ಮಾನ್ವಿ: ತಾಲೂಕಿನ ಪೋತ್ನಾಳ ಪಟ್ಟಣದ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ಆವರಣದಲ್ಲಿ ಬಹುಜನ ಸಂಘರ್ಷ ಸಮಿತಿ ಕರ್ನಾಟಕ ಹಾಗೂ ಜನತಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಬಲ್ಲಟಗಿ ಇವರ ಸಹಯೋಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿಂತನೆಗಳು ಎಂಬ ವಿಷಯದ ಕುರಿತು ರಾಯಚೂರು ಜಿಲ್ಲಾಮಟ್ಟದ ಮೂರು ದಿನಗಳ ಅಧ್ಯಯನ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಪೂಜ್ಯ ಕೊರಣೇಶ್ವರ ಸ್ವಾಮೀಜಿ ಹಾಗೂ ಉಚ್ಚಮಠದ ಪೂಜ್ಯ ಬಸವರಾಜ ತಾತನವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊರಣೇಶ್ವರ ಸ್ವಾಮೀಜಿ, 12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದಲ್ಲಿ ತುಳಿತಕ್ಕೊಳಗಾದವರು, ದುಡಿಯುವ ವರ್ಗ, ಮಹಿಳೆಯರು ಹಾಗೂ ಕಾರ್ಮಿಕರನ್ನು ಒಗ್ಗೂಡಿಸಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಜಾತಿ, ವರ್ಗ ಮತ್ತು ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತುವ ಮೂಲಕ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದರು. ಅವರ ಸಮಾನತೆಯ ಚಿಂತನೆಗಳಿಂದಾಗಿ ಬಸವಣ್ಣನವರನ್ನು ದಕ್ಷಿಣ ಭಾರತದ ಬುದ್ಧ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ಸಮಾಜದಲ್ಲಿ ಸಮಾನತೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹಾತ್ಮ ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಮಹತ್ವದ ಪಾತ್ರ ವಹಿಸಿವೆ. ಇಂತಹ ಮಹನೀಯರ ವಿಚಾರಧಾರೆಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಮೂರು ದಿನಗಳ ಅಧ್ಯಯನ ಶಿಬಿರದಲ್ಲಿ ವಿವಿಧ ಕ್ಷೇತ್ರಗಳ ಚಿಂತಕರು, ವಿದ್ವಾಂಸರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಾಂಸ್ಕೃತಿಕ ಚಿಂತನೆಗಳ ಕುರಿತು ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಶಿಬಿರಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಚ್ಚಮಠದ ಪೀಠಾಧಿಪತಿ ಬಸವರಾಜ ತಾತನವರು, ಬಾಲಸ್ವಾಮಿ ಕೊಡ್ಲಿ, ಎಂ.ಆರ್. ಬೇರಿ, ಸಂಪತ್ ರಾಜ್ ಜಾಗಿರಪ್ಪನೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾನ್ವಿ ತಾಲೂಕು ಅಧ್ಯಕ್ಷ ಅಶೋಕ್ ತಡಕಲ್, ಡಾ. ಹುಸೇನಪ್ಪ ಅಮರಾಪುರ, ಮೈಕಲ್ ಉದ್ಬಾಳ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.



