ಮೌನದಲ್ಲೇ ಮಹಾ ಯಜ್ಞ ಮಾಡುವ ಸಾಹಿತಿಗಳಲ್ಲಿ ಎಸ್. ವಿ. ಶಾಂತಕುಮಾರ ಸರ್ ಅವರು ಒಬ್ಬರು. ಮಾತು ಕಡಿಮೆ, ಸಾಧನೆ ಹೆಚ್ಚು ಎಂಬ ಮಾತಿಗೆ ಜೀವಂತ ನಿದರ್ಶನ ಅವರು. ಇವರು ಕೇವಲ ಲೇಖಕರಲ್ಲ. ಅವರು ಕಲೆಯ ಸಪ್ತಸ್ವರ. ಕವನದಲ್ಲಿ ಭಾವದ ಕಂಪನ, ಲೇಖನದಲ್ಲಿ ಚಿಂತನೆಯ ಚಾಣಾಕ್ಷತೆ, ಕಾದಂಬರಿಯಲ್ಲಿ ಜೀವನದ ಆಳ, ನಾಟಕದಲ್ಲಿ ರಂಗದ ರಂಗೇಳಿತ, ರಂಗಭೂಮಿಯಲ್ಲಿ ಅಭಿನಯದ ಅಮೃತ ಎಲ್ಲವೂ ಅವರಲ್ಲಿ ಒಂದಾಗಿದೆ.

ರಾಜ್ಯಮಟ್ಟದಲ್ಲಿ 30 ಕ್ಕೂ ಹೆಚ್ಚು, ರಾಷ್ಟ್ರಮಟ್ಟದಲ್ಲಿ 2 ಪ್ರಶಸ್ತಿಗಳು. 2024 ರಲ್ಲಿ ಜಗಳೂರು ತಾಲೂಕಿನ ರಾಜ್ಯೋತ್ಸವ ಪ್ರಶಸ್ತಿ. KSRTC ಯಲ್ಲಿ ಬೆಳ್ಳಿಪದಕ. ಆನ್‌ಲೈನ್ ವೇದಿಕೆಯಲ್ಲಿ 2000 ಕ್ಕೂ ಹೆಚ್ಚು ಕವನಗಳಿಗೆ ಪ್ರಶಸ್ತಿ. ಆದರೆ ಈ ಪ್ರಶಸ್ತಿಗಳು ಅವರ ಗುರಿಯಲ್ಲ, ಅವರ ಶ್ರಮಕ್ಕೆ ಸಿಕ್ಕ ಮನ್ನಣೆ. ಹಗಲಿರುಳು ಸಾಹಿತ್ಯ, ರಂಗಭೂಮಿ ಮತ್ತು ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡ ಫಲವಿದು.

ಜಗಳೂರು ತಾಲೂಕಿನ ಪಲ್ಲಾಗಟ್ಟಿ ಗ್ರಾಮದ ಮಣ್ಣಿನ ವಾಸನೆ ಅವರ ಬರಹದಲ್ಲಿದೆ. KSRTC ಯಲ್ಲಿ ಕೆಲಸ ಮಾಡುತ್ತಾ, ಸಾಹಿತ್ಯ, ರಂಗಕಲೆ, ಸಾಮಾಜಿಕ ಕಳಕಳಿ - ಎಲ್ಲವನ್ನೂ ಸಮತೋಲನದಲ್ಲಿ ನಡೆಸುವ ಆಧುನಿಕ ಕರ್ಮಯೋಗಿ ಅವರು.

ಅರಿವಿನ ಅಲೆಗಳು ಎಂಬ ಅವರ ಸಂಕಲನದ ಹೆಸರಿನಂತೆ, ಅವರ ಬದುಕೂ ಸಹ ಒಂದು ಅಲೆಯಾಗಿದೆ. ಆ ಅಲೆ ನಮ್ಮೊಳಗಿನ ಜಡತ್ವವನ್ನು ಒಡೆದು, ಅರಿವಿನ ದಡಕ್ಕೆ ತಂದು ಸೇರಿಸುತ್ತದೆ. ಇಂತಹ ವ್ಯಕ್ತಿಗಳು ಇರುವುದರಿಂದಲೇ ಸಾಹಿತ್ಯ ಬದುಕಿದೆ, ಸಮಾಜ ಬೆಳೆಯುತ್ತದೆ.

