ಮಾನ್ವಿ: ಹಿಂದೂ ಧರ್ಮದ ಆಚರಣೆಗಳು ಹಾಗೂ ಸಂಪ್ರದಾಯಗಳಿಗೆ ಅಡ್ಡಿಪಡಿಸುವ ಮತ್ತು ದಸರಾ ಹಬ್ಬದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಜೆ ನೀಡದೆ ಧಾರ್ಮಿಕ ಆಚರಣೆಗಳಿಂದ ದೂರವಿಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಶ್ರೀರಾಮಸೇನೆ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಆದ್ಯತೆ ನೀಡುತ್ತಿಲ್ಲ. ಸರ್ಕಾರದ ಶಿಕ್ಷಣ ನೀತಿ ಹಾಗೂ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಅಂದಾಜು ಮೂರು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಮೂಲಸೌಕರ್ಯ ಮತ್ತು ಶಿಕ್ಷಕರ ಕೊರತೆಯಿಂದಾಗಿ ಪೋಷಕರು ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕನ್ನಡ ಭಾಷೆ ಹಾಗೂ ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಸರ್ಕಾರ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಸರ್ಕಾರಿ ಶಾಲೆಗಳ ದುಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಖಾಸಗಿ ಹಾಗೂ ಕ್ರೈಸ್ತ ಮಿಷನರಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿವೆ. ಕೆಲವು ಮಿಷನರಿ ಸಂಸ್ಥೆಗಳು ಶಿಕ್ಷಣದ ಹೆಸರಿನಲ್ಲಿ ಮಕ್ಕಳನ್ನು ಕ್ರೈಸ್ತ ಧರ್ಮದತ್ತ ಸೆಳೆಯುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿದ ಅವರು, ಇಂತಹ ಚಟುವಟಿಕೆಗಳಿಗೆ ಕೆಲವು ಶಿಕ್ಷಣಾಧಿಕಾರಿಗಳ ಪರೋಕ್ಷ ಬೆಂಬಲವಿದೆ ಎಂದು ದೂರಿದರು.

ಶಿಕ್ಷಣ ಇಲಾಖೆಯ ನಿಯಮಗಳನ್ನು ಉಲ್ಲಂಘಿಸುವ ಖಾಸಗಿ ಶಾಲೆಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಶಿಕ್ಷಣ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿಯುತ್ತಿದ್ದಾರೆ. ನಿಯಮ ಉಲ್ಲಂಘನೆಗಳನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ದಸರಾ, ವಿಜಯದಶಮಿ ಹಾಗೂ ದೀಪಾವಳಿ ಹಬ್ಬಗಳು ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿವೆ. ಮಕ್ಕಳು ತಮ್ಮ ಕುಟುಂಬದೊಂದಿಗೆ ಹಬ್ಬಗಳನ್ನು ಆಚರಿಸಿ, ಅವುಗಳ ಮಹತ್ವವನ್ನು ಅರಿತುಕೊಳ್ಳಬೇಕೆಂಬ ಉದ್ದೇಶದಿಂದ ಪ್ರತಿವರ್ಷ ದಸರಾ ಸಂದರ್ಭದಲ್ಲಿ ಶಾಲೆಗಳಿಗೆ ರಜೆ ನೀಡಲಾಗುತ್ತದೆ. ಆದರೆ ಕೆಲವು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಹೂ, ಕುಂಕುಮ ಹಾಗೂ ಬಳೆಗಳನ್ನು ಧರಿಸುವುದಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ ಎಂಬ ದೂರುಗಳಿವೆ. ದಸರಾ ಹಬ್ಬದ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳು ಹಬ್ಬಗಳಲ್ಲಿ ಭಾಗವಹಿಸದಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕೆಲವು ಶಿಕ್ಷಣ ಸಂಸ್ಥೆಗಳು ದಸರಾ ಹಬ್ಬಕ್ಕೆ ರಜೆ ನೀಡದೆ, ಕ್ರಿಸ್‌ಮಸ್ ಸಂದರ್ಭದಲ್ಲಿ ಹತ್ತು ದಿನಗಳವರೆಗೆ ರಜೆ ನೀಡುತ್ತಿವೆ. ಸರ್ಕಾರದ ರಜೆ ನಿಯಮಗಳನ್ನು ಎಲ್ಲ ಶಿಕ್ಷಣ ಸಂಸ್ಥೆಗಳು ಸಮಾನವಾಗಿ ಪಾಲಿಸಬೇಕು. ವಿದ್ಯಾರ್ಥಿಗಳ ಧಾರ್ಮಿಕ ಆಚರಣೆ ಮತ್ತು ಸಂಸ್ಕೃತಿಗೆ ಗೌರವ ನೀಡಬೇಕು. ಇಲ್ಲದಿದ್ದರೆ ಅಂತಹ ಶಿಕ್ಷಣ ಸಂಸ್ಥೆಗಳ ಮುಂದೆ ಶ್ರೀರಾಮಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮುಂಬರುವ ಹಬ್ಬಗಳನ್ನು ಹಿಂದೂಗಳು ಹಲಾಲ್ ಮುಕ್ತವಾಗಿ ಆಚರಿಸಬೇಕು ಎಂದು ಕರೆ ನೀಡಿದ ಅವರು, ತಮ್ಮ ಸಂಪ್ರದಾಯಗಳನ್ನು ಗೌರವಿಸುವ ವ್ಯಾಪಾರಿಗಳೊಂದಿಗೆ ವ್ಯವಹಾರ ನಡೆಸುವಂತೆ ಮನವಿ ಮಾಡಿದರು. ಹಿಂದೂಗಳ ಪವಿತ್ರ ಕ್ಷೇತ್ರಗಳು ಹಾಗೂ ಧಾರ್ಮಿಕ ಶ್ರದ್ಧಾಕೇಂದ್ರಗಳ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಧಾರ್ಮಿಕ ಸ್ಥಳಗಳಲ್ಲಿ ಮಾಂಸ ಸೇವನೆಯಂತಹ ಘಟನೆಗಳು ಕಂಡುಬಂದಲ್ಲಿ ಕಾನೂನುಬದ್ಧವಾಗಿ ದೂರು ದಾಖಲಿಸಿ ಹೋರಾಟ ನಡೆಸಲಾಗುವುದು ಎಂದರು.

