ಮಾನ್ವಿ: ಮನುಷ್ಯನ ದೇಹದಲ್ಲಿರುವ ಕಾಮ, ಕ್ರೋಧ, ಮದ, ಮಾತ್ಸರ್ಯ, ಮೋಹದಂತಹ ದುರ್ಗುಣಗಳನ್ನು ನಿಯಂತ್ರಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ಶ್ರೀದೇವಿ ಪುರಾಣದ ನಿಜವಾದ ಸಂದೇಶವಾಗಿದೆ. ಶ್ರೀದೇವಿಯ ಪುರಾಣವೆಂದರೆ ಅದು ನಮ್ಮ ದೇಹದ ಪುರಾಣವಾಗಿದ್ದು, ಅಂತರಂಗದ ದುರ್ಗುಣಗಳನ್ನು ಜಯಿಸಿದಾಗ ಮಾತ್ರ ದೇವಿಯ ಅನುಗ್ರಹಕ್ಕೆ ಪಾತ್ರರಾಗಲು ಸಾಧ್ಯ ಎಂದು ಹೊಸಪೇಟೆಯ ಕೊಟ್ಟೂರು ಸಂಸ್ಥಾನಮಠದ ಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಕರೆಗುಡ್ಡ ಗ್ರಾಮದ ಶ್ರೀ ಮಹಾಂತೇಶ್ವರ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಶ್ರೀದೇವಿ ಪುರಾಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಶ್ರೀದೇವಿಯ ಸಾಕ್ಷಾತ್ಕಾರ ಹಾಗೂ ಅನುಗ್ರಹ ಪಡೆದ ಶ್ರೀ ಚಿದಾನಂದ ಅವಧೂತರು ರಚಿಸಿದ ಶ್ರೀದೇವಿ ಪುರಾಣದಲ್ಲಿ ಮಾನವನ ಅಂತರಂಗದ ಶುದ್ಧೀಕರಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮನುಷ್ಯನೊಳಗಿನ ಅರಿಷಡ್ವರ್ಗಗಳೇ ಶುಂಭ, ನಿಶುಂಭರೆಂಬ ದೈತ್ಯರ ಪ್ರತೀಕವಾಗಿವೆ. ಇವುಗಳನ್ನು ನಿಯಂತ್ರಿಸಿ ಸಾತ್ವಿಕ ಬದುಕು ನಡೆಸುವವರು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಎಂದು ತಿಳಿಸಿದರು.
ಜಗತ್ತನ್ನು ಮುನ್ನಡೆಸುವ ಮೂಲಶಕ್ತಿ ಜಗನ್ಮಾತೆಯಾಗಿದ್ದು, ಶ್ರೀದೇವಿ ಪುರಾಣದ ಮೂಲಕ ಪ್ರವಚನಕಾರರು ದೇವಿಯ ಮಹಿಮೆ ಹಾಗೂ ಆಧ್ಯಾತ್ಮಿಕ ಜೀವನದ ಮಹತ್ವವನ್ನು ಜನರಿಗೆ ತಿಳಿಸಿಕೊಡುತ್ತಿದ್ದಾರೆ. ಕರೆಗುಡ್ಡದ ಶ್ರೀ ಮಹಾಂತೇಶ್ವರ ಮಠವು ಪವಿತ್ರ ಜಾಗೃತ ಕ್ಷೇತ್ರವಾಗಿದ್ದು, ಇಲ್ಲಿ ಶ್ರದ್ಧಾಭಕ್ತಿಯಿಂದ ದೇವಿಯನ್ನು ಆರಾಧಿಸಿ ಪುರಾಣ ಶ್ರವಣ ಮಾಡುವುದರಿಂದ ಭಕ್ತರು ಆಧ್ಯಾತ್ಮಿಕ ನೆಮ್ಮದಿ ಹಾಗೂ ದೇವಿಯ ಅನುಗ್ರಹ ಪಡೆಯಬಹುದು ಎಂದು ಹೇಳಿದರು.
ಸೃಷ್ಟಿಯ ನಿರ್ವಹಣೆಯಲ್ಲಿ ಶಕ್ತಿ, ಜ್ಞಾನ ಮತ್ತು ಸಂಪತ್ತಿಗೆ ಮಹತ್ವದ ಸ್ಥಾನವಿದೆ. ಈ ಮೂರನ್ನೂ ಸಾತ್ವಿಕ ಉದ್ದೇಶಗಳಿಗೆ ಬಳಸುವವರು ಸಂತ ಸ್ವಭಾವದವರಾಗುತ್ತಾರೆ. ಜ್ಞಾನವನ್ನು ಲೋಕಕಲ್ಯಾಣಕ್ಕಾಗಿ ಬಳಸುವವರು ದೇವತಾ ಸ್ವರೂಪಿಗಳಾದರೆ, ಅದೇ ಜ್ಞಾನವನ್ನು ದುಷ್ಟ ಕಾರ್ಯಗಳಿಗೆ ಬಳಸುವವರು ಅಸುರ ಪ್ರವೃತ್ತಿಯವರಾಗುತ್ತಾರೆ. ಹೀಗಾಗಿ ಶಕ್ತಿ, ಜ್ಞಾನ ಮತ್ತು ಸಂಪತ್ತನ್ನು ಗಳಿಸುವುದಕ್ಕಿಂತ ಅವುಗಳನ್ನು ಸದುದ್ದೇಶಗಳಿಗೆ ಬಳಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಜಯದಶಮಿ ಹಬ್ಬವು ಕೇವಲ ಆಚರಣೆಗೆ ಸೀಮಿತವಾಗದೆ ಮನುಷ್ಯನ ಅಂತರಂಗದಲ್ಲಿರುವ ದುಷ್ಟಶಕ್ತಿಗಳ ವಿರುದ್ಧ ಸಾತ್ವಿಕ ಗುಣಗಳ ವಿಜಯವನ್ನು ಸಾರುತ್ತದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಶಕ್ತಿಸ್ವರೂಪಿಣಿಯಾದ ಜಗನ್ಮಾತೆಯನ್ನು ವಿವಿಧ ರೂಪಗಳಲ್ಲಿ ಆರಾಧಿಸುವ ಮೂಲಕ ಭಕ್ತರು ತಮ್ಮ ಜೀವನದಲ್ಲಿ ಸನ್ಮಾರ್ಗ, ಶಾಂತಿ ಹಾಗೂ ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು. ದೇವಿಯ ಅನುಗ್ರಹ ದೊರೆತಾಗ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯ ಎಂದು ಶ್ರೀಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾಂತೇಶ್ವರ ಮಠದ ಶ್ರೀ ಮಹಾಂತಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ನಂದವಾಡಗಿಯ ಶ್ರೀ ಮಹಾಂತೇಶ ಶಾಸ್ತ್ರಿಗಳು ಶ್ರೀದೇವಿ ಪುರಾಣ ಪ್ರವಚನ ನಡೆಸಿಕೊಟ್ಟರು. ಅಮರೇಶ ಗವಾಯಿಗಳು ಸಾಲಿಮಠ ಸಂಗೀತ ಸೇವೆ ಸಲ್ಲಿಸಿದರೆ, ಬಸವರಾಜಯ್ಯ ಹಿರೇಮಠ ತಬಲಾ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮುಖಂಡರು, ಮಠದ ಭಕ್ತರು, ಮಹಿಳೆಯರು ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಶ್ರೀದೇವಿ ಪುರಾಣವನ್ನು ಆಲಿಸಿದರು.



