ದೇವದುರ್ಗ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು, ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ದೇವದುರ್ಗ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದರು. ಇದಕ್ಕೂ ಮುನ್ನ ಭಾನುವಾರ ಹೂವಿನ ಹೆಡಗಿಯ ನ್ಯಾಷನಲ್ ಸ್ಕೂಲ್ನಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಸಂಸ್ಥಾಪಕ ಸದಸ್ಯರ ಒಪ್ಪಿಗೆಯೊಂದಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಒಕ್ಕೂಟದ ನೂತನ ಅಧ್ಯಕ್ಷ ಮಾರೆಪ್ಪ ಕೊತ್ತದೊಡ್ಡಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮಹತ್ವದ ಕೊಡುಗೆ ನೀಡುತ್ತಿವೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದರ ಜೊತೆಗೆ ಶಿಕ್ಷಕರನ್ನು ಗೌರವಿಸುವುದು, ಮಕ್ಕಳ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ ನೀಡುವುದು ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುವ ಮೂಲಕ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುತ್ತಿವೆ ಎಂದರು.
ಗ್ರಾಮೀಣ ಭಾಗದ ಮಕ್ಕಳಿಗೂ ಉತ್ತಮ ಶೈಕ್ಷಣಿಕ ಸೌಲಭ್ಯಗಳು ದೊರೆಯಬೇಕು. ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಘಟಿತವಾಗಿ ಪರಿಹರಿಸಲು ಪ್ರಯತ್ನಿಸಲಾಗುವುದು. ಎಲ್ಲ ಪದಾಧಿಕಾರಿಗಳ ಸಹಕಾರದೊಂದಿಗೆ ಒಕ್ಕೂಟವನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಲಾಗುವುದು ಎಂದು ಹೇಳಿದರು.
ಒಕ್ಕೂಟದ ಗೌರವಾಧ್ಯಕ್ಷ ತಿರುಪತಿ ಸೂಗೂರು ಮಾತನಾಡಿ, ಸಂಘಟನೆಯ ಅಭಿವೃದ್ಧಿಗೆ ಹಿರಿಯರ ಅನುಭವದ ಜೊತೆಗೆ ಯುವಕರ ನಾಯಕತ್ವವೂ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಯುವ ಪ್ರತಿಭೆಗಳಿಗೆ ಆದ್ಯತೆ ನೀಡಿ ವಿವಿಧ ಜವಾಬ್ದಾರಿಗಳನ್ನು ವಹಿಸಲಾಗಿದೆ. ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿ ಕಾಪಾಡುವುದು, ಅವುಗಳ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಸಂಘಟನೆಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸುವುದು ನೂತನ ಪದಾಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ದೇಸಾಯಿ ಮಾತನಾಡಿ, ಖಾಸಗಿ ಶಾಲೆಗಳ ಕುರಿತು ಸಾರ್ವಜನಿಕರಲ್ಲಿ ಇರುವ ಕೆಲವು ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಅಗತ್ಯವಿದೆ. ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಕಡಿಮೆ ಶುಲ್ಕದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನೂ ಒದಗಿಸುತ್ತಿವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಒಕ್ಕೂಟದ ಆಶಯವಾಗಿದೆ ಎಂದರು.
ಒಕ್ಕೂಟದ ನೂತನ ಅಧ್ಯಕ್ಷರಾಗಿ ಮಾರೆಪ್ಪ ಕೊತ್ತದೊಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ದೇಸಾಯಿ (ಗಬ್ಬೂರು), ಖಜಾಂಚಿಯಾಗಿ ಬಸವರಾಜ ಮಡಿವಾಳ (ದೇವದುರ್ಗ) ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸಿದ್ಧಯ್ಯತಾತಾ (ದೇವದುರ್ಗ), ಮಲ್ಲಪ್ಪ ಕುಂಬಾರ (ಮಸರಕಲ್), ಶಿವಣ್ಣ ಗಲಗ್, ಬಸವರಾಜ ಕೊಪ್ಪರ ಹಾಗೂ ಪಾಮನಗೌಡ ಮಜ್ಜಿಗಿ ಆಯ್ಕೆಯಾಗಿದ್ದಾರೆ.
ಸಂಘಟನಾ ಕಾರ್ಯದರ್ಶಿಗಳಾಗಿ ಸುಭಾಷ್ ಕೊಪ್ಪರ, ಚನ್ನಬಸವ ಗುರುವಿನ್ ತಾತಾ (ಗಬ್ಬೂರು), ಮಲ್ಲು ಹೂಗಾರ್ (ಗಾಣಧಾಳ), ವೆಂಕೋಬ ಮಾನಸಗಲ್ ಹಾಗೂ ಚಾಂದಪಾಶಾ ಆಲ್ಕೋಡ ಅವರನ್ನು ಆಯ್ಕೆ ಮಾಡಲಾಗಿದೆ.
ಕಾನೂನು ಸಲಹೆಗಾರರಾಗಿ ರಾಘವೇಂದ್ರ ಕೋಲ್ಕರ್ (ಜಾಲಹಳ್ಳಿ) ಮತ್ತು ಶರಣಗೌಡ ಪಾಟೀಲ್ (ಮಸರಕಲ್) ನೇಮಕಗೊಂಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳಾಗಿ ಶರಣು ಪಲ್ಲೇದ (ಬಿ. ಗುಣೇಕಲ್), ಮೇರಾಜ್ ಅಹಮ್ಮದ್ (ಹೂವಿನ ಹೆಡಗಿ) ಹಾಗೂ ಯಲ್ಲಪ್ಪ (ಹೂವಿನ ಹೆಡಗಿ) ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಪ್ರಕಾಶ್ ಖೇಣೇದ್ (ದೇವದುರ್ಗ), ತಿರುಪತಿ ಸೂಗೂರು (ದೇವದುರ್ಗ), ಚನ್ನಪ್ಪ ಬೂದಿನಾಳ (ಗಬ್ಬೂರು) ಹಾಗೂ ಬಸವರಾಜ ಪಂಪಾಪತಿ (ಜಾಲಹಳ್ಳಿ) ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ, ಗ್ರಾಮೀಣ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸುವುದಾಗಿ ತಿಳಿಸಿದರು.



