ದೇವದುರ್ಗ, ಅ.10: ನೂತನ ಅರಕೇರಾ ತಾಲೂಕಿಗೆ ಸೇರ್ಪಡೆಗೊಳಿದ ಗಾಣಧಾಳ ಹಾಗೂ ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳು ಗ್ರಾಮಗಳನ್ನು ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಯಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸಿ ವಿವಿಧ ಗ್ರಾಮಗಳ ಮುಖಂಡರು ಹಾಗೂ ಗ್ರಾಮಸ್ಥರು ಶಾಸಕಿ ಕರೆಮ್ಮ ಜಿ. ನಾಯಕ್ ಅವರ ನಿವಾಸಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಗಾಣಧಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮಲದಿನ್ನಿ, ಕಕ್ಕಲದೊಡ್ಡಿ, ಗಾಣಧಾಳ ಹಾಗೂ ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮನಮರಡಿ, ಬೋಗಿರಾಮನಗುಂಡ, ಸಂಪತರಾಯನದೊಡ್ಡಿ ಮತ್ತು ಮ್ಯಾಕಲದೊಡ್ಡಿ ಗ್ರಾಮಗಳನ್ನು ಅರಕೇರಾ ತಾಲೂಕಿಗೆ ಸೇರ್ಪಡೆಗೊಳಿದ ಸರ್ಕಾರದ ನಿರ್ಧಾರಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ, ಬಸನಗೌಡ ದೇಸಾಯಿ ಮಾತನಾಡಿ, ಹೊಸ ತಾಲೂಕು ರಚನೆಯ ಸಂದರ್ಭದಲ್ಲಿ ಭೌಗೋಳಿಕ ಅಂತರ, ಜನಸಂಖ್ಯೆ, ಸಾರಿಗೆ ಸಂಪರ್ಕ ಹಾಗೂ ಸಾರ್ವಜನಿಕರಿಗೆ ಆಡಳಿತಾತ್ಮಕವಾಗಿ ದೊರೆಯುವ ಅನುಕೂಲಗಳನ್ನು ಪರಿಗಣಿಸಬೇಕು. ಆದರೆ ಅರಕೇರಾ ತಾಲೂಕು ರಚನೆಯಲ್ಲಿ ಈ ಅಂಶಗಳನ್ನು ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.
ಅರಕೇರಾ ತಾಲೂಕು ಕೇಂದ್ರದಿಂದ ಕಮಲದಿನ್ನಿ 45 ಕಿ.ಮೀ., ಕಕ್ಕಲದೊಡ್ಡಿ 46 ಕಿ.ಮೀ., ಗಾಣಧಾಳ 50 ಕಿ.ಮೀ., ಬೋಗಿರಾಮನಗುಂಡ 47 ಕಿ.ಮೀ., ಮ್ಯಾಕಲದೊಡ್ಡಿ 45 ಕಿ.ಮೀ., ಸೋಮನಮರಡಿ 46 ಕಿ.ಮೀ. ಹಾಗೂ ಸಂಪತರಾಯನದೊಡ್ಡಿ 51 ಕಿ.ಮೀ. ದೂರದಲ್ಲಿವೆ. ಇದರಿಂದ ಕಂದಾಯ ಹಾಗೂ ಇತರ ಸರ್ಕಾರಿ ಕೆಲಸಗಳಿಗೆ ಸಾರ್ವಜನಿಕರು ದೂರದ ಪ್ರದೇಶಕ್ಕೆ ತೆರಳಬೇಕಾಗುತ್ತದೆ ಎಂದು ತಿಳಿಸಿದರು.
