ಸಮಾಜಸೇವೆಯನ್ನೇ ಬದುಕಿನ ಧ್ಯೇಯವಾಗಿಸಿಕೊಂಡ ಸಿ. ನಂಜಪ್ಪ

ಹುಟ್ಟುಹಬ್ಬವೆಂದರೆ ಕೇವಲ ವೈಯಕ್ತಿಕ ಸಂಭ್ರಮವಲ್ಲ, ಸಮಾಜದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಅವಕಾಶ ಎಂಬ ಆಶಯದೊಂದಿಗೆ ವರ್ಷದಿಂದ ವರ್ಷಕ್ಕೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನಂಜಪ್ಪ ಅವರು ತಮ್ಮ ಸೇವಾ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಕಳೆದ ಹಲವು ದಶಕಗಳಿಂದ ಮಡಿವಾಳ ಸಮುದಾಯದ ಸಂಘಟನೆ, ಬಡ ವಿದ್ಯಾರ್ಥಿಗಳ ಶಿಕ್ಷಣ, ಮಹಿಳೆಯರ ಸ್ವಾವಲಂಬನೆ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ನೆರವಿಗೆ ಶ್ರಮಿಸುತ್ತಿರುವ ಅವರು, ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ರಾಯಚೂರಿನಲ್ಲಿ ಜನಪರ ಕಾರ್ಯಕ್ರಮಗಳ ಮೂಲಕ ಆಚರಿಸಲು ಮುಂದಾಗಿದ್ದಾರೆ.

ಮಡಿವಾಳ ಸಮುದಾಯದ ರಾಜ್ಯಾಧ್ಯಕ್ಷರಾಗಿ ಸಂಘಟನೆಯನ್ನು ಬಲಪಡಿಸುವುದರೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ನಂಜಪ್ಪ ಅವರು, ಇದುವರೆಗೆ 250ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಒದಗಿಸಿದ್ದಾರೆ. ಇದೀಗ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿರುವುದು ಅವರ ಸಮಾಜಸೇವಾ ಚಟುವಟಿಕೆಗಳಿಗೆ ಮತ್ತಷ್ಟು ಅವಕಾಶ ಕಲ್ಪಿಸಿದೆ.

ದೇವನಹಳ್ಳಿ ತಾಲೂಕಿನ ಅವತಿ ಗ್ರಾಮದ ಚಿಕ್ಕಣ್ಣ ಹಾಗೂ ಲಕ್ಷ್ಮಮ್ಮ ದಂಪತಿಯ ಪುತ್ರನಾಗಿ 1962ರ ಅಕ್ಟೋಬರ್ 15ರಂದು ಜನಿಸಿದ ಸಿ. ನಂಜಪ್ಪ ಅವರು ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬೆಳೆದು ಬಂದವರು. ಬಾಲ್ಯದಿಂದಲೇ ಗ್ರಾಮೀಣ ಜನರ ಬದುಕು, ಬಡತನ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಹತ್ತಿರದಿಂದ ಕಂಡ ಅವರು, ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬೆಂಗಳೂರಿನ ಎಸ್‌ಜೆಪಿ ಕಾಲೇಜಿನಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದರು.

1991ರಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ವೃತ್ತಿಜೀವನ ಆರಂಭಿಸಿದ ಅವರು, 2004ರಲ್ಲಿ ಉದ್ಯೋಗ ತೊರೆದು ಸಮಾಜಸೇವೆ ಹಾಗೂ ಸ್ವಯಂ ಉದ್ಯೋಗದತ್ತ ಗಮನಹರಿಸಿದರು. ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಲು ಉದ್ಯೋಗಾವಕಾಶಗಳ ಅಗತ್ಯವಿದೆ ಎಂಬುದನ್ನು ಅರಿತು ತಮ್ಮ ಹುಟ್ಟೂರಾದ ಅವತಿಯಲ್ಲಿ ಗಾರ್ಮೆಂಟ್ಸ್ ಉದ್ಯಮ ಸ್ಥಾಪಿಸಿದರು. ಈ ಮೂಲಕ ಸ್ಥಳೀಯ ಸುಮಾರು 200 ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿ ಅವರ ಕುಟುಂಬಗಳ ಆರ್ಥಿಕ ಸ್ವಾವಲಂಬನೆಗೆ ನೆರವಾದರು.

