ಜಾಲಹಳ್ಳಿ, ಅ.10: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಸಂಜೆ ಪಟ್ಟಣದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಸಲಾಯಿತು.

ಪಟ್ಟಣದ ಶ್ರೀ ಲಕ್ಷ್ಮೀ ರಂಗನಾಥ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಪ್ರಮುಖ ರಸ್ತೆಗಳ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ತಲುಪಿತು. ಕೈಯಲ್ಲಿ ಪಂಜುಗಳನ್ನು ಹಿಡಿದು ಸಾಗಿದ ವಿದ್ಯಾರ್ಥಿಗಳು, ಯುವಜನರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 'ವೋಟ್ ಚೋರ್ ಗದ್ದಿ ಛೋಡ್', 'ಎಸ್‌ಐಆರ್ ರದ್ದುಗೊಳಿಸಿ', 'ಗ್ಯಾನೇಶ್ ಕುಮಾರ್ ಅವರನ್ನು ವಜಾಗೊಳಿಸಿ' ಎಂಬ ಘೋಷಣೆಗಳು ಮೆರವಣಿಗೆಯಲ್ಲಿ ಮೊಳಗಿದವು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡರಾದ ರಾಜ ವಾಸುದೇವ ನಾಯಕ, ವೇಣುಗೋಪಾಲ ಗೌಡ, ನರಸಣ್ಣ ನಾಯಕ, ರಾಜಶೇಖರ ನಾಯಕ, ಗಿರಿಯಪ್ಪ ಪೂಜಾರಿ, ಎಚ್.ಪಿ. ಬಸವರಾಜ, ಪಂಪಾಪತಿ ಹಾಗೂ ಶಬ್ಬೀರ್, ಮತದಾನದ ಹಕ್ಕು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಾಧಾರವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಕೈಬಿಡುವ ಆತಂಕ ಎದುರಾಗಿದ್ದು, ಇದನ್ನು ತಡೆಯಲು ಚುನಾವಣಾ ಆಯೋಗ ಸ್ಪಷ್ಟ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಡವರು, ಕಾರ್ಮಿಕರು, ಗ್ರಾಮೀಣ ಜನರು ಹಾಗೂ ಸಮಾಜದ ಅಂಚಿನಲ್ಲಿರುವ ಸಮುದಾಯಗಳಿಗೆ ಎಸ್‌ಐಆರ್ ಪ್ರಕ್ರಿಯೆಯಿಂದ ತೊಂದರೆಯಾಗುವ ಸಾಧ್ಯತೆಯಿದೆ. ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸುವ ನೆಪದಲ್ಲಿ ಯಾರೊಬ್ಬರೂ ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವಂತಾಗಬಾರದು. ಚುನಾವಣಾ ಆಯೋಗವು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಪಾರದರ್ಶಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದರು.

ಪ್ರಜಾಪ್ರಭುತ್ವದಲ್ಲಿ ಜನರ ಅಭಿಪ್ರಾಯ ಮತ್ತು ಪ್ರತಿಭಟಿಸುವ ಹಕ್ಕಿಗೆ ಗೌರವ ನೀಡಬೇಕು. ಆದರೆ ಮತದಾನದ ಹಕ್ಕಿನ ರಕ್ಷಣೆಗಾಗಿ ಧ್ವನಿ ಎತ್ತುತ್ತಿರುವ ವಿದ್ಯಾರ್ಥಿ ಹಾಗೂ ಯುವಜನ ಸಂಘಟನೆಗಳ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮುಖಂಡರು ಆರೋಪಿಸಿದರು. ಇಂತಹ ಕ್ರಮಗಳು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದ್ದು, ಜನರ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳಬಾರದು ಎಂದು ಹೇಳಿದರು.

ಎಸ್‌ಐಆರ್ ಪ್ರಕ್ರಿಯೆಯನ್ನು ಕೈಬಿಡುವವರೆಗೂ ಹಾಗೂ ಮತದಾನದ ಹಕ್ಕಿನ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವವರೆಗೂ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಡಿವೈಎಫ್‌ಐ ಮುಖಂಡ ರಾಜು ನಾಯಕ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನೆಯಲ್ಲಿ ಡಿವೈಎಫ್‌ಐ, ಎಸ್‌ಎಫ್‌ಐ, ಕೆಪಿಆರ್‌ಎಸ್ ಸಂಘಟನೆಗಳ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು, ವಿದ್ಯಾರ್ಥಿಗಳು ಹಾಗೂ ಯುವಜನರು ಭಾಗವಹಿಸಿದ್ದರು.