ಹಟ್ಟಿ ಚಿನ್ನದ ಗಣಿ: ಸಮೀಪದ ಗುರುಗುಂಟಾ ಹೋಬಳಿಯ ಕೆಬಿ ಸೆಕ್ಷನ್ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ರಾತ್ರಿ ಸಮಯದಲ್ಲಿ ದೊಡ್ಡಿಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಸುಮಾರು ನಾಲ್ಕು ಗಂಟೆಗಳ ಕಾಲ ಧರಣಿ ನಡೆಸಿದರು.
ಗುರುಗುಂಟಾ ವ್ಯಾಪ್ತಿಯ ರೈತರಿಗೆ ರಾತ್ರಿ ವೇಳೆ ಸಮರ್ಪಕ ವಿದ್ಯುತ್ ಸಿಗದಿರುವುದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಎಲ್ಲಾ ದೊಡ್ಡಿಗಳಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಧರಣಿಯ ವಿಷಯ ತಿಳಿದು ತಾಲೂಕು ಅಧಿಕಾರಿಗಳಾದ ಎಡಬ್ಲ್ಯೂ ಹಾಗೂ ಸಿಪಿಐ ಹೊಸಕೆರಪ್ಪ ಸ್ಥಳಕ್ಕೆ ಭೇಟಿ ನೀಡಿ ರೈತ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಎರಡು-ಮೂರು ದಿನಗಳ ಕಾಲಾವಕಾಶ ನೀಡಿದರೆ ಗುರುಗುಂಟಾ ವ್ಯಾಪ್ತಿಯ ರೈತರಿಗೆ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ರೈತ ಮುಖಂಡರು ತಾತ್ಕಾಲಿಕವಾಗಿ ಧರಣಿಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಪ್ರಸಾದ್ ರೆಡ್ಡಿ, ಗ್ರಾಮ ಘಟಕ ಅಧ್ಯಕ್ಷ ದುರ್ಗಪ್ಪ ಗೌಡೂರು, ಲಾಲ್ ಸಾಬ್, ಹುಲಗಪ್ಪ, ದುರ್ಗಪ್ಪ, ಮಮ್ಮದ್ ಸಾಬ್, ರಾಮಣ್ಣ, ರಂಗಪ್ಪ, ನಾಗಪ್ಪ, ಶರಣಪ್ಪ, ವೀರಭದ್ರಪ್ಪ, ಶಿವಕುಮಾರ್, ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.



