ಲಿಂಗಸುಗೂರು: ಮಸ್ಕಿ ತಾಲೂಕಿನ ಯರದೊಡ್ಡಿ ಗ್ರಾಮದ ರೈತನ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರೈತ ಸಂಘ ಹಾಗೂ ಸಿಪಿಐ (ಎಂಎಲ್) ರೆಡ್ ಸ್ಟಾರ್ ತಾಲೂಕು ಸಮಿತಿ ವತಿಯಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಮಾತನಾಡಿ, ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಡೆಸುವ ಸಂದರ್ಭದಲ್ಲಿ ಅಧಿಕಾರಿಗಳಿಂದ ಕಿರುಕುಳ ಹಾಗೂ ದೌರ್ಜನ್ಯ ನಡೆಯುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಯರದೊಡ್ಡಿ ಗ್ರಾಮದ ರೈತನ ಮೇಲೆ ನಡೆದಿರುವ ಹಲ್ಲೆ ಆರೋಪವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವೆ ಗೊಂದಲವಿದ್ದರೆ ಅದನ್ನು ಕಾನೂನುಬದ್ಧವಾಗಿ ಬಗೆಹರಿಸಬೇಕು. ವಿವಾದಿತ ಜಮೀನು ಕಂದಾಯ ಇಲಾಖೆಗೆ ಸೇರಿದ್ದೇ ಅಥವಾ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆಯೇ ಎಂಬುದನ್ನು ಪಹಣಿ, ಹಳೆಯ ಕಂದಾಯ ದಾಖಲೆಗಳು ಹಾಗೂ ಸರ್ಕಾರದ ಅಧಿಸೂಚನೆಗಳನ್ನು ಪರಿಶೀಲಿಸಿ ಸ್ಪಷ್ಟಪಡಿಸಬೇಕು. ಯಾವುದೇ ಕಾರಣಕ್ಕೂ ರೈತರ ಮೇಲೆ ಬಲಪ್ರಯೋಗ ನಡೆಸುವುದು ಸರಿಯಲ್ಲ ಎಂದು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ, ಅಧಿಕಾರಿಗಳು ಕಾನೂನುಬಾಹಿರವಾಗಿ ವರ್ತಿಸಿರುವುದು ಅಥವಾ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಅಗತ್ಯವಿದ್ದರೆ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ತನಿಖೆ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ರೈತರಿಗೆ ಯಾವುದೇ ರೀತಿಯ ಕಿರುಕುಳ ನೀಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಜಮೀನಿಗೆ ಸಂಬಂಧಿಸಿದ ವಿವಾದಗಳನ್ನು ಕಾನೂನು ಪ್ರಕ್ರಿಯೆಯ ಮೂಲಕವೇ ಇತ್ಯರ್ಥಪಡಿಸಬೇಕು. ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದಂತೆ ಮೇಲಾಧಿಕಾರಿಗಳು ನಿಗಾ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಪ್ರಕರಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದು ಕಂಡುಬಂದರೆ ರಾಜ್ಯ ಮಾನವ ಹಕ್ಕುಗಳ ಆಯೋಗವೂ ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು. ರೈತನಿಗೆ ನ್ಯಾಯ ಒದಗಿಸುವಲ್ಲಿ ವಿಳಂಬವಾದರೆ ಸಂಘಟನೆಗಳ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ರಶೀದ್ ಜಮಾದಾರ್, ತಿಪಣ್ಣ, ಹನಮಂತ ಪೂಜಾರಿ, ಮೌಲಾಸಾಬ ಸೇರಿದಂತೆ ಸಂಘಟನೆಯ ಇತರ ಮುಖಂಡರು ಉಪಸ್ಥಿತರಿದ್ದರು.