ಮುಖಪುಟದಲ್ಲಿರುವ ಏಕಾಂಗಿ ಮರ ಬಣ್ಣಬಣ್ಣದ ದಾರಿ ಮತ್ತು ಆಕಾಶದ ಕಡೆಗೆ ಹೋಗುವ ಶಿಖರ ಇದು ಸಂಕಲನದ ಒಟ್ಟಾರೆ ಭಾವ. ಅರಿವು ಎಂಬುದು ವೈವಿಧ್ಯಮಯ ವಿಚಾರಗಳ ಚೌಕಗಳ ಮೇಲೆ ನಡೆದು ಅಂತಿಮವಾಗಿ ಏಕಾಗ್ರತೆಯ ಶಿಖರ ಮುಟ್ಟುವ ಯಾತ್ರೆ ಮುಖಪುಟವೇ ಒಂದು ಕವಿತೆಯಾಗಿದೆ. ಅರಿವಿನ ಅಲೆಗಳು ಎಂಬುವುದು ಅರಿವು ಸಮುದ್ರದಂತೆ. ಅದರಲ್ಲಿ ಎದ್ದೇಳುವ ಪ್ರತಿ ಅಲೆಯೂ ಒಂದು ಲೇಖನ. ಕೆಲ ಅಲೆಗಳು ಚಿಂತನೆಯ ಆಳಕ್ಕೆ ಕೊಂಡೊಯ್ಯುತ್ತವೆ, ಕೆಲವು ಮನಸ್ಸಿನ ತೀರಕ್ಕೆ ಮೆಲ್ಲನೆ ಅಪ್ಪಳಿಸುತ್ತವೆ. ಅಲೆ ಎಂಬ ಪದದಲ್ಲೇ ಇರುವ ಚಲನೆ, ಪ್ರವಾಹ ಮತ್ತು ನವೀಕರಣ ಲೇಖಕರ ಚಿಂತನಶೀಲತೆಗೆ ಸಾಕ್ಷಿ. ಶಾಂತಕುಮಾರ ಸರ್ ಅವರ ಭಾಷೆ ಸರಳತೆಯಲ್ಲಿ ಗಾಂಭೀರ್ಯ ಹೊಂದಿದೆ ಅರಿವಿನ ಅಲೆಗಳು ಕೇವಲ ಓದುವ ಪುಸ್ತಕವಲ್ಲ ಚಿಂತಿಸುವ ಪುಸ್ತಕ. ಆಧುನಿಕ ಜೀವನದ ಗದ್ದಲದಲ್ಲಿ ಮೌನವಾಗಿ ನಿಂತು ಯೋಚಿಸಲು ಪ್ರೇರೇಪಿಸುವ ಕೃತಿ. ಪುಸ್ತಕದ ಹೆಸರಿನಂತೆ ಓದಿದ ನಂತರ ಮನಸ್ಸಿನಲ್ಲಿ ಅರಿವಿನ ಅಲೆಗಳು ಎದ್ದೇಳುತ್ತವೆ. ಆ ಅಲೆಗಳು ನಮ್ಮನ್ನು ಆಳಕ್ಕೂ ಕರೆದೊಯ್ಯುತ್ತವೆ, ದಡಕ್ಕೂ ತಂದು ಸೇರಿಸುತ್ತವೆ.

