ದೇವದುರ್ಗ: ಮದರಕಲ್ ಗ್ರಾಮದ ಸರ್ಕಾರಿ ಶಾಲೆ ಕಟ್ಟಡ, ಮಹಿಳೆಯರ ಶೌಚಾಲಯ ಹಾಗೂ ತಿಪ್ಪೆ ಜಾಗದ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ. ಗ್ರಾಮದ ವಾಸ್ತವ ಪರಿಸ್ಥಿತಿಯನ್ನು ತಿಳಿದುಕೊಳ್ಳದೆ ಸಮುದಾಯದ ಹೆಸರಿನಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಗ್ರಾಮದ ಮುಖಂಡ ರಾಮಣ್ಣ ಮದರಕಲ್ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಮದರಕಲ್ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಶಿವರಾಯ ಅಕ್ಕರಕಿ ಅವರ ನೇತೃತ್ವದಲ್ಲಿ ನಡೆದ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣ, ಮಹಿಳೆಯರ ಶೌಚಾಲಯ ತೆರವು ಹಾಗೂ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಹಿನ್ನೆಲೆಯಲ್ಲಿ ಸಭೆ ಆಯೋಜಿಸಲಾಗಿತ್ತು.

ಸರ್ಕಾರಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾದ ಸಂದರ್ಭದಲ್ಲಿ ಶರಣಗೌಡ ಮದರಕಲ್ ಅವರು ಈ ವಿಷಯವನ್ನು ಗ್ರಾಮದ ಮುಖಂಡರ ಗಮನಕ್ಕೆ ತಂದಿದ್ದರು. ಬಳಿಕ ಸಮುದಾಯದ ಮುಖಂಡರು ಅವರನ್ನು ಕಾಲೋನಿಗೆ ಆಹ್ವಾನಿಸಿ, ಶಾಲೆ ನಿರ್ಮಾಣದ ಸ್ಥಳ ಹಾಗೂ ಮೂಲಸೌಕರ್ಯಗಳ ಕುರಿತು ಚರ್ಚೆ ನಡೆಸಿದ್ದರು. ಶಾಲೆಯ ಪಕ್ಕದಲ್ಲಿ ಶೌಚಾಲಯ ನಿರ್ಮಿಸದಿರಲು ತೀರ್ಮಾನಿಸಲಾಗಿದ್ದು, ಪರ್ಯಾಯವಾಗಿ ಸೂಕ್ತ ಜಾಗ ತೋರಿಸಿದರೆ ಸ್ವಂತ ಖರ್ಚಿನಲ್ಲಿ ಶೌಚಾಲಯ ನಿರ್ಮಿಸಿಕೊಡುವುದಾಗಿ ಶರಣಗೌಡ ತಿಳಿಸಿದ್ದರು ಎಂದು ರಾಮಣ್ಣ ವಿವರಿಸಿದರು.

ಮಹಿಳೆಯರ ಶೌಚಾಲಯವನ್ನು ಸುಮಾರು ಮೂರು ವರ್ಷಗಳ ಹಿಂದೆಯೇ ತೆರವುಗೊಳಿಸಲಾಗಿತ್ತು. ಆದರೆ ಇತ್ತೀಚೆಗೆ ಅದನ್ನು ಕೆಡವಲಾಗಿದೆ ಎಂಬ ರೀತಿಯಲ್ಲಿ ಯಲ್ಲಪ್ಪ ಆಲ್ದರ್ತಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಮಾಡುತ್ತಿರುವುದು ಸರಿಯಲ್ಲ. ವಾಸ್ತವಾಂಶಗಳನ್ನು ಪರಿಶೀಲಿಸದೆ ಇಂತಹ ಹೇಳಿಕೆಗಳನ್ನು ನೀಡುವುದರಿಂದ ಗ್ರಾಮದಲ್ಲಿ ಅನಗತ್ಯ ಗೊಂದಲ ಉಂಟಾಗುತ್ತದೆ ಎಂದು ಆರೋಪಿಸಿದರು.

ಶಾಲೆಯ ನೂತನ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಉದ್ಘಾಟನೆಯ ಹಂತದಲ್ಲಿದೆ. ಆದರೆ ಶಾಲೆಗೆ ಸಂಪರ್ಕ ಕಲ್ಪಿಸುವ ದಾರಿಯಲ್ಲಿ ಕೆಲವು ಗ್ರಾಮಸ್ಥರ ತಿಪ್ಪೆ ಜಾಗಗಳಿರುವುದರಿಂದ ಸಮಸ್ಯೆ ಎದುರಾಗಿದೆ. ಇದಕ್ಕೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಬದಲು ಶರಣಗೌಡ ಮದರಕಲ್ ಅವರನ್ನು ಗುರಿಯಾಗಿಸಿಕೊಂಡು ಆರೋಪ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದ ಮುಖಂಡ ಈಶಪ್ಪ ಮದರಕಲ್ ಮಾತನಾಡಿ, ಈ ಹಿಂದೆ ಗ್ರಾಮದ ಹೋಟೆಲ್‌ವೊಂದರಲ್ಲಿ ಅಸ್ಪೃಶ್ಯತೆ ಆಚರಣೆಯ ಆರೋಪ ಕೇಳಿಬಂದಾಗ ಸಮಸ್ಯೆ ಬಗೆಹರಿಸಲು ಯಲ್ಲಪ್ಪ ಆಲ್ದರ್ತಿ ಅವರನ್ನು ಆಹ್ವಾನಿಸಲಾಗಿತ್ತು. ನಂತರ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಹೋಟೆಲ್ ಮಾಲೀಕರೊಂದಿಗೆ ಚರ್ಚೆ ನಡೆಸಿ, ಮುಂದೆ ಯಾವುದೇ ರೀತಿಯ ಭೇದಭಾವ ಮಾಡುವುದಿಲ್ಲ ಎಂಬ ಭರವಸೆಯೊಂದಿಗೆ ಸಮಸ್ಯೆ ಬಗೆಹರಿಸಲಾಗಿತ್ತು ಎಂದು ತಿಳಿಸಿದರು.

