ರಾಯಚೂರು: ನಗರದ ಬೇರೂನ್ ಕಿಲ್ಲೆಯಲ್ಲಿರುವ ಶ್ರೀ ಮಲ್ಲಿನಾಥ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಕೃಷ್ಣಾ ನದಿಯ ಪವಿತ್ರ ಜಲವನ್ನು ಬೆಳ್ಳಿ ಕುಂಭದಲ್ಲಿ ಹೊತ್ತು ತರುವ ಧಾರ್ಮಿಕ ಮೆರವಣಿಗೆ ದೇವಸ್ಥಾನದ ಅರ್ಚಕ ಸಂಗಮೇಶ ಪೂಜಾರ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಿತು.

ಶ್ರೀ ಮಲ್ಲಿನಾಥ ದೇವರ ನಿತ್ಯಾಭಿಷೇಕ ಹಾಗೂ ವಿಶೇಷ ಪೂಜೆಗಾಗಿ ಕೃಷ್ಣಾ ನದಿಯಿಂದ ತರಲಾದ ಜಲವನ್ನು ರಜತ ಕುಂಭದಲ್ಲಿ ತುಂಬಿಸಿ, ನಗರದ ಬಸವನಬಾವಿ ವೃತ್ತದಲ್ಲಿರುವ ಶ್ರೀ ಮಾರುತಿ ದೇವಸ್ಥಾನದಿಂದ ಪ್ರಮುಖ ರಸ್ತೆಗಳ ಮೂಲಕ ಬೇರೂನ್ ಕಿಲ್ಲೆಯ ಶ್ರೀ ಮಲ್ಲಿನಾಥ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು.

ಪತ್ರಕರ್ತ, ಕಲಾವಿದ ಹಾಗೂ ಛಾಯಾಗ್ರಾಹಕ ಪಿಕಳಿಹಾಳ ಅಯ್ಯಪ್ಪ ಸ್ವಾಮಿ ಹಿರೇಮಠ ಅವರು ಕಳೆದ 15ರಿಂದ 20 ವರ್ಷಗಳಿಂದ ನಿರಂತರವಾಗಿ ಈ ಧಾರ್ಮಿಕ ಸೇವೆಯಲ್ಲಿ ಪಾಲ್ಗೊಂಡು ಜಲ ತುಂಬಿದ ಕುಂಭವನ್ನು ಹೊತ್ತು ತರುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಮೆರವಣಿಗೆಗೂ ಮುನ್ನ ದೇವಸ್ಥಾನದ ಅರ್ಚಕ ಸಂಗಮೇಶ ಪೂಜಾರ ಅವರು ಅಯ್ಯಪ್ಪ ಸ್ವಾಮಿ ಹಿರೇಮಠ ಅವರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ, ಶಿರದ ಮೇಲೆ ಮೈಸೂರು ಪೇಟ ತೊಡಿಸಿ ಗೌರವಪೂರ್ವಕವಾಗಿ ಸ್ವಾಗತಿಸಿದರು.

ಬಾಜಾ ಭಜಂತ್ರಿ, ಛತ್ರಿ, ಚಾಮರ, ನಂದಿಕೋಲ ಸೇವೆ ಹಾಗೂ ಮಹಿಳೆಯರ ಕಳಸಗಳೊಂದಿಗೆ ನಡೆದ ಮೆರವಣಿಗೆ ಭಕ್ತಿಭಾವದಿಂದ ಕೂಡಿತ್ತು. ಅಯ್ಯಪ್ಪ ಸ್ವಾಮಿ ಹಿರೇಮಠ ಅವರು ಜಲ ತುಂಬಿದ ಕುಂಭವನ್ನು ಹೊತ್ತು ಸಾಗುತ್ತಿದ್ದ ಸಂದರ್ಭದಲ್ಲಿ ಮಾರ್ಗದುದ್ದಕ್ಕೂ ಮಹಿಳೆಯರು ಹಾಗೂ ಭಕ್ತರು ಅವರ ಪಾದಗಳಿಗೆ ನೀರೆರೆದು ನಮಸ್ಕರಿಸಿ ಭಕ್ತಿ ಸಮರ್ಪಿಸಿದರು.

ಮೆರವಣಿಗೆ ದೇವಸ್ಥಾನ ತಲುಪಿದ ಬಳಿಕ ಜಲ ತುಂಬಿದ ಬೆಳ್ಳಿ ಕುಂಭವನ್ನು ಶ್ರೀ ಮಲ್ಲಿನಾಥ ದೇವರ ಗರ್ಭಗುಡಿಯಲ್ಲಿ ಇರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಕೃಷ್ಣಾ ನದಿಯ ಪವಿತ್ರ ಜಲದಿಂದ ದೇವರಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ಸಲ್ಲಿಸಲಾಯಿತು.

ಧಾರ್ಮಿಕ ಕಾರ್ಯಕ್ರಮದ ಬಳಿಕ ನೂರಾರು ಭಕ್ತರು ಮಹಾಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಸೇವಾ ಸಮಿತಿ ಪದಾಧಿಕಾರಿಗಳು, ಬೇರೂನ್ ಕಿಲ್ಲೆ ಬಡಾವಣೆಯ ನಿವಾಸಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.