ಹೀಗೆ ಇವರು ಬರೆದಿರುವ ಲೇಖನಗಳ ಬಗ್ಗೆ ಹೇಳುವುದಾದರೆ ವಿಚ್ಛೇದನಗಳು ಹೆಚ್ಚಾಗುತ್ತಿವೆ. ಏಕೆ? ಈ ಲೇಖನದಲ್ಲಿ ಸಮಾಜದ ಮೌನದ ಬಿರುಕಿಗೆ ಬೆಳಕು ಚೆಲ್ಲುವ ಪ್ರಶ್ನಾರ್ಥಕ ಚಿಂತನೆ. ಸಂಬಂಧದ ದಾರದಲ್ಲಿ ಸಿಕ್ಕಿರುವ ಅಹಂಕಾರ ಮತ್ತು ತಾಳ್ಮೆಯ ಗಂಟನ್ನು ಬಿಚ್ಚುವ ವಿಶ್ಲೇಷಣೆಯ ಕನ್ನಡಿ. ಶಿಕ್ಷಕರ ಬಗ್ಗೆ ಮಕ್ಕಳ ಮನೋಭಾವ ಬದಲಾಗಬೇಕು ಈ ಲೇಖನದಲ್ಲಿ ಗುರುಕುಲದ ಮಹಿಮೆಗೆ ಮರುಜೀವ ನೀಡುವ ಆಹ್ವಾನ. ಶಿಕ್ಷಣದ ಬೇರಿಗೆ ನೀರುಣಿಸುವ ಭಾವಪೂರ್ಣ ಮನವಿ. ಇಂದಿನ ಮಕ್ಕಳಿಗೆ ನೈತಿಕ ಮೌಲ್ಯ ಮತ್ತು ಮೊಬೈಲ್ ಬಳಕೆ ಈ ಲೇಖನದಲ್ಲಿ ಪರದೆಯ ಮೋಹ ಮತ್ತು ಸಂಸ್ಕಾರದ ನಡುವಿನ ಸಂಘರ್ಷ. ಎಚ್ಚರದ ಗಂಟೆಯಾಗಿ ಮೊಳಗುವ ಸಮಕಾಲೀನ ವಿಶ್ಲೇಷಣೆ. ಕರ್ನಾಟಕ ಏಕೀಕರಣದಲ್ಲಿ ಜಗಳೂರಿನ ಇಮಾಮ್ ಸಾಹೇಬರ ಪಾತ್ರ ಈ ಲೇಖನದಲ್ಲಿ ಇತಿಹಾಸದ ಮರೆಯಾದ ಪುಟಕ್ಕೆ ಸಿಕ್ಕ ಸಾಹಿತ್ಯದ ಅಂಜಲಿ. ದೇಶಭಕ್ತಿಯ ಪರಿಮಳ ಬೀರುವ ನೆಲದ ಕಥೆ. ಪಾಪ ಮಾಡಿದವನು ಪರಮಾತ್ಮ, ಪುಣ್ಯ ಮಾಡಿದವನು ದುರಾತ್ಮ ಈ ಲೇಖನದಲ್ಲಿ ಸಮಾಜದ ವಕ್ರದೃಷ್ಟಿಗೆ ಬಿದ್ದ ವ್ಯಂಗ್ಯದ ಚಾಟಿ. ಸತ್ಯದ ಮುಖವನ್ನು ಅನಾವರಣಗೊಳಿಸುವ ಕಟು ವಾಸ್ತವ. ಮದುವೆಯಾಗದೆ ಕೃತಕ ಗರ್ಭಧಾರಣೆ ಸೂಕ್ತವೇ? ಈ ಲೇಖನದಲ್ಲಿ ಆಧುನಿಕತೆಯ ಮುಸುಕಿನಡಿಯ ನೈತಿಕ ಪ್ರಶ್ನೆ. ಚರ್ಚೆಗೆ ನಾಂದಿ ಹಾಡುವ ತಾತ್ವಿಕ ತರ್ಕ. ಶಕ್ತಿಯೋಜನೆಯಿಂದ ನಿರ್ವಾಹಕರು ಎದುರಿಸುತ್ತಿರುವ ಸಮಸ್ಯೆಗಳು ಈ ಲೇಖನದಲ್ಲಿ ಆಡಳಿತದ ಒಳಗಿನ ಒತ್ತಡಕ್ಕೆ ದನಿಯಾದ ವರದಿ. ಜವಾಬ್ದಾರಿಯ ಭಾರವನ್ನು ಬಿಚ್ಚಿಡುವ ವಾಸ್ತವ ಚಿತ್ರ. ನಂಬ ಕೆಡಬೇಡಿ, ನೂರು ಸಲ ಯೋಚಿಸಿ ನೋಡಿ ಈ ಲೇಖನದಲ್ಲಿ ಆತುರಕ್ಕೆ ಕಡಿವಾಣ ಹಾಕುವ ವಿವೇಕದ ಸೂಕ್ತಿ. ಜೀವನಪಥಕ್ಕೆ ದಾರಿದೀಪವಾದ ಅನುಭವದ ಮಾತು. ಹೆಣ್ಣು ಹೆತ್ತವರೇ ರೈತರಿಗೆ ಹೆಣ್ಣು ಕೊಡಿ ಈ ಲೇಖನದಲ್ಲಿ ಗ್ರಾಮೀಣ ಬದುಕಿನ ಕಹಿ ಸತ್ಯಕ್ಕೆ ಹಿಡಿದ ಕನ್ನಡಿ. ಅಸಮಾನತೆಯ ಮುಖವಾಡ ಕಿತ್ತುಹಾಕುವ ಆಗ್ರಹ. ಮೆರೆದವನು ಮಣ್ಣಾದ ಎಂಬ ಲೇಖನದಲ್ಲಿ ಅಹಂಕಾರದ ಬೊಂಬೆಗೆ ಚುಚ್ಚಿದ ಸೂಜಿ. ವಿನಯವೇ ವೈಭವ ಎಂಬ ತಾತ್ವಿಕ ಸಾರ. ತಾಯ್ತನಕ್ಕಾಗಿ ಹೆಣ್ಣಿನ ಕಣ್ಣೀರ ಕಥೆ ಈ ಲೇಖನದಲ್ಲಿ ಮಾತೃತ್ವದ ಹಿಂದಿನ ತ್ಯಾಗದ ಮಹಾಕಾವ್ಯ. ಪ್ರತಿ ಸಾಲಿನಲ್ಲೂ ಹೃದಯ ಕರಗಿಸುವ ಸಂವೇದನೆ. ಹೀಗೆ ಇವರು ಬರೆದಿರುವ ಪ್ರತಿಯೊಂದು ಲೇಖನಗಳು ಮಹತ್ವದ್ದಾಗಿವೆ. ಪ್ರತಿ ವಿಷಯವನ್ನು ಇವರು ಕಲಿಯುಗದ ಕನ್ನಡಿಯಂತೆ ನಮ್ಮ ಮುಂದೆ ಇಟ್ಟಿದ್ದಾರೆ.

