ಲಿಂಗಸುಗೂರು: ಮಸ್ಕಿ ತಾಲೂಕಿನ ಯರದೊಡ್ಡಿ ಗ್ರಾಮದ ರಸ್ತೆ ಬದಿಯಲ್ಲಿ ಸಸಿ ನೆಡುವ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ನಾಯಕ ಸಮುದಾಯದ ವ್ಯಕ್ತಿಯೊಬ್ಬರನ್ನು ಲಿಂಗಸುಗೂರು ಅರಣ್ಯಾಧಿಕಾರಿಗಳ ಕಚೇರಿಗೆ ಕರೆತಂದು ಹಲ್ಲೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಲ್ಲೆಗೀಡಾದ ರಮೇಶ ತಂದೆ ಹನುಮಂತಪ್ಪ ನಾಯಕ ಅವರು ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯರದೊಡ್ಡಿ ಗ್ರಾಮದ ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಸಸಿ ನೆಡುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಸರ್ವೆ ನಂ.29ರಲ್ಲಿ ತಾವು ಉಳುಮೆ ಮಾಡುತ್ತಿರುವ ಜಮೀನಿನಲ್ಲಿ ಸಸಿಗಳನ್ನು ನೆಡಬಾರದು ಎಂದು ರಮೇಶ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದರ ನಂತರ ಅವರನ್ನು ಲಿಂಗಸುಗೂರಿನ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಕರೆದುಕೊಂಡು ಹೋಗಿ ವಿಚಾರಣೆ ನೆಪದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

ಕುಟುಂಬದವರ ಹೇಳಿಕೆಯ ಪ್ರಕಾರ, ಬುಧವಾರ ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಯಮನೂರು, ಸುರೇಶ ಸೇರಿದಂತೆ ಕೆಲವರು ರಮೇಶ ಅವರಿಗೆ ಬಡಿಗೆಗಳಿಂದ ಹಲ್ಲೆ ನಡೆಸಿದ್ದಾರೆ. ರಾತ್ರಿ ತಡವರೆಗೆ ಕಚೇರಿಯಲ್ಲೇ ಇರಿಸಿಕೊಂಡು ಬೆನ್ನು, ತೊಡೆ ಹಾಗೂ ಕಾಲು ಭಾಗಗಳಿಗೆ ಹೊಡೆದಿದ್ದಾರೆ ಎಂಬ ಆರೋಪವಿದೆ. ತೀವ್ರ ನೋವಿನಿಂದ ರಮೇಶ ಅಸ್ವಸ್ಥಗೊಂಡ ಬಳಿಕ ಕುಟುಂಬಸ್ಥರಿಗೆ ಕರೆ ಮಾಡಿ ಅವರನ್ನು ಕಳುಹಿಸಲಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಗುರುವಾರ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ರಮೇಶ ಅವರನ್ನು ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿರುವ ವೇಳೆ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ರಮೇಶ ಅವರು ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ, ತಮ್ಮನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದ್ದು, ಒಳ ಏಟುಗಳೂ ಉಂಟಾಗಿವೆ ಎಂದು ತಿಳಿಸಿದ್ದಾರೆ.

ಘಟನೆಯಿಂದ ಕುಟುಂಬಸ್ಥರು ಭಯಭೀತರಾಗಿದ್ದು, ಆರಂಭದಲ್ಲಿ ದೂರು ನೀಡಲು ಹಿಂಜರಿದಿದ್ದರು. ಬಳಿಕ ಸಂಬಂಧಿಕರ ಧೈರ್ಯದಿಂದ ಘಟನೆ ಕುರಿತು ಮಾಹಿತಿ ಬಹಿರಂಗಪಡಿಸಿದ್ದು, ಲಿಂಗಸುಗೂರು ಪೊಲೀಸ್ ಠಾಣೆಗೆ ಆಸ್ಪತ್ರೆಯಿಂದ ಎಂಎಲ್‌ಸಿ ಮಾಹಿತಿ ರವಾನಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಹಲ್ಲೆಗೀಡಾದ ರಮೇಶ ಅವರ ಸಹೋದರ ಶರಣಬಸವ ನಾಯಕ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ₹15 ಸಾವಿರ ಹಣ ನೀಡುವಂತೆ ಕೇಳಿದ್ದರು ಎಂದು ಆರೋಪಿಸಿದರು. ಹಣ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಮೇಶ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿದ ಅವರು, ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗಾಯಗೊಂಡ ರಮೇಶ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಘಟನೆ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳ ಸ್ಪಷ್ಟನೆ ಲಭ್ಯವಾಗಿಲ್ಲ. ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.