ಮಡಿವಾಳ ಸಮುದಾಯದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ನಂಜಪ್ಪ ಅವರು, ಮೊದಲು ಸ್ವಗ್ರಾಮದಲ್ಲಿ ಮಡಿವಾಳ ಸಂಘ ಸ್ಥಾಪಿಸಿ ನಂತರ ತಾಲೂಕು ಅಧ್ಯಕ್ಷರಾಗಿ ಹಾಗೂ ಕರ್ನಾಟಕ ರಾಜ್ಯ ಮಡಿವಾಳ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಸಂಘಟನಾತ್ಮಕ ಕಾರ್ಯಚಟುವಟಿಕೆಗಳ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಅವರು, 2013ರಲ್ಲಿ ಮಡಿವಾಳ ಸಂಘದ ರಾಜ್ಯಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.

ರಾಜ್ಯದ ವಿವಿಧ ಭಾಗಗಳಲ್ಲಿ ಮಡಿವಾಳ ಸಮುದಾಯವನ್ನು ಒಗ್ಗೂಡಿಸುವುದು, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗುವುದು ಹಾಗೂ ಸಮುದಾಯದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದು ಅವರ ಸಂಘಟನಾತ್ಮಕ ಚಟುವಟಿಕೆಗಳ ಪ್ರಮುಖ ಉದ್ದೇಶವಾಗಿತ್ತು.

2015ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಡೆದ ಮಡಿವಾಳ ಸಮುದಾಯದ ಬೃಹತ್ ಸಮಾವೇಶದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಸಮಾವೇಶದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು ಎಂದು ಸಂಘಟನೆಯ ಮುಖಂಡರು ತಿಳಿಸುತ್ತಾರೆ. 2016ರಲ್ಲಿ ಕೂಡಲಸಂಗಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸಲಾಗಿತ್ತು.

ಮಡಿವಾಳ ಸಮುದಾಯದ ಆರಾಧ್ಯ ದೈವವಾದ ಶಿವಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು ಎಂಬ ಬೇಡಿಕೆಯನ್ನು ನಿರಂತರವಾಗಿ ಮುಂದಿಟ್ಟಿದ್ದ ಅವರು, 2018ರ ಫೆಬ್ರವರಿ 1ರಂದು ಮೈಸೂರಿನಲ್ಲಿ ನಡೆದ ರಾಜ್ಯ ಸಮಾವೇಶದಲ್ಲಿ ಈ ಕುರಿತು ಸರ್ಕಾರದಿಂದ ಘೋಷಣೆ ಹೊರಬರುವಲ್ಲಿ ತಮ್ಮ ಸಂಘಟನೆಯ ಹೋರಾಟವೂ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದ್ದಾರೆ.

ಸಮುದಾಯದ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಸಾಧನ ಎಂಬ ನಂಬಿಕೆಯಿಂದ 2015ರಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈವರೆಗೆ ರಾಜ್ಯದ 250ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ತಲಾ ₹5 ಸಾವಿರದಿಂದ ₹10 ಸಾವಿರದವರೆಗೆ ಶೈಕ್ಷಣಿಕ ನೆರವು ಒದಗಿಸಲಾಗಿದೆ. ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಮಡಿವಾಳ ಸಂಘದ ವಿದ್ಯಾರ್ಥಿ ವಸತಿ ನಿಲಯದ ನವೀಕರಣಕ್ಕೂ ನೆರವು ನೀಡಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವ ಪ್ರಯತ್ನ ಮಾಡಿದ್ದಾರೆ.

ಮಡಿವಾಳ ಸಮುದಾಯದ ಸಾಂಪ್ರದಾಯಿಕ ಕಸುಬಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿವಿಧ ಜಿಲ್ಲೆಗಳಲ್ಲಿ ಇಸ್ತ್ರಿ ಪೆಟ್ಟಿಗೆಗಳ ವಿತರಣೆಗೂ ಆದ್ಯತೆ ನೀಡಿದ್ದಾರೆ. ದೇವನಹಳ್ಳಿಯಲ್ಲಿ 600, ಯಲಹಂಕದಲ್ಲಿ 1,200 ಹಾಗೂ ಹಾವೇರಿಯಲ್ಲಿ 500ಕ್ಕೂ ಹೆಚ್ಚು ಫಲಾನುಭವಿಗಳಿಗೆ ಇಸ್ತ್ರಿ ಪೆಟ್ಟಿಗೆಗಳನ್ನು ವಿತರಿಸಲಾಗಿದೆ. ಈ ಕಾರ್ಯಕ್ರಮಗಳಿಗೆ ಸುಮಾರು ₹15 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಸಂಘಟನೆಯವರು ತಿಳಿಸಿದ್ದಾರೆ. ಇದರೊಂದಿಗೆ ಬಡ ಕುಟುಂಬಗಳಿಗೆ ಕುಕ್ಕರ್, ಕಂಬಳಿ ಹಾಗೂ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳನ್ನು ವಿತರಿಸುವ ಮೂಲಕ ನೆರವು ಒದಗಿಸಲಾಗಿದೆ.