ದಾವಣಗೆರೆಯ ಮಣ್ಣಿನಲ್ಲಿ ಹುಟ್ಟಿ ಕನ್ನಡ ನುಡಿಗೆ ಜೀವ ತುಂಬುತ್ತಿರುವ ಇವರಂತಹ ಬರಹಗಾರರು ಇರುವುದರಿಂದಲೇ ನಮ್ಮ ಭಾಷೆ ಬದುಕಿದೆ. ಸಾಹಿತ್ಯ ಕ್ಷೇತ್ರದಲ್ಲಿ ಶಾಂತಕುಮಾರ್ ಸರ್ ಅವರ ಕೃತಿಗಳು ಇನ್ನೂ ಹೆಚ್ಚು ಹೆಚ್ಚು ಹೊರಬರಲಿ ಅವರ ಲೇಖನಿ ಇನ್ನೂ ಸಾವಿರ ಅಲೆಗಳನ್ನು ಎಬ್ಬಿಸಲಿ. ಕನ್ನಡಾಂಬೆಯ ಆಶೀರ್ವಾದ ಸದಾ ಇವರ ಮೇಲೆ ಇರಲಿ. ಸರಸ್ವತಿಯ ಕೃಪೆ ಸದಾ ಇವರ ಲೇಖನಿಯಲ್ಲಿರಲಿ. ನಿಮ್ಮ ಈ ಅರಿವಿನ ಅಲೆಗಳು ಎಂಬ ಲೇಖನ ಸಂಕಲನ ಕರ್ನಾಟಕದ ಮೂಲೆ ಮೂಲೆಗೂ ತಲುಪಿ ಸಾವಿರಾರು ಮನಸ್ಸುಗಳಿಗೆ ಬೆಳಕಾಗಲಿ.

ಕು. ಜ್ಯೋತಿ ಆನಂದ ಚಂದುಕರ ಬಾಗಲಕೋಟ