ದೇವದುರ್ಗ: ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ದಸರಾ ಕ್ರೀಡಾಕೂಟದ ಸಿಎಂ ಕಪ್–2026ರ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ತಾಲೂಕಿನ ಚಿಕ್ಕರಾಯಕುಂಪಿ ಗ್ರಾಮದ ಯುವ ಕ್ರೀಡಾಪಟು ದೇವರಾಜ ಮೂರು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದಸರಾ ಕ್ರೀಡಾ ಉಪಸಮಿತಿ ಸಹಯೋಗದಲ್ಲಿ ಅಕ್ಟೋಬರ್ 11ರಿಂದ 13ರವರೆಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕಲಬುರಗಿ ವಿಭಾಗವನ್ನು ಪ್ರತಿನಿಧಿಸಿದ್ದ ದೇವರಾಜ, ಬಿಲ್ಲುಗಾರಿಕೆಯ ಇಂಡಿಯನ್ ರೌಂಡ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿ ಮೂರು ವಿಭಾಗಗಳಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ.
50 ಮೀಟರ್ ಅಂತರದ ಸ್ಕೋರಿಂಗ್ ರೌಂಡ್, 30 ಮೀಟರ್ ಅಂತರದ ಸ್ಕೋರಿಂಗ್ ರೌಂಡ್ ಹಾಗೂ 50 ಮೀಟರ್ ಅಂತರದ ಎಲಿಮಿನೇಷನ್ ರೌಂಡ್ನಲ್ಲಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಒಂದೇ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ರಾಜ್ಯಮಟ್ಟದ ದಸರಾ ಕ್ರೀಡಾಕೂಟದ ಬಿಲ್ಲುಗಾರಿಕೆ ವಿಭಾಗದಲ್ಲಿ ರಾಯಚೂರು ಜಿಲ್ಲೆಗೆ ಮೂರು ಚಿನ್ನದ ಪದಕಗಳು ಲಭಿಸಿರುವುದು ಇದೇ ಮೊದಲು ಎಂದು ತಿಳಿಸಲಾಗಿದೆ. ಗ್ರಾಮೀಣ ಪ್ರದೇಶದಿಂದ ಬಂದ ದೇವರಾಜ ಅವರ ಸಾಧನೆಯು ಜಿಲ್ಲೆಯ ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ.
ಸೀಮಿತ ಸೌಲಭ್ಯಗಳ ನಡುವೆಯೂ ನಿರಂತರ ಅಭ್ಯಾಸ, ಪರಿಶ್ರಮ ಹಾಗೂ ತರಬೇತುದಾರರ ಮಾರ್ಗದರ್ಶನದಿಂದ ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿರುವ ದೇವರಾಜ ಅವರ ಯಶಸ್ಸಿಗೆ ದೇವದುರ್ಗ ತಾಲೂಕಿನ ಕ್ರೀಡಾಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ದೇವರಾಜ ಅವರ ಸಾಧನೆಯನ್ನು ಕರ್ನಾಟಕ ಬಿಲ್ಲುಗಾರಿಕೆ ತರಬೇತುದಾರ ಅನಿಲ್ ಕುಮಾರ್, ರಘು, ಸ್ಥಳೀಯ ತರಬೇತುದಾರ ಮೌನೇಶ್ ಕುಮಾರ್, ಅಮಿತ್, ಜಯಂತ್ ಗೌಡ ಅಂಕೋಲಾ ಸೇರಿದಂತೆ ವಿವಿಧ ಕ್ರೀಡಾಪ್ರೇಮಿಗಳು ಅಭಿನಂದಿಸಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.



