ಲಿಂಗಸುಗೂರು: ತಾಲೂಕು ಮೀನುಗಾರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಯಲ್ಲಪ್ಪ ಚಿಮ್ಮಲಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ಇಂಡಿ ಅವರು ಆಯ್ಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ಮುಖಂಡರು ಇಬ್ಬರಿಗೂ ಸನ್ಮಾನಿಸಿ ಶುಭ ಹಾರೈಸಿದರು.

ನೂತನ ಪದಾಧಿಕಾರಿಗಳ ಆಯ್ಕೆಗೆ ಸಂತಸ ವ್ಯಕ್ತಪಡಿಸಿದ ಎಂಎಲ್‌ಸಿ ಆಪ್ತ ಕಾರ್ಯದರ್ಶಿ ಚೆನ್ನಾರೆಡ್ಡಿ ಬಿರಾದಾರ, ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷ ಪ್ರಕಾಶ ಕುರಿ ಸೇರಿದಂತೆ ಹಲವು ಮುಖಂಡರು, ಸಂಘದ ಅಭಿವೃದ್ಧಿಗೆ ನೂತನ ನಾಯಕತ್ವ ಹೊಸ ಚೈತನ್ಯ ನೀಡಲಿ ಎಂದು ಆಶಿಸಿದರು.

ಈ ವೇಳೆ ಮಾತನಾಡಿದ ಚೆನ್ನಾರೆಡ್ಡಿ ಬಿರಾದಾರ, ಮೀನುಗಾರಿಕೆ ವೃತ್ತಿಯನ್ನು ಅವಲಂಬಿಸಿರುವ ಕುಟುಂಬಗಳ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಮುದಾಯದ ಎಲ್ಲರೂ ಪರಸ್ಪರ ಸಹಕಾರ ಮತ್ತು ಒಗ್ಗಟ್ಟಿನಿಂದ ಸಂಘಟನೆಯನ್ನು ಮುನ್ನಡೆಸಿದಾಗ ಮಾತ್ರ ನಿರೀಕ್ಷಿತ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಮೀನುಗಾರರ ಕಲ್ಯಾಣಕ್ಕಾಗಿ ಸರ್ಕಾರ ರೂಪಿಸಿರುವ ವಿವಿಧ ಸೌಲಭ್ಯಗಳು ಹಾಗೂ ಸಹಾಯಧನ ಯೋಜನೆಗಳ ಕುರಿತು ಸಮುದಾಯದಲ್ಲಿ ಅರಿವು ಮೂಡಿಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಪ್ರಯೋಜನ ದೊರಕಿಸಿಕೊಡುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ವಿಶೇಷ ಗಮನಹರಿಸಬೇಕು. ಸಂಘದ ಚಟುವಟಿಕೆಗಳನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುವ ಮೂಲಕ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಂಗನಗೌಡ ರೋಡಲಬಂಡಾ, ಜಟ್ಟೆಪ್ಪ ಕೋಟೆಗುಡ್ಡ, ಬರಮಣ್ಣ ಕಸಕಶಿ, ರವಿ ಹುಣಕುಂಠಿ, ಧೂಳಪ್ಪ ಕೋಡಿಹಾಲ, ಶಿವಾಜಿ ಕಟ್ಟಿಮನಿ, ಗದ್ದೆಪ್ಪ ಛಲವಾದಿ ಹಾಗೂ ಕುಮಾರ ಕಟ್ಟಿಮನಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.