ಜಾಲಹಳ್ಳಿ, ಅ.12: ಅರಕೇರಾ ತಾಲೂಕಿಗೆ ಸೇರ್ಪಡೆಗೊಳಿಸಿರುವ ಗಾಣದಾಳ ಹಾಗೂ ಸೋಮನಮರಡಿ ಗ್ರಾಮ ಪಂಚಾಯಿತಿಗಳನ್ನು ಪುನಃ ದೇವದುರ್ಗ ತಾಲೂಕು ವ್ಯಾಪ್ತಿಗೆ ಸೇರಿಸಬೇಕು ಎಂದು ಆಗ್ರಹಿಸಿ ಎರಡೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸಾವಿರಾರು ಗ್ರಾಮಸ್ಥರು ಸೋಮವಾರ ಜಾಲಹಳ್ಳಿಯ ನಾಡಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಅರಕೇರಾ ತಾಲೂಕು ರಚನೆಯ ಸಂದರ್ಭದಲ್ಲಿ ಭೌಗೋಳಿಕ ಹಾಗೂ ಸಾರ್ವಜನಿಕರ ಅನುಕೂಲಗಳನ್ನು ಸಮರ್ಪಕವಾಗಿ ಪರಿಗಣಿಸದೆ ಗಾಣದಾಳ ಮತ್ತು ಸೋಮನಮರಡಿ ಗ್ರಾಮ ಪಂಚಾಯಿತಿಗಳನ್ನು ಹೊಸ ತಾಲೂಕಿಗೆ ಸೇರಿಸಲಾಗಿದೆ. ಇದರಿಂದ ಶಿಕ್ಷಣ, ಆರೋಗ್ಯ, ಸಾರಿಗೆ, ವ್ಯಾಪಾರ ಹಾಗೂ ಸರ್ಕಾರಿ ಕಚೇರಿಗಳ ಕೆಲಸಗಳಿಗೆ ಸಾರ್ವಜನಿಕರು ಅನಗತ್ಯವಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಗಾಣದಾಳ, ಕಕ್ಕಲದೊಡ್ಡಿ, ಸೋಮನಮರಡಿ, ಬೋಗಿರಾಮನಗುಂಡ, ಸಂಪತ್ರಾಯನದೊಡ್ಡಿ, ಮಯಕಲದೊಡ್ಡಿ, ಕಮಲದಿನ್ನಿ ಸೇರಿದಂತೆ ವಿವಿಧ ಗ್ರಾಮಗಳಿಂದ ಮಹಿಳೆಯರು, ಯುವಕರು ಹಾಗೂ ಹಿರಿಯ ನಾಗರಿಕರು ಪ್ರತ್ಯೇಕ ಮಾರ್ಗಗಳಲ್ಲಿ ಪಾದಯಾತ್ರೆ ನಡೆಸಿ ಜಾಲಹಳ್ಳಿಗೆ ಆಗಮಿಸಿದರು. ನಾಡಕಚೇರಿ ಎದುರು ಜಮಾಯಿಸಿದ ಗ್ರಾಮಸ್ಥರು ತಮ್ಮ ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನು ಕೂಗಿ ಸರ್ಕಾರದ ಗಮನ ಸೆಳೆದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಕೀಲ ಬಸವರಾಜ್ ಗಾಣದಾಳ, ಜಾಲಹಳ್ಳಿ ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ನಾಡಕಚೇರಿ, ಪೊಲೀಸ್ ಠಾಣೆ, ಪಶುಚಿಕಿತ್ಸಾಲಯ, ಕೃಷಿ ಕೇಂದ್ರ, ಅಂಚೆ ಕಚೇರಿ, 33 ಕೆ.ವಿ. ವಿದ್ಯುತ್ ಕೇಂದ್ರ ಹಾಗೂ ಬ್ಯಾಂಕ್ಗಳು ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಾದ ಸೌಲಭ್ಯಗಳಿವೆ. ರಾಜ್ಯ ಹೆದ್ದಾರಿ ಸಂಖ್ಯೆ 61 ಜಾಲಹಳ್ಳಿ ಮೂಲಕ ಹಾದುಹೋಗುವುದರಿಂದ ರಾಯಚೂರು ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧ ಪಟ್ಟಣಗಳಿಗೆ ಸುಗಮ ಸಾರಿಗೆ ಸಂಪರ್ಕವಿದೆ ಎಂದು ವಿವರಿಸಿದರು.
ಗಾಣದಾಳ ಮತ್ತು ಸೋಮನಮರಡಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಜನರು ಹಲವು ವರ್ಷಗಳಿಂದ ಜಾಲಹಳ್ಳಿಯನ್ನೇ ತಮ್ಮ ಪ್ರಮುಖ ವ್ಯಾಪಾರ ಹಾಗೂ ಆಡಳಿತಾತ್ಮಕ ಕೇಂದ್ರವನ್ನಾಗಿ ಅವಲಂಬಿಸಿದ್ದಾರೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಎರಡೂ ಗ್ರಾಮ ಪಂಚಾಯಿತಿಗಳನ್ನು ದೇವದುರ್ಗ ತಾಲೂಕು ಹಾಗೂ ಜಾಲಹಳ್ಳಿ ಹೋಬಳಿಗೆ ಮರುಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಸಾಬಣ್ಣ ಕಮ್ಮಾಲದಿನ್ನಿ ಮಾತನಾಡಿ, ಅರಕೇರಾ ತಾಲೂಕಿಗೆ ಸೇರ್ಪಡೆಯಾದ ನಂತರ ಜನರು ವಿವಿಧ ಸರ್ಕಾರಿ ಕೆಲಸಗಳಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮಗಳ ಭೌಗೋಳಿಕ ಸ್ಥಿತಿ, ಸಾರಿಗೆ ಸಂಪರ್ಕ ಹಾಗೂ ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಗಣಿಸದೆ ಆಡಳಿತಾತ್ಮಕ ಗಡಿಗಳನ್ನು ನಿರ್ಧರಿಸುವುದು ಸರಿಯಲ್ಲ. ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಜನರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 4(2)(ಎ) ಹಾಗೂ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಸಂಬಂಧಿತ ಕಾನೂನುಗಳಡಿ ಗ್ರಾಮ ಪಂಚಾಯಿತಿಗಳ ಆಡಳಿತಾತ್ಮಕ ವ್ಯಾಪ್ತಿಯನ್ನು ಮರುಪರಿಶೀಲಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.
