ದೇವದುರ್ಗ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಅರ್ಹ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕವಿದೆ ಎಂದು ಆರೋಪಿಸಿ, ಅದನ್ನು ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಕಾರ್ಯಕರ್ತರು ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕಟ್ಟಡ ಕಾರ್ಮಿಕ ಶಬ್ಬೀರ್, ಕೇಂದ್ರ ಸರ್ಕಾರವು ವಿವಿಧ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಎಸ್‌ಐಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿಯುವ ಆತಂಕವಿದ್ದು, ಮತದಾನದ ಹಕ್ಕಿನ ರಕ್ಷಣೆಗೆ ವಿದ್ಯಾರ್ಥಿ ಮತ್ತು ಯುವಜನರು ಹೋರಾಟ ಮುಂದುವರಿಸಲಿದ್ದಾರೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ನಡೆದ ಹೋರಾಟದ ಮುಂದುವರಿದ ಭಾಗವಾಗಿ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಯುವಜನರು ಒಗ್ಗೂಡಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಸಿಐಟಿಯು ಮುಖಂಡ ಗಿರಿಯಪ್ಪ ಪೂಜಾರಿ ಮಾತನಾಡಿ, ಸರ್ಕಾರಿ ಸಂಸ್ಥೆಗಳ ಖಾಸಗೀಕರಣದಿಂದ ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುತ್ತಿದೆ ಹಾಗೂ ದುಬಾರಿ ಖಾಸಗಿ ಶಿಕ್ಷಣಕ್ಕೆ ಆದ್ಯತೆ ನೀಡುವುದರಿಂದ ಸಾಮಾನ್ಯ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಶ್ನಿಸುವವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದ ಅವರು, ಮತದಾನದ ಹಕ್ಕಿಗೆ ಧಕ್ಕೆಯಾಗುವ ಯಾವುದೇ ಕ್ರಮವನ್ನು ಜನರು ಒಪ್ಪುವುದಿಲ್ಲ. ಯುವಜನರ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ವಿದ್ಯಾರ್ಥಿ ಮುಖಂಡ ಮಹಾಲಿಂಗ ದೊಡ್ಡಮನಿ ಮಾತನಾಡಿ, ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಹಾಗೂ ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ರಾಜು ನಾಯಕ, ಕಾರ್ಯದರ್ಶಿ ರಿಯಾಝ್ ಆರ್ತಿ, ವೆಂಕಟೇಶ್ ತ್ಯಾಪ್ಲಿ, ಮಲ್ಲು ಗೌಡರ್, ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಸಂತೋಷ್ ತ್ಯಾಪ್ಲಿ, ಉಪಾಧ್ಯಕ್ಷ ಬಾಬು ಶಾಣೆರದೊಡ್ಡಿ, ವಿನಯ್ ಕುಮಾರ್, ದಿಲ್ ಶಾ, ಕೊಂಡಯ್ಯ ಗೋಸಾಲ್, ನಿಂಗಣ್ಣ, ಮಕ್ಸುದ್, ಆರಿಫ್, ಶಿವರಾಜ ಪೂಜಾರ ದೊಡ್ಡಿ, ರಂಗನಾಥ, ಶಿವರಾಜ, ಮಂಜುನಾಥ ಸೇರಿದಂತೆ ಹಲವರು ಭಾಗವಹಿಸಿದ್ದರು.