ಮಾನ್ವಿ: ಹಿಂದೂ ಧರ್ಮದ ಸಂಸ್ಕೃತಿ, ಸಂಪ್ರದಾಯ ಹಾಗೂ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಹಿಂದೂವಿನ ಮೇಲಿದೆ. ಧರ್ಮದ ರಕ್ಷಣೆಯಲ್ಲಿ ದೇವಸ್ಥಾನಗಳು ಹಾಗೂ ಧಾರ್ಮಿಕ ಕೇಂದ್ರಗಳ ಕೊಡುಗೆ ಅಪಾರವಾಗಿದೆ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಶ್ರೀ ಉದ್ಭವ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಹಿಂದೂ ಧರ್ಮವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಸನಾತನ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಜೀವನ ಮೌಲ್ಯಗಳನ್ನು ಒಳಗೊಂಡಿದೆ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳಾಗಿರದೆ ಧಾರ್ಮಿಕ ಜಾಗೃತಿ, ಸಂಸ್ಕೃತಿ ಹಾಗೂ ಸಾಮಾಜಿಕ ಒಗ್ಗಟ್ಟಿನ ಕೇಂದ್ರಗಳಾಗಿವೆ. ಹಿಂದಿನಿಂದಲೂ ದೇವಸ್ಥಾನಗಳು ಜನರಲ್ಲಿ ಭಕ್ತಿ, ಶ್ರದ್ಧೆ, ನೈತಿಕ ಮೌಲ್ಯಗಳು ಹಾಗೂ ಸೇವಾ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಯುವಜನರು ತಮ್ಮ ಧಾರ್ಮಿಕ ಪರಂಪರೆಯ ಮಹತ್ವವನ್ನು ಅರಿತು ಸಂಸ್ಕೃತಿಯ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಉದ್ಭವ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಪ್ಪಗೌಡ ಅಲ್ದಾಳ್ ಅವರು ಪ್ರಮೋದ್ ಮುತಾಲಿಕ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಅಮರೇಗೌಡ ಯರದಾಳ್, ನಾಗರಾಜ, ಗಿರೀಶಗೌಡ, ಶರಣಬಸವ, ಸುರೇಶ ನಾಡಗೌಡ, ಗೋಪಾಲ ಇಬ್ರಾಹಿಂಪುರ, ವೆಂಕೋಬ ನಾಯಕ, ಲಿಂಗರಾಜ ಗಡಿಗಿ, ನಾಗರಾಜ ಬಲ್ಲಟಗಿ, ಶಿವಪ್ಪಗೌಡ, ದೇವಸ್ಥಾನದ ಅರ್ಚಕ ಪ್ರವೀಣಕುಮಾರ ಸೇರಿದಂತೆ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.