ಆದರೆ ಇದೇ ಗ್ರಾಮಗಳು ಜಾಲಹಳ್ಳಿ ಹೋಬಳಿ ಕೇಂದ್ರದಿಂದ ಕೇವಲ 4.5ರಿಂದ 9 ಕಿ.ಮೀ. ಅಂತರದಲ್ಲಿವೆ. ಜಾಲಹಳ್ಳಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಪ್ರಥಮ ದರ್ಜೆ ಕಾಲೇಜುಗಳು, ಪದವಿಪೂರ್ವ ಕಾಲೇಜುಗಳು, ಸಮುದಾಯ ಆರೋಗ್ಯ ಕೇಂದ್ರ, ನಾಡಕಚೇರಿ, ಪೊಲೀಸ್ ಠಾಣೆ, ಪಶು ಚಿಕಿತ್ಸಾಲಯ, ಕೃಷಿ ಕೇಂದ್ರ, ಬ್ಯಾಂಕ್ ಹಾಗೂ ಅಂಚೆ ಕಚೇರಿ ಸೇರಿದಂತೆ ಅಗತ್ಯ ಸೌಲಭ್ಯಗಳು ಲಭ್ಯವಿವೆ. ರಾಜ್ಯ ಹೆದ್ದಾರಿ ಸಂಖ್ಯೆ 61 ಹಾದುಹೋಗಿರುವುದರಿಂದ ಸಾರಿಗೆ ಸಂಪರ್ಕವೂ ಉತ್ತಮವಾಗಿದೆ. ಹೀಗಾಗಿ ಗ್ರಾಮಗಳನ್ನು ಜಾಲಹಳ್ಳಿ ಹೋಬಳಿಯಲ್ಲಿಯೇ ಮುಂದುವರಿಸುವುದು ಸಾರ್ವಜನಿಕರಿಗೆ ಅನುಕೂಲಕರವಾಗಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಗ್ರಾಮಸ್ಥರ ಅಭಿಪ್ರಾಯ ಪಡೆಯದೆ ಆಡಳಿತಾತ್ಮಕ ಗಡಿಗಳನ್ನು ಬದಲಾಯಿಸುವುದರಿಂದ ಶಿಕ್ಷಣ, ಆರೋಗ್ಯ, ವ್ಯಾಪಾರ ಹಾಗೂ ದೈನಂದಿನ ಸರ್ಕಾರಿ ಸೇವೆಗಳನ್ನು ಪಡೆಯಲು ತೊಂದರೆಯಾಗಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಗ್ರಾಮಗಳಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಹಾಗೂ ಕರ್ನಾಟಕ ಭೂಕಂದಾಯ ಕಾಯ್ದೆಯ ಸಂಬಂಧಿತ ನಿಯಮಗಳನ್ನು ಪರಿಶೀಲಿಸಿ ಗ್ರಾಮಗಳನ್ನು ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಯಲ್ಲಿಯೇ ಉಳಿಸಬೇಕು ಎಂದು ಆಗ್ರಹಿಸಿದರು.
ಈ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಕ್ಟೋಬರ್ 12ರಂದು ಬೃಹತ್ ಪಾದಯಾತ್ರೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಕಕ್ಕಲದೊಡ್ಡಿ ಮತ್ತು ಕಮಲದಿನ್ನಿ ಗ್ರಾಮಸ್ಥರು ತಿಮ್ಮಾಪುರದೊಡ್ಡಿ ರಸ್ತೆ ಮೂಲಕ, ಗಾಣಧಾಳ ಹಾಗೂ ಮ್ಯಾಕಲದೊಡ್ಡಿ ಗ್ರಾಮಸ್ಥರು ಮದವಯನಗಡ್ಡಿ ರಸ್ತೆ ಮೂಲಕ ಮತ್ತು ಬೋಗಿರಾಮನಗುಂಡ, ಸೋಮನಮರಡಿ ಹಾಗೂ ಸಂಪತರಾಯನದೊಡ್ಡಿ ಗ್ರಾಮಸ್ಥರು ಬೊಮ್ಮನಹಳ್ಳಿ ರಸ್ತೆ ಮೂಲಕ ಪಾದಯಾತ್ರೆಯಲ್ಲಿ ಆಗಮಿಸಿ ಜಾಲಹಳ್ಳಿ ನಾಡತಹಶೀಲ್ದಾರರ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಸರ್ಕಾರ ಹಾಗೂ ಜಿಲ್ಲಾಡಳಿತ ಗ್ರಾಮಸ್ಥರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ವಿಷಯದಲ್ಲಿ ಶಾಸಕಿ ಕರೆಮ್ಮ ಜಿ. ನಾಯಕ್ ಅವರು ಸರ್ಕಾರದ ಗಮನ ಸೆಳೆದು ಗ್ರಾಮಸ್ಥರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸನಗೌಡ ದೇಸಾಯಿ ವಕೀಲರು, ಬಸವರಾಜ ಪಾಟೀಲ್ ವಕೀಲರು, ಮಲ್ಲಿಕಾರ್ಜುನ ಬೆನಕನ, ಯಲ್ಲನಗೌಡ ಬೆನಕನ, ಮಲ್ಲಪ್ಪ ಮಲ್ಕಾಪುರ, ಶಿವನಗೌಡ ಪೊಲೀಸ್ ಪಾಟೀಲ್, ರಂಗಮ್ಮ ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