ಶಾಲೆ ಹಾಗೂ ಶೌಚಾಲಯದ ವಿಚಾರವಾಗಿ ತಹಶೀಲ್ದಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಲ್ಲಪ್ಪ ಆಲ್ದರ್ತಿ ಅವರು ಶರಣಗೌಡ ಮದರಕಲ್ ವಿರುದ್ಧ ವೈಯಕ್ತಿಕ ಆರೋಪಗಳನ್ನು ಒಳಗೊಂಡ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಕುರಿತು ಅವರಿಗೆ ನೇರವಾಗಿ ಹಾಗೂ ದೂರವಾಣಿ ಮೂಲಕವೂ ಆಕ್ಷೇಪ ವ್ಯಕ್ತಪಡಿಸಲಾಗಿದೆ ಎಂದು ಹೇಳಿದರು.

ಪರಶುರಾಮ ಮದರಕಲ್ ಮಾತನಾಡಿ, ಗ್ರಾಮದ ಎಲ್ಲ ಸಮುದಾಯಗಳ ಜನರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಜೀವನ ನಡೆಸುತ್ತಿದ್ದಾರೆ. ವೈಯಕ್ತಿಕ ಭಿನ್ನಾಭಿಪ್ರಾಯಗಳಿಗೆ ಸಮುದಾಯದ ಹೆಸರನ್ನು ಬಳಸಿಕೊಳ್ಳಬಾರದು. ಗ್ರಾಮದಲ್ಲಿರುವ ಸಮಸ್ಯೆಗಳನ್ನು ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಶರಣಗೌಡ ಮದರಕಲ್ ಅವರ ವಿರುದ್ಧ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಶಿವರಾಯ ಅಕ್ಕರಕಿ ಮಾತನಾಡಿ, ಸಮುದಾಯದ ಮುಖಂಡರು ವೈಯಕ್ತಿಕ ಹಿತಾಸಕ್ತಿಗಿಂತ ಸಮಾಜದ ಏಳಿಗೆಗೆ ಆದ್ಯತೆ ನೀಡಬೇಕು. ಮದರಕಲ್ ಗ್ರಾಮದ ಸಮಸ್ಯೆಗಳ ಕುರಿತು ಏಕಪಕ್ಷೀಯ ಹೇಳಿಕೆ ನೀಡದೆ, ಸ್ಥಳೀಯ ಮುಖಂಡರೊಂದಿಗೆ ಸಮಾಲೋಚಿಸಿ ವಾಸ್ತವಾಂಶಗಳನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಚುನಾವಣೆಯ ಸಂದರ್ಭದಲ್ಲಿ ಯಾರ ವಿರುದ್ಧವೂ ಆಧಾರರಹಿತ ಆರೋಪಗಳನ್ನು ಮಾಡುವುದು ಸರಿಯಲ್ಲ. ಗ್ರಾಮದಲ್ಲಿ ಸಮಸ್ಯೆಗಳಿದ್ದರೆ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ದಲಿತ ಮುಖಂಡ ಬೂದೆಪ್ಪ ಕ್ಯಾದಿಗಿ ಮಾತನಾಡಿ, ಯಲ್ಲಪ್ಪ ಆಲ್ದರ್ತಿ ಅವರು ಗ್ರಾಮದ ವಿಚಾರದಲ್ಲಿ ಸತ್ಯಾಸತ್ಯತೆ ತಿಳಿದುಕೊಂಡು ಮಾತನಾಡಬೇಕು. ಶರಣಗೌಡ ಮದರಕಲ್ ಅವರೊಂದಿಗೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದರೆ ಅದಕ್ಕೆ ಸಮುದಾಯವನ್ನು ಎಳೆತರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಈ ಸಂದರ್ಭದಲ್ಲಿ ಮಾದಿಗ ಸಮಾಜದ ಹೋರಾಟಗಾರರಾದ ಶಾಂತಕುಮಾರ ಹೊನ್ನಟಗಿ, ನಾಗರಾಜ ಜಂಬಲದಿನ್ನಿ, ಮರೆಪ್ಪ ಮದರಕಲ್, ಮುತ್ತುರಾಜ ಮ್ಯಾತ್ರಿ ಗಬ್ಬೂರು, ತುಕರಾಮ ಗಣೇಕಲ್, ಹುಲಿಗೆಪ್ಪ, ಬಸವಲಿಂಗ, ಗ್ರಾಮದ ಯುವ ಮುಖಂಡರಾದ ಎನ್. ರೆಡ್ಡಿ, ಸಾಬಣ್ಣ, ಚಿದಾನಂದ, ಬೂದೆಪ್ಪ, ದುರಗಪ್ಪ, ಶಿವಣ್ಣ, ಗುಂಡರಾಮ, ಯಲ್ಲಪ್ಪ, ಪ್ರಭು, ಹನುಮಂತ, ಬಂದಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.