ದೇವದುರ್ಗ: ನಾರಾಯಣಪುರ ಬಲದಂಡೆ ಕಾಲುವೆಯ 16, 17 ಹಾಗೂ 18ನೇ ವಿತರಣಾ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಆಗ್ರಹಿಸಿ ಕಳೆದ 15 ದಿನಗಳಿಂದ ಹೋರಾಟ ನಡೆಸುತ್ತಿದ್ದ ರೈತರು, ಸೋಮವಾರ ಗಬ್ಬೂರು–ದೇವದುರ್ಗ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನೀರಾವರಿ ಇಲಾಖೆ ಅಧಿಕಾರಿಗಳು ನೀರಿನ ಹರಿವು ಹೆಚ್ಚಿಸಿ ಕೊನೆಯ ಭಾಗದ ರೈತರಿಗೂ ನೀರು ತಲುಪಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಸಂಕೇಶ್ವರ ಹಾಳ್ ಗ್ರಾಮದ ಬಸವಣ್ಣ ಕ್ಯಾಂಪ್ ಸಮೀಪದ 17ನೇ ಉಪಕಾಲುವೆ ಬಳಿ ಜಮಾಯಿಸಿದ ರೈತರು, ಮುಖ್ಯರಸ್ತೆಯಲ್ಲಿ ಸಂಚಾರ ತಡೆದು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಲುವೆಯ ಮೇಲ್ಭಾಗದಲ್ಲಿ ನೀರು ಹರಿಯುತ್ತಿದ್ದರೂ ಕೊನೆಯ ಭಾಗದ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಇದರಿಂದ ಬೆಳೆಗಳು ಒಣಗುವ ಹಂತಕ್ಕೆ ಬಂದಿದ್ದು, ಸಾವಿರಾರು ರೂಪಾಯಿ ಬಂಡವಾಳ ಹೂಡಿರುವ ರೈತರು ನಷ್ಟದ ಆತಂಕ ಎದುರಿಸುತ್ತಿದ್ದಾರೆ. ಸಮಸ್ಯೆ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ರೈತರ ಹೋರಾಟದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಹಲಗೆರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರೈತರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಅಧೀಕ್ಷಕ ಎಂಜಿನಿಯರ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಕಾಲುವೆಯಲ್ಲಿ ಈವರೆಗೆ 2,400 ಕ್ಯೂಸೆಕ್ ಇದ್ದ ನೀರಿನ ಹರಿವನ್ನು 2,750 ಕ್ಯೂಸೆಕ್ಗೆ ಹೆಚ್ಚಿಸಿರುವುದಾಗಿ ತಿಳಿಸಿದರು.
ಮಂಗಳವಾರ ಬೆಳಿಗ್ಗೆ 10 ಗಂಟೆಯೊಳಗೆ ಕಾಲುವೆಯಲ್ಲಿ ನಿಗದಿತ ಗೇಜ್ ಕಾಯ್ದುಕೊಂಡು ಕೊನೆಯ ಭಾಗದ ರೈತರ ಜಮೀನುಗಳಿಗೂ ನೀರು ತಲುಪಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಇದಕ್ಕೆ ಸ್ಪಂದಿಸಿದ ರೈತರು ರಸ್ತೆ ತಡೆ ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಟ್ಟರು.
ಆದರೆ ನಿಗದಿತ ಸಮಯದೊಳಗೆ ಸಮರ್ಪಕವಾಗಿ ನೀರು ಹರಿಸದಿದ್ದರೆ ಮತ್ತೆ ರಸ್ತೆಗಿಳಿದು ತೀವ್ರ ಹೋರಾಟ ನಡೆಸಬೇಕಾಗುತ್ತದೆ. ಬೆಳೆ ಉಳಿಸಿಕೊಳ್ಳಲು ನೀರು ಕೇಳುತ್ತಿರುವ ರೈತರ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪ್ರಭಾಕರ್ ಪಾಟೀಲ್, ಇಂಗಳದಾಳ್ ರಮೇಶ್, ಅಬಕಾರಿ ಶರಣಪ್ಪ, ಹುಸೇನಪುರದ ಉಮ್ಮಣ್ಣ ನಾಯಕ್, ಮಲ್ಲಪ್ಪಗೌಡ, ಮಲ್ಲಪ್ಪ ಪೂಜಾರಿ, ಹುಚ್ಚ ಪೀರ್ ಸಾಬ್, ಶರಬಣ್ಣ ಸಾಹುಕಾರ್ ಸೇರಿದಂತೆ ಇಂಗಳದಾಳ, ಬೂದಿನಾಳ, ಹದ್ದಿನಾಳ, ಸಂಕೇಶ್ವರ ಹಾಳ್, ಜಿನ್ನಾಪುರ, ಕೂಡ್ಲಿಗಿ, ಗಬ್ಬೂರು, ಮಲದಕಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಭಾಗವಹಿಸಿದ್ದರು. ಗಬ್ಬೂರು ಪೊಲೀಸ್ ಇನ್ಸ್ಪೆಕ್ಟರ್ ಸ್ಥಳದಲ್ಲಿ ಉಪಸ್ಥಿತರಿದ್ದರು.



