ಮಾನ್ವಿ: ನಾಡು, ನುಡಿ, ಸಂಸ್ಕೃತಿ ಹಾಗೂ ಜನರ ರಕ್ಷಣೆಗಾಗಿ ವೀರ ಮದಕರಿ ನಾಯಕರು ನಡೆಸಿದ ಹೋರಾಟ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದ್ದು, ಅವರ ಶೌರ್ಯ, ಸಾಹಸ ಮತ್ತು ಸ್ವಾಭಿಮಾನ ಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು ಎಂದು ಉಪನ್ಯಾಸಕ ಅಂಬಣ್ಣ ನಾಯಕ ಉಮಳಿ ಹೊಸೂರು ಹೇಳಿದರು.

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಆಯೋಜಿಸಿದ್ದ ರಾಜಾ ವೀರ ಮದಕರಿ ನಾಯಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಸಂಸ್ಥಾನದ ಇತಿಹಾಸ, ನಾಯಕ ಅರಸರ ಆಡಳಿತ ವ್ಯವಸ್ಥೆ ಹಾಗೂ ಮದಕರಿ ನಾಯಕರ ಕೊಡುಗೆಗಳನ್ನು ಸ್ಮರಿಸಿದರು.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕರ್ನಾಟಕದಲ್ಲಿ ಪ್ರಾಬಲ್ಯಕ್ಕೆ ಬಂದ ಪಾಳೆಯಗಾರ ಮನೆತನಗಳಲ್ಲಿ ಚಿತ್ರದುರ್ಗ ಸಂಸ್ಥಾನ ಪ್ರಮುಖವಾದುದು. ಆರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಡಳಿತ ನಡೆಸಿದ ನಾಯಕ ಅರಸರು, ನಂತರ ಸ್ವತಂತ್ರವಾಗಿ ಸುಮಾರು 211 ವರ್ಷಗಳ ಕಾಲ ಚಿತ್ರದುರ್ಗವನ್ನು ಕೇಂದ್ರವಾಗಿಸಿಕೊಂಡು ಆಡಳಿತ ನಡೆಸಿದರು. ಕರ್ನಾಟಕದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲಿ ಚಿತ್ರದುರ್ಗ ಸಂಸ್ಥಾನಕ್ಕೆ ವಿಶಿಷ್ಟ ಸ್ಥಾನವಿದೆ ಎಂದು ವಿವರಿಸಿದರು.

ಚಿತ್ರದುರ್ಗ ಸಂಸ್ಥಾನದ ಪ್ರಸಿದ್ಧ ಅರಸರಲ್ಲಿ ಐದನೇ ರಾಜಾ ವೀರ ಮದಕರಿ ನಾಯಕರು ಪ್ರಮುಖರಾಗಿದ್ದಾರೆ. ಸಂಸ್ಥಾನದ ಸ್ವಾಭಿಮಾನ, ಪ್ರಜೆಗಳ ಹಿತಾಸಕ್ತಿ ಹಾಗೂ ನಾಡಿನ ರಕ್ಷಣೆಗಾಗಿ ಅವರು ತೋರಿದ ಧೈರ್ಯ ಮತ್ತು ಹೋರಾಟದ ಮನೋಭಾವ ಇಂದಿಗೂ ಸ್ಮರಣೀಯವಾಗಿದೆ. ಅವರ ಜೀವನ ಚರಿತ್ರೆಯನ್ನು ಯುವಜನತೆಗೆ ಪರಿಚಯಿಸುವ ಮೂಲಕ ಇತಿಹಾಸದ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಬೇಡರ ಪಡೆಯ ರಾಜ್ಯಾಧ್ಯಕ್ಷ ಅಂಬಣ್ಣ ನಾಯಕ ಗುಜ್ಜಲ್ ಮಾತನಾಡಿ, 77 ಪಾಳೆಪಟ್ಟುಗಳ ಇತಿಹಾಸ, ಪಾಳೆಯಗಾರರ ಆಡಳಿತ ವ್ಯವಸ್ಥೆ ಹಾಗೂ ಅವರ ಹೋರಾಟಗಳ ಕುರಿತು ಮಾಹಿತಿ ನೀಡಿದರು. ನಾಡಿನ ಇತಿಹಾಸ ನಿರ್ಮಾಣದಲ್ಲಿ ಪಾಳೆಯಗಾರರ ಪಾತ್ರ ಮಹತ್ವದ್ದಾಗಿದ್ದು, ಅವರ ಸಾಧನೆ ಮತ್ತು ಸಮುದಾಯದ ಐತಿಹಾಸಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ವಕೀಲ ಶಿವರಾಜ್ ನಾಯಕ ಮಾತನಾಡಿ, ಮದಕರಿ ನಾಯಕರ ಆಡಳಿತಾವಧಿಯಲ್ಲಿ ಕೋಟೆ, ಕೊತ್ತಲಗಳ ನಿರ್ಮಾಣ, ಕೆರೆ ಮತ್ತು ಕಾಲುವೆಗಳ ಅಭಿವೃದ್ಧಿ, ರಕ್ಷಣಾ ವ್ಯವಸ್ಥೆಯ ಬಲವರ್ಧನೆ ಹಾಗೂ ಜನಜೀವನಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಸ್ಮರಿಸಿದರು. ಇಂತಹ ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೆ, ಅವರ ಆದರ್ಶಗಳನ್ನು ಸಮಾಜದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶಿವರಾಜ ಸಾಹುಕಾರ ನಾಯ್ಡು ನಾಯಕ ಮಾನ್ವಿ, ಸಿದ್ರಾಮಪ್ಪ ಸಾಹುಕಾರ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಭಾಗಯ್ಯ ನಾಯಕ, ವೆಂಕಟೇಶ ನಾಯಕ, ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಪ್ರಧಾನ ಕಾರ್ಯದರ್ಶಿ ಕೊಂಡಯ್ಯ ನಾಯಕ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಯಚೂರು ಜಿಲ್ಲಾಧ್ಯಕ್ಷ ಹನುಮೇಶ ನಾಯಕ ಸಾದಾಪುರ, ಪ್ರಭುರಾಜ ಕೊಡ್ಲಿ, ಜಿ. ನರಸಿಂಹ ನಾಯಕ ಕರಡಿಗುಡ್ಡ, ಅಮರೇಶ ನಾಯಕ, ಈರಣ್ಣ ನಾಯಕ, ಮಾರೆಪ್ಪ ನಾಯಕ ಬಲ್ಲಟಗಿ, ತಿಮ್ಮೇಶ ನಾಯಕ, ದೇವಪ್ಪ ನಾಯಕ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಮಾನ್ವಿ ತಾಲೂಕು ಅಧ್ಯಕ್ಷ ರಮೇಶ ನಾಯಕ, ನಾಗಪ್ಪ ನಾಯಕ ಅರಕೇರಾ, ವಕೀಲ ಬಸವಲಿಂಗ ನಾಯಕ, ಜಗದೀಶ ನಾಯಕ, ವೀರೇಶ ನಾಯಕ, ಮಹೇಶ ಕುಮಾರ ಬೆಟ್ಟದೂರು ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.