2025ರ ಅಕ್ಟೋಬರ್ 18ರಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ದೇವದುರ್ಗ ಹಾಗೂ ಅರಕೇರಾ ತಹಸೀಲ್ದಾರ್ಗಳಿಗೆ ಈ ಕುರಿತು ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದ್ದರೂ, ಇದುವರೆಗೆ ಯಾವುದೇ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸ್ಥಳಕ್ಕೆ ಆಗಮಿಸಿದ ಎರಡೂ ತಾಲೂಕುಗಳ ತಹಸೀಲ್ದಾರ್ ಕಚೇರಿಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಶಿವನಗೌಡ ದೇಸಾಯಿ, ಗಾಣದಾಳ ಮತ್ತು ಸೋಮನಮರಡಿ ಗ್ರಾಮ ಪಂಚಾಯಿತಿಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸುವ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸಿದರೆ ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಮುಖಂಡ ನರಸಣ್ಣ ನಾಯಕ ಮಾತನಾಡಿ, ಹಿಂದಿನ ಜನಪ್ರತಿನಿಧಿಗಳ ಆಡಳಿತ ವೈಖರಿಯನ್ನು ಟೀಕಿಸಿದರು. ಆಲ್ಕೋಡ್ ಹನುಮಂತಪ್ಪ ಅವರನ್ನು ಹೊರತುಪಡಿಸಿದರೆ ಸಾರ್ವಜನಿಕರ ಆರೋಗ್ಯ, ಶಿಕ್ಷಣ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಿದವರು ವಿರಳ ಎಂದು ಅಭಿಪ್ರಾಯಪಟ್ಟ ಅವರು, ಬಹುತೇಕರು ವೈಯಕ್ತಿಕ ಹಿತಾಸಕ್ತಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದು ಆರೋಪಿಸಿದರು.
ಅರಕೇರಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವ ಬದಲು ಜಾಲಹಳ್ಳಿ ಹಾಗೂ ಗಬ್ಬೂರನ್ನು ತಾಲೂಕು ಕೇಂದ್ರಗಳನ್ನಾಗಿ ಪರಿಗಣಿಸಬೇಕಿತ್ತು. ಆದರೆ ರಾಜಕೀಯ ಹಾಗೂ ವೈಯಕ್ತಿಕ ಹಿತಾಸಕ್ತಿಗಳ ಕಾರಣದಿಂದ ದೂರದ ಗ್ರಾಮಗಳನ್ನು ಅರಕೇರಾ ತಾಲೂಕಿಗೆ ಸೇರಿಸಲಾಗಿದೆ ಎಂದು ಆರೋಪಿಸಿದ ಅವರು, ಮಾಜಿ ಸಚಿವ ಕೆ. ಶಿವನಗೌಡ ನಾಯಕ ಅವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಬುಡ್ಡನಗೌಡ ಜಾಗಟಗಲ್, ವಕೀಲ ಬಸನಗೌಡ ದೇಸಾಯಿ, ಸಿದ್ದನಗೌಡ ಮೂಡಲಗುಂಡ, ವಕೀಲ ವಸಂತಕುಮಾರ್, ಹನುಮಂತ ಕಾಕರಗಲ್, ಶಿವರಾಜ್ ನಾಯಕ, ಗಿರಿಯಪ್ಪ ಪೂಜಾರಿ, ಮೌನೇಶ ಗಾಣದಾಳ ಹಾಗೂ ಶಿವಪ್ಪ ಪಲಕನಮರಡಿ ಮಾತನಾಡಿ ಗ್ರಾಮಸ್ಥರ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದರು.
ಗ್ರಾಮಸ್ಥರ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ ಬಳಿಕ ಪ್ರತಿಭಟನಾಕಾರರು ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ರಂಗಣ್ಣ ಕೊಲ್ಕರ್, ಶಿವರಾಜ್ ನಾಯಕ ಕೊತ್ತದೊಡ್ಡಿ, ಬಸವರಾಜ್ ಪಂಪಾಪತಿ, ಅಮರೇಗೌಡ ಕಮ್ಮಾಲದಿನ್ನಿ, ಶರಣಗೌಡ ಕಮ್ಮಾಲದಿನ್ನಿ, ವೆಂಕಟರೆಡ್ಡಿ ಕಕ್ಕಲದೊಡ್ಡಿ, ಸಾಬಣ್ಣ ಹೂಗಾರ್, ಅಯ್ಯನಗೌಡ ಮಾಸ್ತಿ, ಶಿವು ಪಾಟೀಲ್, ನಾಗರಾಜ್, ಅಬ್ರಹಾಂ ಕಮ್ಮಾಲದಿನ್ನಿ, ಹನುಮಂತ ಸೋಮನಮರಡಿ, ಎಂ.ಆರ್. ಬಸವ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು, ಮಹಿಳೆಯರು ಹಾಗೂ ಸಾವಿರಾರು ಗ್ರಾಮಸ್ಥರು ಭಾಗವಹಿಸಿದ್ದರು.



