ಲಿಂಗಸುಗೂರು: ಪಟ್ಟಣದ 17ನೇ ವಾರ್ಡ್‌ನ ಅಯ್ಯಪ್ಪಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ಶ್ರೀ ಬನ್ನಿ ಮಹಾಂಕಾಳಿ ಹಾಗೂ ಗಣೇಶ ದೇವಸ್ಥಾನದಲ್ಲಿ ನವರಾತ್ರೋತ್ಸವದ ಅಂಗವಾಗಿ ಮಹಿಳೆಯರು ಪ್ರತಿದಿನ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ.

ನವರಾತ್ರೋತ್ಸವದ ಪ್ರಯುಕ್ತ ಪ್ರತಿದಿನ ಬೆಳಗಿನ ಜಾವ ಮಹಿಳೆಯರು ಆಯಾ ದಿನಕ್ಕೆ ನಿಗದಿಪಡಿಸಿದ ಬಣ್ಣದ ಸೀರೆಗಳನ್ನು ಧರಿಸಿ ದೇವಸ್ಥಾನಕ್ಕೆ ಆಗಮಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ನವರಾತ್ರಿಯ ಒಂಬತ್ತು ದಿನಗಳಿಗೂ ವಿಶೇಷ ಮಹತ್ವವಿದ್ದು, ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡು ಧಾರ್ಮಿಕ ಆಚರಣೆಗಳನ್ನು ನೆರವೇರಿಸುತ್ತಿದ್ದಾರೆ.

ಈ ಕುರಿತು ಬನ್ನಿ ಮಹಾಂಕಾಳಿ ಹಾಗೂ ಗಣೇಶ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಾ. ಚಂದ್ರಶೇಖರ ಪಾಟೀಲ (ಚಂಪಾ) ಮಾತನಾಡಿ, ನವರಾತ್ರೋತ್ಸವದ ಅಂಗವಾಗಿ ಮಹಿಳೆಯರು ಪ್ರತಿದಿನ ಬೆಳಗಿನ ಜಾವ ದೇವಸ್ಥಾನಕ್ಕೆ ಆಗಮಿಸಿ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಆಯಾ ದಿನದ ಬಣ್ಣದ ಸೀರೆಗಳನ್ನು ಧರಿಸಿ ಸಂಪ್ರದಾಯದಂತೆ ಪೂಜೆ ನೆರವೇರಿಸುವ ಮೂಲಕ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.