಚಿನ ಕೆಲಸವನ್ನ ಮಾಡಲು ನಿರಾಕರಿಸಿದ್ದಾಳೆ.... ಅದೂ ಅಲ್ಲದೆ ಆಕೆ ನಮ್ಮ ಮನೆ ಅಲ್ಲದೆ ಇನ್ನು ಕೆಲವು ಮನೆಗಳನ್ನು ಮಾಡುತ್ತಿರಬಹುದು ಅಲ್ವೇ? ಆ ಮನೆಗಳಿಗೆ ಹೋಗಲು ತಡವಾಗಬಹುದು ಎಂಬುದು ಕೂಡ ಒಂದು ಕಾರಣ ಅಲ್ವೇ? ನಿಜಾ ರೀ ! ಆಕೆ ಯಾವತ್ತೂ ತನ್ನ ಲಿಮಿಟ್ ನ ಕ್ರಾಸ್ ಮಾಡಿಲ್ಲ... ಬಹುಶಹ ನನ್ನ ಮಾತನ್ನು ಸಾರಾಸಗಟಾಗಿ ತಿರಸ್ಕರಿಸಿದ ಕಾರಣ ನನ್ನ ಅಹಂ ಭಾವಕ್ಕೆ ಪೆಟ್ಟು ಬಿದ್ದ ಹಾಗೆ ಅನಿಸ್ತು ಅದಕ್ಕೆ ನಾನು ಇಷ್ಟೊಂದು ತೀವ್ರವಾಗಿ ರಿಯಾಕ್ಟ್ ಮಾಡ್ತಾ ಇದೀನಿ ಅನ್ಸುತ್ತೆ.
ಇದರಲ್ಲಿ ನನ್ನದೂ ತಪ್ಪಿದೆ. ಅಕಸ್ಮಾತ್ ನಮ್ಮ ಮನೆಗೆ ತಡವಾಗಿ ಬಂದಾಗ ನಾನು ಬೇಸರ ಮಾಡಿಕೊಳ್ಳುವೆ ಹಾಗೆಯೇ ಉಳಿದ ಮನೆಯವರು ಕೂಡ ಬೇಸರ ಮಾಡಿಕೊಳ್ಳಬಹುದು ಎಂದು ಆಕೆ ಹಾಗೆ ಮಾಡಿರಬಹುದು ಎಂಬ ಸಣ್ಣ ಸೂಕ್ಷ್ಮದರ್ ಅರಿವು ನನಗೆ ಆಗಲೇ ಇಲ್ಲ.
ಅದಕ್ಕೆ ನಿನ್ನನ್ನು ಜಾಣೆ ಅನ್ನೋದು.... ಬಹಳ ಬೇಗ ನೀನು ಅರ್ಥ ಮಾಡಿಕೊಂಡೆ ಎಲ್ಲರಿಗೂ ಬದುಕಿನಲ್ಲಿ ಅವರವರದ್ದೇ ಆದ ಆದ್ಯತೆಗಳು ಇರುತ್ತವೆ. ತಮ್ಮ ಬದುಕನ್ನು ನಡೆಸಲು ಅವರು ನಮ್ಮ ಮನೆಗಳಲ್ಲಿ ಕೆಲಸ ನಿರ್ವಹಿಸುತ್ತಾರೆ ಅಂತೆಯೇ ನಮ್ಮ ಬದುಕು ಕೂಡ ಅವರಿಂದಲೇ ಸರಾಗವಾಗಿ ಸಾಗುತ್ತದೆ ಎಂಬುದು ನಮಗೆ ನೆನಪಿರಬೇಕು.
ನೀನೇ ಯೋಚನೆ ಮಾಡು ಅಕಸ್ಮಾತ್ ಒಂದು ದಿನ ಆಕೆ ಕೆಲಸಕ್ಕೆ ಬರದೇ ಹೋದರೆ ನಮ್ಮ ಮನೆಯ ಇಡೀ ವ್ಯವಸ್ಥೆ ಅಲ್ಲೋಲ್ಲ ಕಲ್ಲೋಲವಾಗಿ ಹೋಗುತ್ತದೆ. ಅವರು ಆರ್ಥಿಕವಾಗಿ ನಮ್ಮ ಮೇಲೆ ಡಿಪೆಂಡ್ ಆಗಿದ್ದರೆ ನಾವು ಕೆಲಸದ ವಿಷಯದಲ್ಲಿ ಸಂಪೂರ್ಣವಾಗಿ ಅವರ ಮೇಲೆ ಡಿಪೆಂಡ್ ಆಗಿರುತ್ತೇವೆ.... ಎಂದು ಪತಿ ಮುಂದುವರೆಸಿದ.
ಪತಿಯ ಮಾತನ್ನು ಅರ್ಧ ಕ್ಕೆ ತಡೆದ ಪತ್ನಿ ಅವರ ಅನಿವಾರ್ಯತೆಯನ್ನು ನಾವು ನಮ್ಮ ಶಕ್ತಿಯನ್ನಾಗಿಸಿಕೊಳ್ಳಬಾರದು.. ಅಷ್ಟೇ ಅಲ್ವ ನೀವು ಹೇಳೋದು ಎಂದು ಕೇಳಲು ಇಬ್ಬರು ಜೋರಾಗಿ ನಕ್ಕರು.. ಹೌದಲ್ವೇ ಸ್ನೇಹಿತರೇ? ಕೆಲಸದವರು ನಮ್ಮ ಸಹಾಯಕರು. ನಾವು ಪರಸ್ಪರಾವಲಂಬಿಗಳು. ಒಂದೇ ಒಂದು ದಿನ ಆ ಕೆಲಸದವರು ಕೆಲಸಕ್ಕೆ ಬರದೇ ಹೋದರೆ ನಮ್ಮ ಯೋಜಿತ ಕೆಲಸಗಳೆಲ್ಲ ಅಲ್ಲೋಲಕಲ್ಲೋಲ್ಲವಾಗಿ ನಮ್ಮ ಇಡೀ ದಿನಚರಿ ಅಸ್ತವ್ಯಸ್ತವಾಗುತ್ತದೆ. ನಿಜ ಹೇಳಬೇಕೆಂದರೆ ನಮ್ಮ ಬದುಕನ್ನು ಅವರು ಹಾಗೂ ಅವರ ಬದುಕನ್ನು ನಾವು ಸರಾಗವಾಗಿ ಸಾಗಿಸಲು ಪರಸ್ಪರದ ಮೇಲೆ ಅವಲಂಬಿತರು..... ಆದ್ದರಿಂದ ಮಾನವೀಯ ನೆಲೆಯಲ್ಲಿ ಯೋಚಿಸೋಣ. ಅವರ ಕಷ್ಟಗಳ ಕಾವಿನ ಝಳ ನಮಗೆ ತಾಕದೆ ಇರಬಹುದು... ಆದರೆ ಅದರ ಅನುಭೂತಿಯನ್ನು ಕಡೆಗಾಣಿಸದಷ್ಟು ಸಹೃದಯತೆ ನಮ್ಮಲ್ಲಿರಲಿ. ಏನಂತೀರಾ??
ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ ಗದಗ್



