ದೇವದುರ್ಗ: ಪ್ರತಿಯೊಬ್ಬರೂ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಸಮಾಜದಲ್ಲಿ ಬೇರೂರಿರುವ ವರದಕ್ಷಿಣೆ, ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡಲು ಶಿಕ್ಷಣ ಮತ್ತು ಜನಜಾಗೃತಿ ಅತ್ಯಗತ್ಯವಾಗಿದೆ ಎಂದು ದೇವದುರ್ಗದ ನ್ಯಾಯಾಧೀಶ ಸುರೇಶ್ ಅಣ್ಣಪ್ಪ ಸವದಿ ಹೇಳಿದರು.

ಪಟ್ಟಣದ ಡಾನ್ ಬಾಸ್ಕೋ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಡಾನ್ ಬಾಸ್ಕೋ ಮೈಂಡ್ಸ್ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ಜಾಗೃತಿ, ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನಾಚರಣೆ ಹಾಗೂ ವರದಕ್ಷಿಣೆ ನಿರ್ಮೂಲನೆ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾನವನ ಬದುಕಿನಲ್ಲಿ ವೈಯಕ್ತಿಕ ಏಳಿಗೆಯಷ್ಟೇ ಸಮಾಜದ ಅಭಿವೃದ್ಧಿಯೂ ಮುಖ್ಯವಾಗಿದೆ. ನಮಗಾಗಿ ಮಾಡಿದರೆ ಮನುಷ್ಯ ಗುಣ, ಪರರಿಗಾಗಿ ಮಾಡಿದರೆ ದೈವ ಗುಣ ಎಂಬ ಮಾತಿನಂತೆ ಪ್ರತಿಯೊಬ್ಬರೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸಾಮಾಜಿಕ ಅನಿಷ್ಟ ಪದ್ಧತಿಗಳಿಂದ ಜನರನ್ನು ಮುಕ್ತಗೊಳಿಸಲು ಕಾನೂನಿನ ಅರಿವು ಹಾಗೂ ಶಿಕ್ಷಣದ ಮೂಲಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ನ್ಯಾಯಾಧೀಶ ರಫೀಕ್ ಅಹ್ಮದ್ ಮಾತನಾಡಿ, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಮಾನಸಿಕ ಸದೃಢತೆ, ದೈಹಿಕ ಆರೋಗ್ಯ ಹಾಗೂ ಏಕಾಗ್ರತೆ ಅಗತ್ಯವಾಗಿದೆ. ಮಾನಸಿಕ ಒತ್ತಡ ಅಥವಾ ಸಮಸ್ಯೆಗಳು ಎದುರಾದಾಗ ಆಪ್ತಸಮಾಲೋಚನೆ ಮತ್ತು ತಜ್ಞರ ನೆರವು ಪಡೆಯಲು ಹಿಂಜರಿಯಬಾರದು. ಬಾಲ್ಯವಿವಾಹದಿಂದ ಮಕ್ಕಳನ್ನು ರಕ್ಷಿಸಿ ಅವರಿಗೆ ಉತ್ತಮ ಭವಿಷ್ಯ ರೂಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಹಾಗೂ ಮನೋವೈದ್ಯ ಡಾ. ಮನೋಹರ್ ವೈ. ಪತ್ತಾರ್ ಮಾತನಾಡಿ, ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ದೂರಮಾಡಬೇಕು. ಮಾನಸಿಕ ಸಮಸ್ಯೆ ಎದುರಿಸುತ್ತಿರುವವರನ್ನು ಹೀಯಾಳಿಸದೆ ಗೌರವ, ಪ್ರೀತಿ ಹಾಗೂ ಕಾಳಜಿಯಿಂದ ಕಾಣಬೇಕು. ಅಗತ್ಯವಿದ್ದಾಗ ವೈದ್ಯಕೀಯ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆ ಪಡೆಯುವುದು ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕ ಫಾದರ್ ಜಾನ್ ಪೌಲ್ ಮಾತನಾಡಿ, ದೇವದುರ್ಗ ತಾಲೂಕಿನ 50 ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮೈಂಡ್ಸ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರಲ್ಲಿ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯಕ್ಕೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಮೈಂಡ್ಸ್ ಯೋಜನೆಯ ಜಿಲ್ಲಾ ಸಂಯೋಜಕ ಸಿದ್ದಲಿಂಗಪ್ಪ ಕಾಕರಗಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೆಣ್ಣುಮಕ್ಕಳಿಗೆ ಶಿಕ್ಷಣ, ರಕ್ಷಣೆ ಹಾಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು. ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆಯ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ವಾತಾವರಣ ನಿರ್ಮಾಣವಾಗಬೇಕು ಎಂದು ತಿಳಿಸಿದರು.

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದು, ಪೌಷ್ಟಿಕ ಆಹಾರ ಸೇವಿಸುವುದು, ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಮಾದಕ ಪದಾರ್ಥಗಳಿಂದ ದೂರವಿರುವುದು ಅಗತ್ಯವಾಗಿದೆ. ಮಾನಸಿಕ ಒತ್ತಡ ಎದುರಾದಾಗ ಮುಕ್ತವಾಗಿ ಮಾತನಾಡಿ ಸೂಕ್ತ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ಗೆಜ್ಜೆಬಾವಿ, ಹಿರಿಯ ಮೇಲ್ವಿಚಾರಕಿ ಗಂಗಮ್ಮ, ವಕೀಲರಾದ ಪ್ರತಿಭಾ ಸಾಸ್ವಿಗೆರಾ, ಮಲ್ಲಿಕಾರ್ಜುನ ಮಿಯಾಪುರ, ತಾಯಪ್ಪ, ಸಂದೀಪ್ ಕುಮಾರ್, ಭಗವಂತರಾಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಾಗರಾಜ್ ಮಾನಸಗಲ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೋಮಪ್ಪ ಎಂ. ಸ್ವಾಗತಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ವಂದಿಸಿದರು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಆರೋಗ್ಯ ಇಲಾಖೆ ಹಾಗೂ ಡಾನ್ ಬಾಸ್ಕೋ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.