ಶ್ರೀರಾಮಸೇನೆ ಎಲ್ಲ ಧರ್ಮ ಹಾಗೂ ಸಮುದಾಯಗಳನ್ನು ಸಮಾನವಾಗಿ ಕಾಣುತ್ತದೆ. ಸಂವಿಧಾನ ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕನ್ನು ನೀಡಿದೆ. ಅಸ್ಪೃಶ್ಯತೆ, ದೌರ್ಜನ್ಯ ಮತ್ತು ಶೋಷಣೆಗೆ ಯಾವುದೇ ಧರ್ಮದಲ್ಲಿ ಅವಕಾಶವಿಲ್ಲ. ದಲಿತರ ಮೇಲೆ ಎಲ್ಲಿಯೇ ದೌರ್ಜನ್ಯ ನಡೆದರೂ ಶೋಷಿತರ ಪರವಾಗಿ ಶ್ರೀರಾಮಸೇನೆ ಹೋರಾಟ ನಡೆಸಲಿದೆ ಎಂದು ಹೇಳಿದರು.

ಹಿಂದೂ ಸಮುದಾಯದ ವಿವಿಧ ವರ್ಗಗಳ ನಡುವೆ ಸೌಹಾರ್ದತೆ ಹಾಗೂ ಸಮಾನತೆ ಬೆಳೆಸುವ ಉದ್ದೇಶದಿಂದ ರಾಜ್ಯದ ಎಂಟು ಕಡೆಗಳಲ್ಲಿನ ದೇವಸ್ಥಾನಗಳಲ್ಲಿ ಸಾಮೂಹಿಕ ಭೋಜನ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಜಾತಿ ಭೇದವನ್ನು ಹೋಗಲಾಡಿಸಿ ಎಲ್ಲರೂ ಒಗ್ಗಟ್ಟಿನಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು ಎಂಬುದು ಸಂಘಟನೆಯ ಆಶಯವಾಗಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣಾ ಇಲಾಖೆಯು ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶದಿಂದ ಈ ಪ್ರಕ್ರಿಯೆ ನಡೆಸುತ್ತಿದೆ. ಆದರೆ ಕೆಲವರು ರಾಜಕೀಯ ಕಾರಣಗಳಿಗಾಗಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಯಾರಾದರೂ ಮತದಾನದ ಹಕ್ಕಿನಿಂದ ವಂಚಿತರಾದರೆ ಕಾನೂನು ಮಾರ್ಗದ ಮೂಲಕ ನ್ಯಾಯ ಪಡೆಯಲು ಅವಕಾಶವಿದೆ. ಈ ವಿಷಯದಲ್ಲಿ ಅನಗತ್ಯ ರಾಜಕೀಯ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಚಲನಚಿತ್ರ ನಟ ಪ್ರಕಾಶ್ ರಾಜ್ ಅವರ ಕುರಿತು ಮಾತನಾಡಿದ ಮುತಾಲಿಕ್, ಅವರ ಅಭಿನಯವನ್ನು ನಾವೆಲ್ಲರೂ ಮೆಚ್ಚುತ್ತೇವೆ. ಆದರೆ ಅವರು ತಮ್ಮ ನಟನಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಾರ್ವಜನಿಕರನ್ನು ದಾರಿತಪ್ಪಿಸುವಂತಹ ಹೇಳಿಕೆಗಳನ್ನು ನೀಡಬಾರದು ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆಯ ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬಾವಿ, ಜಿಲ್ಲಾಧ್ಯಕ್ಷ ರಘುನಾಯಕ, ಪ್ರಮೋದ್ ಆಚಾರ್ಯ, ನಾಗರಾಜ ಶೆಟ್ಟಿ ಚೀಕಲಪರ್ವಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.