ದೇವದುರ್ಗ: ರಕ್ತದಾನವು ಮತ್ತೊಬ್ಬರ ಜೀವ ಉಳಿಸುವ ಅತ್ಯಂತ ಶ್ರೇಷ್ಠ ಮಾನವೀಯ ಕಾರ್ಯವಾಗಿದೆ. ರಕ್ತಕ್ಕೆ ಜಾತಿ, ಧರ್ಮ, ಭಾಷೆಯ ಭೇದವಿಲ್ಲ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿರುವವರ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಬಸವರಾಜ ಪಾಟೀಲ್ ಸೇಡಂ ಕರೆ ನೀಡಿದರು.
ಪಟ್ಟಣದಲ್ಲಿ ನೂತನವಾಗಿ ಸ್ಥಾಪಿಸಲಾದ ದೇವದುರ್ಗ ರಕ್ತನಿಧಿ ಕೇಂದ್ರದ ಲೋಕಾರ್ಪಣೆ ಹಾಗೂ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ, ಸ್ವತಃ ರಕ್ತದಾನ ಮಾಡಿ ಮಾತನಾಡಿದ ಅವರು, ಅಪಘಾತ, ತುರ್ತು ಶಸ್ತ್ರಚಿಕಿತ್ಸೆ, ಹೆರಿಗೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗುತ್ತಿದೆ. ಸಕಾಲದಲ್ಲಿ ರಕ್ತ ದೊರೆಯದಿದ್ದರೆ ರೋಗಿಗಳ ಜೀವಕ್ಕೆ ಅಪಾಯ ಎದುರಾಗಬಹುದು. ಇಂತಹ ಸಂದರ್ಭದಲ್ಲಿ ರಕ್ತನಿಧಿ ಕೇಂದ್ರಗಳು ಜೀವ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಆರೋಗ್ಯವಂತ ವ್ಯಕ್ತಿಗಳ ಸ್ವಯಂಪ್ರೇರಿತ ರಕ್ತದಾನದಿಂದ ಮಾತ್ರ ರಕ್ತದ ಕೊರತೆಯನ್ನು ನೀಗಿಸಲು ಸಾಧ್ಯ. ಯುವಜನರು ರಕ್ತದಾನದ ಮಹತ್ವ ಅರಿತು, ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ರಾಜುಗೌಡ ಮಾತನಾಡಿ, ಒಬ್ಬ ವ್ಯಕ್ತಿ ದಾನ ಮಾಡಿದ ರಕ್ತವನ್ನು ವಿವಿಧ ಘಟಕಗಳಾಗಿ ಬೇರ್ಪಡಿಸಿ ಅಗತ್ಯಕ್ಕೆ ಅನುಗುಣವಾಗಿ ಮೂವರು ರೋಗಿಗಳಿಗೆ ನೆರವಾಗಲು ಸಾಧ್ಯವಿದೆ. ರಕ್ತದಾನದಿಂದ ದೇಹದ ಶಕ್ತಿ ಕುಂದುತ್ತದೆ ಎಂಬ ತಪ್ಪು ಕಲ್ಪನೆಯನ್ನು ಜನರು ಬಿಟ್ಟು, ವೈದ್ಯಕೀಯ ತಪಾಸಣೆಯ ನಂತರ ಅರ್ಹರು ರಕ್ತದಾನಕ್ಕೆ ಮುಂದಾಗಬೇಕು. ಈ ಕುರಿತು ಗ್ರಾಮೀಣ ಭಾಗದಲ್ಲಿಯೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ರಕ್ತನಿಧಿ ಕೇಂದ್ರದ ಸ್ಥಾಪಕ ವಿಶ್ವನಾಥ ಕೋರಿ ಮಾತನಾಡಿ, ದೇವದುರ್ಗ ತಾಲ್ಲೂಕಿನಲ್ಲಿ ತುರ್ತು ಸಂದರ್ಭಗಳಲ್ಲಿ ರಕ್ತಕ್ಕಾಗಿ ರೋಗಿಗಳು ಹಾಗೂ ಅವರ ಕುಟುಂಬಸ್ಥರು ದೂರದ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿಯಿದೆ. ವಿಶೇಷವಾಗಿ ಗರ್ಭಿಣಿಯರು, ಹೆರಿಗೆ ಸಂದರ್ಭದ ಮಹಿಳೆಯರು, ಅಪಘಾತ ಸಂತ್ರಸ್ತರು ಹಾಗೂ ತುರ್ತು ಚಿಕಿತ್ಸೆಗೆ ಒಳಗಾಗುವವರಿಗೆ ಸ್ಥಳೀಯವಾಗಿಯೇ ರಕ್ತ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಕೇಂದ್ರ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು, ಯುವಕರು, ಸಂಘಟನೆಗಳು ಹಾಗೂ ದಾನಿಗಳ ಸಹಕಾರದಿಂದ ರಕ್ತನಿಧಿ ಕೇಂದ್ರವನ್ನು ಪರಿಣಾಮಕಾರಿ ಸೇವಾ ಸಂಸ್ಥೆಯಾಗಿ ಬೆಳೆಸುವ ಆಶಯವಿದೆ. ಈ ಮಾನವೀಯ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ 100ಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ವಿವಿಧ ಧರ್ಮ, ಸಮುದಾಯ ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಒಂದೇ ವೇದಿಕೆಯಲ್ಲಿ ಭಾಗವಹಿಸಿ ರಕ್ತದಾನದ ಮಹತ್ವ ಸಾರಿದ್ದು ವಿಶೇಷವಾಗಿತ್ತು.
ಮಾಜಿ ಸಂಸದ ಬಿ.ವಿ. ನಾಯಕ, ಕಾಂಗ್ರೆಸ್ ನಾಯಕಿ ಶ್ರೀದೇವಿ ಆರ್. ನಾಯಕ, ಜೆಡಿಎಸ್ ಯುವ ನಾಯಕಿ ಗೌರಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮಠಾಧೀಶರು, ದರ್ಗಾಗಳ ಖಾದ್ರಿಗಳು, ಚರ್ಚ್ಗಳ ಫಾದರ್ಗಳು, ವಿವಿಧ ಸಮುದಾಯಗಳ ಸಂಘಟನೆಗಳ ಪದಾಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರು, ವೈದ್ಯರು, ಪತ್ರಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ದೇವದುರ್ಗದಲ್ಲಿ ರಕ್ತನಿಧಿ ಕೇಂದ್ರ ಆರಂಭವಾಗಿರುವುದು ಸ್ಥಳೀಯ ಆರೋಗ್ಯ ಸೇವೆಗೆ ಮತ್ತಷ್ಟು ಬಲ ನೀಡುವ ನಿರೀಕ್ಷೆ ಮೂಡಿಸಿದ್ದು, ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯವಿರುವ ರೋಗಿಗಳಿಗೆ ಅನುಕೂಲವಾಗಲಿದೆ ಎಂಬ ಆಶಯವನ್ನು ಗಣ್ಯರು ವ್ಯಕ್ತಪಡಿಸಿದರು.



