ದೇವದುರ್ಗ: ತಾಲೂಕಿನ ಮದರಕಲ್ ಗ್ರಾಮದ ಅವಧೂತ ರಾಜಯೋಗಿ ಸಂತ ನಾಮದೇವಗೌಡ ಶರಣರ ಅಂಬಾ ಮಠದ ವಿರುದ್ಧ ಕೆಲವರು ರಾಜಕೀಯ ದುರುದ್ದೇಶದಿಂದ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಮಠದ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆಯುತ್ತಿದ್ದು, ಇದರಿಂದ ಸಾವಿರಾರು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಪಲಕನಮರಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಮರೇಶ ಪಾಟೀಲ್ ಹಾಗೂ ದೇವನಗೌಡ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದರಕಲ್ ಗ್ರಾಮದ ಅಂಬಾ ಮಠವು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗದೆ ಸರ್ವಧರ್ಮದ ಜನರನ್ನು ಒಗ್ಗೂಡಿಸಿಕೊಂಡು ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಮಠದ ಬೆಳವಣಿಗೆಗೆ ಆರಂಭದಲ್ಲಿ ಸಹಕಾರ ಮತ್ತು ಪ್ರೋತ್ಸಾಹ ನೀಡಿದವರೇ ಇದೀಗ ಅದರ ವಿರುದ್ಧ ಆರೋಪಗಳನ್ನು ಮಾಡುತ್ತಿರುವುದು ವಿಷಾದನೀಯ ಎಂದರು.
ಮಠದಲ್ಲಿ ಪ್ರತಿವರ್ಷ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವಿವಿಧ ಮಠಗಳ ಸ್ವಾಮೀಜಿಗಳನ್ನು ಆಹ್ವಾನಿಸಿ ಧಾರ್ಮಿಕ ಪ್ರವಚನಗಳು, ಆಧ್ಯಾತ್ಮಿಕ ಚಿಂತನೆ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮಠದ ಗುರುಗಳಾದ ನಾಮದೇವಗೌಡ ಶರಣರು ಪರಿಶಿಷ್ಟ ಪಂಗಡದ ನಾಯಕ ಸಮುದಾಯಕ್ಕೆ ಸೇರಿದವರಾಗಿದ್ದು, ಮೂಢನಂಬಿಕೆ, ಮದ್ಯಪಾನ, ಜೂಜಾಟ ಸೇರಿದಂತೆ ಸಮಾಜದಲ್ಲಿರುವ ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನ ನಡೆಸುವಂತೆ ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಮಠದ ಸ್ಥಾಪನೆಯ ನಂತರ ಗ್ರಾಮದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ಹೆಚ್ಚಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗುರುಗಳ ವಿರುದ್ಧ ಅವರದೇ ಸಮುದಾಯದ ಕೆಲವರು ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ. ಮಠವನ್ನು ತೆರವುಗೊಳಿಸಬೇಕೆಂಬ ಬೇಡಿಕೆಯ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಆರೋಪಿಸಿದರು.
ಮಠದ ಜಮೀನಿನ ಕುರಿತು ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಾಮಾನ್ಯ ಸಭೆಯಲ್ಲಿ ಠರಾವು ಅಂಗೀಕರಿಸಿ ಜಾಗ ನೀಡಲು ನಿರ್ಧರಿಸಲಾಗಿತ್ತು. ಸುಮಾರು ಎರಡು ಎಕರೆ ಪ್ರದೇಶಕ್ಕೆ ಸಂಬಂಧಿಸಿದಂತೆ ನಿವೇಶನ ವ್ಯವಸ್ಥೆ ಮಾಡಲಾಗಿದ್ದು, ಕೆಲವು ಬಡ ಕುಟುಂಬಗಳು ಅಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿವೆ. ಮಠದ ಜಾಗದ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು.
ಅಂಬಾ ಮಠದ ಟ್ರಸ್ಟ್ ಸ್ಥಾಪನೆಯ ಪ್ರಮುಖ ಉದ್ದೇಶ ಬಡವರು, ರೈತ ಕುಟುಂಬಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ನೆರವಾಗುವುದಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಅಭಿವೃದ್ಧಿ ಮತ್ತು ಸಮಾಜದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುವ ಆಶಯದೊಂದಿಗೆ ಮಠ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.
ಮದರಕಲ್ ಗ್ರಾಮದ ಹನುಮಗೌಡ ಅವರು ಮಠದ ಗುರುಗಳ ಕುರಿತು ಸಮರ್ಪಕ ಮಾಹಿತಿ ಪಡೆಯದೆ ಆರೋಪಗಳನ್ನು ಮಾಡುತ್ತಿದ್ದಾರೆ. ಯಾವುದೇ ವಿಷಯದ ಬಗ್ಗೆ ಆಕ್ಷೇಪಣೆಗಳಿದ್ದರೆ ಸಂಬಂಧಪಟ್ಟ ದಾಖಲೆಗಳ ಆಧಾರದಲ್ಲಿ ಪ್ರಸ್ತಾಪಿಸಬೇಕು. ಅದನ್ನು ಬಿಟ್ಟು ಮಠ ಮತ್ತು ಗುರುಗಳ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಠದ ವಿರುದ್ಧ ಆಧಾರರಹಿತ ಆರೋಪಗಳನ್ನು ಮುಂದುವರಿಸಿದರೆ ಭಕ್ತರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ. ಧಾರ್ಮಿಕ ಕೇಂದ್ರಗಳ ಬಗ್ಗೆ ಸಾರ್ವಜನಿಕರಲ್ಲಿ ಇರುವ ನಂಬಿಕೆ ಮತ್ತು ಭಕ್ತಿಭಾವಕ್ಕೆ ಧಕ್ಕೆಯಾಗದಂತೆ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಹನುಮಂತ, ಸಾಬಣ್ಣ, ಚನ್ನಬಸವ ನಾಯಕ, ಅಂಬಣ್ಣ ಮದರಕಲ್, ಕರೆಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.



