ಮಾನ್ವಿ, ಅ.10: ತಾಲೂಕಿನ ಹಿರೇಕೋಟ್ನೆಕಲ್ ಗ್ರಾಮದ ಶ್ರೀ ತಾಯಮ್ಮದೇವಿ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 11ರಿಂದ 21ರವರೆಗೆ 45ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದೇ ಸಂದರ್ಭದಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಶ್ರೀದೇವಿ ಪುರಾಣ ಮಂಟಪವನ್ನು ಅ.11ರಂದು ಉದ್ಘಾಟಿಸಲಾಗುವುದು ಎಂದು ಹಿರಿಯ ವಕೀಲ ಸಿದ್ದಲಿಂಗಪ್ಪ ಚಿಕ್ಕಕೋಟ್ನೆಕಲ್ ತಿಳಿಸಿದ್ದಾರೆ.
ಗ್ರಾಮದಲ್ಲಿ ಹಲವು ದಶಕಗಳಿಂದ ನಡೆದುಕೊಂಡು ಬರುತ್ತಿರುವ ಶ್ರೀದೇವಿ ಪುರಾಣ ಪ್ರವಚನವು ಈ ವರ್ಷ 45ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಹಿರಿಯ ವಕೀಲ ಸಿದ್ದಲಿಂಗಪ್ಪ ಚಿಕ್ಕಕೋಟ್ನೆಕಲ್ ಅವರು 10 ಲಕ್ಷ ರೂ. ವೆಚ್ಚದಲ್ಲಿ ನೂತನ ಪುರಾಣ ಮಂಟಪ ನಿರ್ಮಿಸಿದ್ದಾರೆ.
ಅಕ್ಟೋಬರ್ 11ರಂದು ಮಂಟಪದ ಉದ್ಘಾಟನೆಯೊಂದಿಗೆ ಶ್ರೀ ತಾಯಮ್ಮದೇವಿಗೆ ವಿಶೇಷ ರುದ್ರಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಒಳಬಳ್ಳಾರಿಯ ಸುವರ್ಣಗಿರಿ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಯದ್ದಲದೊಡ್ಡಿಯ ಶ್ರೀ ಮಹಾಲಿಂಗ ಸ್ವಾಮಿಗಳು, ಕರೆಗುಡ್ಡದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಚೀಕಲಪರ್ವಿಯ ಶ್ರೀ ಸದಾಶಿವ ಮಹಾಸ್ವಾಮಿಗಳು ಹಾಗೂ ಅಡವಿ ಅಮರೇಶ್ವರ ಮಠದ ಶ್ರೀ ತೋಂಟದಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ.
ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 11ರಿಂದ 21ರವರೆಗೆ ಪ್ರತಿದಿನ ಸಂಜೆ 7ರಿಂದ ರಾತ್ರಿ 9.30ರವರೆಗೆ ಕಲ್ಲೂರಿನ ಶ್ರೀ ಕಲ್ಲಿನಾಥ ಶಾಸ್ತ್ರಿಗಳು ಶ್ರೀದೇವಿ ಪುರಾಣ ಪ್ರವಚನ ನೀಡಲಿದ್ದಾರೆ. ಪುರಾಣ ಪ್ರವಚನದ ಮೂಲಕ ದೇವಿಯ ಮಹಿಮೆ, ಧಾರ್ಮಿಕ ಪರಂಪರೆ ಹಾಗೂ ಜೀವನ ಮೌಲ್ಯಗಳ ಕುರಿತು ಭಕ್ತರಿಗೆ ತಿಳಿಸಿಕೊಡಲಾಗುವುದು.
ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೂತನ ಮಂಟಪದ ಉದ್ಘಾಟನೆ, ರುದ್ರಾಭಿಷೇಕ ಮತ್ತು ಪುರಾಣ ಪ್ರವಚನ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಶ್ರೀ ತಾಯಮ್ಮದೇವಿ ದೇವಸ್ಥಾನ ಸಮಿತಿ ಹಾಗೂ ಹಿರಿಯ ವಕೀಲ ಸಿದ್ದಲಿಂಗಪ್ಪ ಚಿಕ್ಕಕೋಟ್ನೆಕಲ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.



