ಹಟ್ಟಿ: ಹಟ್ಟಿ ಚಿನ್ನದ ಗಣಿ ಕಂಪನಿಯ ಗಣಿ ಗುತ್ತಿಗೆ ಪ್ರದೇಶದಲ್ಲಿದ್ದರೂ ಭೂಸ್ವಾಧೀನವಾಗದೆ ಉಳಿದಿರುವ ರೈತರ ಪಟ್ಟಾ ಜಮೀನುಗಳ ಸಮಸ್ಯೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಡೈಮಂಡ್ ಡ್ರಿಲಿಂಗ್ ಕಾರ್ಯವನ್ನು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ವೀಕ್ಷಿಸಿದರು.
ಹಟ್ಟಿ ಚಿನ್ನದ ಗಣಿ ಕಂಪನಿಯ ಸುಮಾರು 1,305 ಎಕರೆ ಗಣಿ ಗುತ್ತಿಗೆ ಪ್ರದೇಶದಲ್ಲಿ ಭೂಸ್ವಾಧೀನವಾಗದೆ ಉಳಿದಿರುವ ಸುಮಾರು 390 ಎಕರೆ ರೈತರ ಪಟ್ಟಾ ಜಮೀನುಗಳ ಇ.ಸಿ. ದಾಖಲೆಗಳಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯ ಹೆಸರು ದಾಖಲಾಗಿರುವುದರಿಂದ ರೈತರು ಹಲವು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಇದರಿಂದ ಜಮೀನು ಮಾರಾಟ, ಸಾಲ ಸೌಲಭ್ಯ ಸೇರಿದಂತೆ ವಿವಿಧ ಕಾನೂನು ಮತ್ತು ಆರ್ಥಿಕ ವ್ಯವಹಾರಗಳಿಗೆ ಅಡಚಣೆ ಉಂಟಾಗುತ್ತಿದೆ ಎನ್ನಲಾಗಿದೆ.
ಈ ಭೂ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿ ವತಿಯಿಂದ ಕಳೆದ ಆಗಸ್ಟ್ ತಿಂಗಳಲ್ಲಿ ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು. ಈ ವೇಳೆ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧಿಕಾರಿಗಳು ಭೂ ಅನ್ವೇಷಣೆ ನಡೆಸಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ರೈತರು ತಮ್ಮ ಹೋರಾಟವನ್ನು ಹಿಂಪಡೆದಿದ್ದರು.
ಇದೀಗ ರೈತರ ಜಮೀನುಗಳಲ್ಲಿ ಡೈಮಂಡ್ ಡ್ರಿಲಿಂಗ್ ಕಾರ್ಯ ಆರಂಭವಾಗಿದ್ದು, ಮಹೇಶ್ವರಿ ಡ್ರಿಲಿಂಗ್ ಕಂಪನಿಯು ಕಾಮಗಾರಿ ಕೈಗೊಂಡಿದೆ. ಚಿನ್ನದ ಅದಿರು ಅನ್ವೇಷಣೆಗಾಗಿ ಒಟ್ಟು ಆರು ಸ್ಥಳಗಳನ್ನು ಗುರುತಿಸಲಾಗಿದ್ದು, ಪ್ರಸ್ತುತ ಎರಡು ಸ್ಥಳಗಳಲ್ಲಿ ಡ್ರಿಲಿಂಗ್ ನಡೆಯುತ್ತಿದೆ. ಪ್ರತಿ ಸ್ಥಳದಲ್ಲಿ ಸುಮಾರು 550 ಮೀಟರ್ ಆಳದವರೆಗೆ ಡ್ರಿಲಿಂಗ್ ನಡೆಸಿ, ಹೊರಬರುವ ಕೋರ್ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಹಟ್ಟಿ ಚಿನ್ನದ ಗಣಿ ಕಂಪನಿಯ ಭೂ ಅನ್ವೇಷಣಾಧಿಕಾರಿ ಸೋಲಂಕಿ ಮಾಹಿತಿ ನೀಡಿದರು.
ಡ್ರಿಲಿಂಗ್ ಕಾರ್ಯ ಪರಿಶೀಲಿಸಿದ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ, ರೈತರು ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಕಂಪನಿ ಭೂ ಅನ್ವೇಷಣಾ ಕಾರ್ಯ ಕೈಗೊಂಡಿದೆ. ಈ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ಸಂಬಂಧಿಸಿದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಭೂ ಅನ್ವೇಷಣೆ ಪೂರ್ಣಗೊಂಡ ನಂತರವೂ ರೈತರಿಗೆ ನ್ಯಾಯ ದೊರೆಯದಿದ್ದರೆ ಮತ್ತೆ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಡೈಮಂಡ್ ಡ್ರಿಲಿಂಗ್ ಹಾಗೂ ಭೂ ಅನ್ವೇಷಣೆ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಭೂ ಸಮಸ್ಯೆಗೆ ಪರಿಹಾರ ದೊರೆಯಬಹುದು ಎಂಬ ನಿರೀಕ್ಷೆ ರೈತರಲ್ಲಿ ಮೂಡಿದೆ.
ಈ ಸಂದರ್ಭದಲ್ಲಿ ಭೂ ಹಕ್ಕು ಹೋರಾಟ ಸಮಿತಿಯ ಪದಾಧಿಕಾರಿಗಳಾದ ಶಂಕರಗೌಡ ಬಳಗನೂರು, ಶಿವಪುತ್ರಪ್ಪ, ಶಿವಾನಂದ, ಬಾಬು ನಾಯಿಕೋಡಿ, ಸುರೇಶಗೌಡ ಗುರಿಕಾರ, ಬಾಲದಂಡಪ್ಪ ಗುರಿಕಾರ, ಅಮರೇಶ ಕುರ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.