ವಿಶೇಷವೆಂದರೆ, ತಮ್ಮ ಹುಟ್ಟುಹಬ್ಬವನ್ನು ಅದ್ದೂರಿ ವೈಯಕ್ತಿಕ ಆಚರಣೆಗೆ ಸೀಮಿತಗೊಳಿಸದೆ ಅಗತ್ಯವಿರುವ ಜನರಿಗೆ ನೆರವಾಗುವ ಕಾರ್ಯಕ್ರಮವಾಗಿ ರೂಪಿಸಿಕೊಂಡಿರುವುದು. 2016ರ ಅಕ್ಟೋಬರ್ 15ರಂದು ದೇವನಹಳ್ಳಿಯಲ್ಲಿ ಆರಂಭವಾದ ಈ ಸೇವಾ ಕಾರ್ಯಕ್ರಮಗಳು ನಂತರ ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸಿದವು.

2017ರಲ್ಲಿ ಯಲಹಂಕ, 2018ರಲ್ಲಿ ದೇವನಹಳ್ಳಿ, 2019ರಲ್ಲಿ ಯಲಹಂಕ, 2021ರಲ್ಲಿ ಹಾವೇರಿ, 2022ರಲ್ಲಿ ಮೈಸೂರು, 2023ರಲ್ಲಿ ಯಾದಗಿರಿ, 2024ರಲ್ಲಿ ಕಲಬುರಗಿ ಹಾಗೂ 2025ರಲ್ಲಿ ಬೆಂಗಳೂರಿನಲ್ಲಿ ಹುಟ್ಟುಹಬ್ಬದ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರತಿ ವರ್ಷ ಬೇರೆ ಬೇರೆ ಪ್ರದೇಶಗಳ ಜನರನ್ನು ತಲುಪಿ ಅವರ ಅಗತ್ಯಗಳಿಗೆ ಅನುಗುಣವಾಗಿ ನೆರವು ಒದಗಿಸುವುದು ಈ ಕಾರ್ಯಕ್ರಮಗಳ ಉದ್ದೇಶವಾಗಿದೆ.

ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಅವರು, ಸಮುದಾಯದ ಶೈಕ್ಷಣಿಕ ಪ್ರಗತಿ, ಯುವಜನರಿಗೆ ಉದ್ಯೋಗಾವಕಾಶ, ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ಸಾಂಪ್ರದಾಯಿಕ ವೃತ್ತಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೆಂಬ ಆಶಯ ಹೊಂದಿದ್ದಾರೆ.

ಅಧಿಕಾರ ಮತ್ತು ಸ್ಥಾನಮಾನಕ್ಕಿಂತ ಸಮಾಜದ ಸಂಕಷ್ಟದಲ್ಲಿರುವ ಜನರ ಬದುಕಿನಲ್ಲಿ ಬದಲಾವಣೆ ತರುವುದು ಮುಖ್ಯ ಎಂಬ ನಿಲುವಿನೊಂದಿಗೆ ಕಾರ್ಯನಿರ್ವಹಿಸುತ್ತಿರುವ ನಂಜಪ್ಪ ಅವರ ಸೇವಾ ಪಯಣ ದೇವನಹಳ್ಳಿಯ ಅವತಿ ಗ್ರಾಮದಿಂದ ಆರಂಭವಾಗಿ ರಾಜ್ಯದ ಹಲವು ಜಿಲ್ಲೆಗಳಿಗೆ ವಿಸ್ತರಿಸಿದೆ.

ಸಮಾಜದ ಒಬ್ಬ ವ್ಯಕ್ತಿಯ ಬದುಕಿನಲ್ಲಾದರೂ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಾದರೆ ಅದೇ ನಿಜವಾದ ಸಾಧನೆ ಎಂಬ ನಂಬಿಕೆ ಅವರ ಸಮಾಜಸೇವೆಯ ಹಿಂದಿನ ಪ್ರೇರಣೆಯಾಗಿದೆ. ಈ ಬಾರಿ ರಾಯಚೂರಿನಲ್ಲಿ ನಡೆಯಲಿರುವ ಹುಟ್ಟುಹಬ್ಬದ ಜನಪರ ಕಾರ್ಯಕ್ರಮವು ಅವರ ಸೇವಾ ಚಟುವಟಿಕೆಗಳ ಮುಂದುವರಿದ ಭಾಗವಾಗಿದ್ದು, ಜಿಲ್ಲೆಯ ಅಗತ್ಯವಿರುವ ಕುಟುಂಬಗಳಿಗೆ ನೆರವಾಗುವ ನಿರೀಕ್ಷೆ ಮೂಡಿಸಿದೆ.