ಲಿಂಗಸುಗೂರು: ಯುವಜನರು ತಂದೆ-ತಾಯಿ ಹಾಗೂ ಹಿರಿಯರನ್ನು ಗೌರವಿಸುವುದರ ಜೊತೆಗೆ ಉತ್ತಮ ಸಂಸ್ಕಾರ, ಸಮಯಪ್ರಜ್ಞೆ ಮತ್ತು ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಪೋಷಕರ ಮೇಲಿದೆ ಎಂದು ಉಡುಪಿಯ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಪಟ್ಟಣದ ಎಸ್ಬಿಎಚ್ ಕಾಲೋನಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು, ಮಾನವನ ಜೀವನದಲ್ಲಿ ತಂದೆ-ತಾಯಿಯ ಸ್ಥಾನ ಅತ್ಯಂತ ಮಹತ್ವದ್ದಾಗಿದೆ. ಅದರಲ್ಲಿಯೂ ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ತಾಯಿಯ ಪಾತ್ರ ದೊಡ್ಡದಾಗಿದೆ. ಕುಟುಂಬದಲ್ಲಿ ಉತ್ತಮ ಸಂಸ್ಕಾರ, ಪ್ರೀತಿ, ವಿಶ್ವಾಸ ಹಾಗೂ ಪರಸ್ಪರ ಗೌರವ ಬೆಳೆದಾಗ ಮಾತ್ರ ಸಮಾಜದಲ್ಲಿ ಸೌಹಾರ್ದತೆ ನೆಲೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇಂದಿನ ಕಾಲಘಟ್ಟದಲ್ಲಿ ವೈವಾಹಿಕ ಸಂಬಂಧಗಳ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಪತಿ-ಪತ್ನಿಯರು ಲಕ್ಷ್ಮೀ ನಾರಾಯಣರಂತೆ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಹೊಂದಾಣಿಕೆಯಿಂದ ಜೀವನ ಸಾಗಿಸಬೇಕು. ಕುಟುಂಬದಲ್ಲಿ ಒಗ್ಗಟ್ಟು ಮತ್ತು ಸಂಸ್ಕಾರ ಉಳಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಯುವಕರು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಶಿಕ್ಷಣ, ಉತ್ತಮ ಚಟುವಟಿಕೆಗಳು ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಬಳಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು, ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಧಾರ್ಮಿಕ ಆಚರಣೆಗಳ ಹಿಂದಿರುವ ಜೀವನ ಮೌಲ್ಯಗಳನ್ನು ಅರ್ಥಮಾಡಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.
ನವರಾತ್ರಿ ಉತ್ಸವವು ಮಾತೃಶಕ್ತಿಯ ಆರಾಧನೆಗೆ ವಿಶೇಷ ಮಹತ್ವ ನೀಡುವ ಹಬ್ಬವಾಗಿದೆ. ಒಂಬತ್ತು ದಿನಗಳ ಕಾಲ ಲಕ್ಷ್ಮೀ, ದುರ್ಗೆ ಸೇರಿದಂತೆ ವಿವಿಧ ದೇವತೆಗಳನ್ನು ಭಕ್ತಿಭಾವದಿಂದ ಪೂಜಿಸುವ ಸಂಪ್ರದಾಯವಿದೆ. ಇಂತಹ ಹಬ್ಬಗಳು ಜನರಲ್ಲಿ ಭಕ್ತಿ, ಶ್ರದ್ಧೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ವಿವರಿಸಿದರು.
ಶ್ರೀ ವಿಶ್ವಪ್ರಿಯ ತೀರ್ಥರು ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಭಕ್ತರು ಬೈಕ್ ರ್ಯಾಲಿ ಹಾಗೂ ಭವ್ಯ ಮೆರವಣಿಗೆ ಮೂಲಕ ಸ್ವಾಗತ ಕೋರಿದರು. ಭಜನೆ, ಕೋಲಾಟ ಹಾಗೂ ವಾದ್ಯಮೇಳಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ಭಕ್ತರು ಪಾಲ್ಗೊಂಡರು. ಸೋಮವಾರ ಬೆಳಿಗ್ಗೆ ಪಟ್ಟಣದ ಹಲವು ಭಕ್ತರ ಮನೆಗಳಲ್ಲಿ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ಪ್ರಾಣೇಶ ಆಚಾರ ವಂದಲಿ, ಅಧ್ಯಕ್ಷ ಮೋಹನ ಜೋಶಿ, ಹಿರಿಯರಾದ ಜಗನ್ನಾಥ ಕುಲಕರ್ಣಿ, ರಾಜಗೋಪಾಲ ಕುಲಕರ್ಣಿ, ಮಧುಸೂದನ ಪುರಾಣಿಕ, ಪ್ರಮೋದ ಕುಲಕರ್ಣಿ, ಬಿ.ಟಿ. ನಾಯಕ, ರಾಮರಾವ್, ಬ್ರಾಹ್ಮಣ ಸಮಾಜದ ಅಧ್ಯಕ್ಷ ಅಶೋಕ ದಿಗ್ಗಾವಿ, ಕಿಶೋರ ಮುತಾಲಿಕ, ನಾರಾಯಣ ಬಿಜ್ಜೂರು, ಮುರಳೀಧರ ಕುಲಕರ್ಣಿ ಸೇರಿದಂತೆ ಮಹಿಳಾ ಭಜನಾ ಮಂಡಳಿಯ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.



