ಸಿಂಧನೂರು, ಅ.12: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ಸ್ಥಳೀಯ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರ ಸಹಕಾರದೊಂದಿಗೆ ಅಗತ್ಯ ಅನುದಾನ ಸಂಗ್ರಹಿಸಿ, ನಗರದಲ್ಲಿ ಸರ್ಕಾರಿ ನೌಕರರ ಸಂಘದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಂಘದ ತಾಲೂಕು ಅಧ್ಯಕ್ಷ ಹಾಗೂ ವಿಭಾಗೀಯ ಉಪಾಧ್ಯಕ್ಷ ಚಂದ್ರಶೇಖರ ಹಿರೇಮಠ ತಿಳಿಸಿದರು.
ನಗರದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ನೌಕರರ ಹಿತಾಸಕ್ತಿ ಕಾಪಾಡುವುದು ಹಾಗೂ ಅವರ ಸೇವೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸುವುದು ಸಂಘದ ಪ್ರಮುಖ ಆದ್ಯತೆಯಾಗಿದೆ. ಸಂಘಟನೆಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವುದರ ಜೊತೆಗೆ ಸದಸ್ಯರ ನ್ಯಾಯಯುತ ಬೇಡಿಕೆಗಳಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಚುನಾಯಿತ ಜನಪ್ರತಿನಿಧಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಲಹೆ, ಸಹಕಾರ ಪಡೆದು ಪ್ರಸ್ತುತ ಅವಧಿಯಲ್ಲಿಯೇ ಸಾಂಸ್ಕೃತಿಕ ಭವನ ನಿರ್ಮಾಣದ ಕಾರ್ಯಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಂಘದ ಸದಸ್ಯರಿಗೆ ವಿವಿಧ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಂಘಟನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಕ್ತ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈ ಮಹತ್ವದ ಯೋಜನೆಯನ್ನು ಸಾಕಾರಗೊಳಿಸಲು ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಜೊತೆಗೆ ಸರ್ಕಾರಿ ನೌಕರರ ಸಂಘದ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ವಿವಿಧ ವೃಂದ ಸಂಘಗಳ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಕಾರ್ಯಾಗಾರ ಹಮ್ಮಿಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ಮೋಹನ್ ಹಿಂದಿನ ಸಭೆಯ ನಡಾವಳಿಗಳನ್ನು ಮಂಡಿಸಿ ಸದಸ್ಯರಿಂದ ಅನುಮೋದನೆ ಪಡೆದರು. ರಾಜ್ಯ ಪರಿಷತ್ ಸದಸ್ಯ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂಘದ ಈವರೆಗಿನ ಕಾರ್ಯಚಟುವಟಿಕೆಗಳ ವರದಿಯನ್ನು ಸಭೆಯ ಮುಂದಿಟ್ಟು ಒಪ್ಪಿಗೆ ಪಡೆದರು.
ಖಜಾಂಚಿ ವೀರನಗೌಡ ಅವರು 2025-26ನೇ ಸಾಲಿನ ಸಂಘದ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಇದೇ ವೇಳೆ 2026-27ನೇ ಸಾಲಿನ ನಿರೀಕ್ಷಿತ ಆದಾಯ ಮತ್ತು ಖರ್ಚು ವೆಚ್ಚಗಳ ಮುಂಗಡ ಅಂದಾಜು ಪತ್ರಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಸಭೆಯ ಅಂಗವಾಗಿ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳನ್ನು ಕಂದಾಯ ಇಲಾಖೆ ನೌಕರರ ಸಂಘದ ತಾಲೂಕು ಶಾಖೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಪರಸಪ್ಪ, ಜಿಲ್ಲಾ ಉಪಾಧ್ಯಕ್ಷ ಭರತ್ ಕುಮಾರ, ಸಂಘಟನಾ ಕಾರ್ಯದರ್ಶಿ ಶಹಮೀದ್, ತಾಲೂಕು ಉಪಾಧ್ಯಕ್ಷರಾದ ಸೈಯದ್ ಫಸೀವುಲ್ಲಾ, ಹನುಮಂತ, ಸಹ ಕಾರ್ಯದರ್ಶಿ ಚೆನ್ನಬಸವ, ಮಹಿಳಾ ಸಂಘಟನಾ ಕಾರ್ಯದರ್ಶಿ ಶ್ರೀದೇವಿ ಸೇರಿದಂತೆ ವಿವಿಧ ಇಲಾಖೆಗಳ ನೌಕರರು, ವೃಂದ ಸಂಘಗಳ ಮುಖ್ಯಸ್ಥರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.



