ಅರಕೇರಾ: ಮಳೆ ಬಂದರೆ ಮನೆಯೊಳಗೆ ನೀರು ನುಗ್ಗುವ ಪರಿಸ್ಥಿತಿ, ದಿನವಿಡೀ ದುಡಿದರೂ ಕುಟುಂಬ ನಿರ್ವಹಣೆಗೆ ಸಾಲದ ಕೂಲಿ ಹಣ, ಓದಲು ಬೇಕಾದ ಬಟ್ಟೆ ಮತ್ತು ಶೂ ಖರೀದಿಸಲೂ ಪರದಾಟ. ಇಂತಹ ಕಡುಬಡತನದ ನಡುವೆ ಬೆಳೆದ ಯುವಕನೊಬ್ಬ ಇಂದು ರಾಜ್ಯಮಟ್ಟದ ಓಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಯಚೂರು ಜಿಲ್ಲೆಯ ಅರಕೇರಾ ತಾಲೂಕಿನ ಚಡಕಲಗುಡ್ಡ ಗ್ರಾಮದ ಭೀಮರಾಯ ಅವರ ಪುತ್ರ ಚನ್ನಬಸವ ಈ ಸಾಧನೆ ಮಾಡಿದ ಯುವಕ.

ಉಡುಪಿ ಜಿಲ್ಲೆಯ ಸರ್ಕಾರಿ ಬೋರ್ಡ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಚನ್ನಬಸವ, ಅಕ್ಟೋಬರ್ 6 ಮತ್ತು 7ರಂದು ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ 18 ವರ್ಷದೊಳಗಿನವರ ರಾಜ್ಯಮಟ್ಟದ ಅಥ್ಲೆಟಿಕ್ಸ್ ಪಂದ್ಯಾವಳಿಯ 1000 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಅರ್ಹತೆ ಗಳಿಸಿದ್ದಾರೆ.

ಚನ್ನಬಸವ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಹತ್ತು ವರ್ಷಗಳ ಹಿಂದೆ ಅತ್ಯಂತ ಶೋಚನೀಯವಾಗಿತ್ತು. ಮಳೆಗಾಲದಲ್ಲಿ ಮನೆಯೊಳಗೆ ನೀರು ನುಗ್ಗುತ್ತಿತ್ತು. ತಂದೆ ದಿನವಿಡೀ ಕೂಲಿ ಕೆಲಸ ಮಾಡಿದರೂ ಸಿಗುತ್ತಿದ್ದದ್ದು ಕೇವಲ 300 ರೂಪಾಯಿ. ಅಲ್ಪ ಆದಾಯದಲ್ಲಿ ಕುಟುಂಬದ ಜೀವನ ನಿರ್ವಹಣೆಯೊಂದಿಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ಹಣ ಹೊಂದಿಸುವುದು ತಂದೆ-ತಾಯಿಗೆ ದೊಡ್ಡ ಸವಾಲಾಗಿತ್ತು.

ಶಾಲೆಗೆ ಬೇಕಾದ ಬಟ್ಟೆ, ಶೂ ಹಾಗೂ ಇತರ ಅಗತ್ಯ ವಸ್ತುಗಳನ್ನು ಕೊಡಿಸಲು ತಂದೆ-ತಾಯಿ ಅನುಭವಿಸುತ್ತಿದ್ದ ಕಷ್ಟವನ್ನು ಚನ್ನಬಸವ ಬಾಲ್ಯದಿಂದಲೇ ನೋಡುತ್ತಾ ಬೆಳೆದಿದ್ದಾರೆ. ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಜೀವನದಲ್ಲಿ ಏನಾದರೂ ಸಾಧಿಸಿ ಕುಟುಂಬದ ಪರಿಸ್ಥಿತಿಯನ್ನು ಬದಲಾಯಿಸಬೇಕು ಎಂಬ ಛಲ ಅವರಲ್ಲಿ ಮೂಡಿತ್ತು. ಆರ್ಥಿಕ ಸಂಕಷ್ಟದ ನಡುವೆಯೂ ಓದು ಮತ್ತು ಕ್ರೀಡಾಭ್ಯಾಸವನ್ನು ಮುಂದುವರಿಸಿದ ಅವರು, ಈಗ ರಾಜ್ಯಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ತಮ್ಮ ಸಾಧನೆಯ ಕುರಿತು ಮಾತನಾಡಿರುವ ಚನ್ನಬಸವ, ಜೀವನದಲ್ಲಿ ಎದುರಾದ ಬಡತನವೇ ಸಾಧನೆ ಮಾಡುವ ಛಲಕ್ಕೆ ಕಾರಣವಾಯಿತು. ಕಷ್ಟಗಳು ಬಂದಾಗ ಧೈರ್ಯ ಕಳೆದುಕೊಂಡು ನಿಲ್ಲಬಾರದು. ಅವುಗಳನ್ನು ಎದುರಿಸಿ ಮುನ್ನಡೆದರೆ ಸಾಧನೆ ಮಾಡಲು ಸಾಧ್ಯ. ನನ್ನಂತೆ ಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಯುವಕರು ತಮ್ಮ ಕನಸುಗಳನ್ನು ಕೈಬಿಡಬಾರದು ಎಂದು ಹೇಳಿದ್ದಾರೆ.

ಇಂದು ತಾವು ಈ ಹಂತಕ್ಕೆ ತಲುಪಲು ಬಾಲ್ಯದಲ್ಲಿ ಅನುಭವಿಸಿದ ಸಂಕಷ್ಟಗಳೂ ಕಾರಣವಾಗಿವೆ. ಆ ದಿನಗಳ ಕಷ್ಟವೇ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ದೃಢನಿರ್ಧಾರ ಮೂಡಿಸಿತು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ತಮ್ಮ ಕ್ರೀಡಾ ಸಾಧನೆಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ ದೇವಣ್ಣ ನಾಯಕ್, ಮಂಜುನಾಥ್ ಬಿ.ಜೆ., ಅಶ್ವಿತಾ, ಮುರಳಿ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಶಿಕ್ಷಕರು ಹಾಗೂ ಚಡಕಲಗುಡ್ಡ ಗ್ರಾಮದ ಜನರಿಗೆ ಚನ್ನಬಸವ ಕೃತಜ್ಞತೆ ಸಲ್ಲಿಸಿದ್ದಾರೆ.

ಗ್ರಾಮೀಣ ಪ್ರದೇಶದ ಬಡ ಕುಟುಂಬದಿಂದ ಬಂದ ಚನ್ನಬಸವ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಚಡಕಲಗುಡ್ಡ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಲಿ ಎಂದು ಗ್ರಾಮಸ್ಥರು ಹಾಗೂ ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.