ಮಾನ್ವಿ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ (ಎನ್‌ಡಿಎ) ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರ ಪರವಾಗಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಪಟ್ಟಣದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕರಲ್ಲಿ ಮತಯಾಚನೆ ನಡೆಸಿದರು.

ಪಟ್ಟಣದ ವಿವಿಧ ಶಾಲಾ-ಕಾಲೇಜುಗಳಿಗೆ ಪಕ್ಷದ ಮುಖಂಡರೊಂದಿಗೆ ತೆರಳಿ ಶಿಕ್ಷಕರನ್ನು ಭೇಟಿಯಾದ ಅವರು, ಎನ್‌ಡಿಎ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜಾ ವೆಂಕಟಪ್ಪ ನಾಯಕ, ಶಶೀಲ್ ಜಿ. ನಮೋಶಿ ಅವರು ಶಿಕ್ಷಕರ ಹಿತಾಸಕ್ತಿ ಕಾಪಾಡಲು ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಲು ನಿರಂತರವಾಗಿ ಶ್ರಮಿಸುತ್ತ ಬಂದಿದ್ದಾರೆ. ಶಿಕ್ಷಕರ ಸೇವಾ ಸೌಲಭ್ಯಗಳು, ಸರ್ಕಾರಿ ಯೋಜನೆಗಳ ಪ್ರಯೋಜನ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಾಳಜಿ ಹೊಂದಿದ್ದಾರೆ ಎಂದು ಹೇಳಿದರು.

ಶಿಕ್ಷಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಮೋಶಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಶಿಕ್ಷಕರು ಚುನಾವಣೆಯಲ್ಲಿ ಅವರನ್ನು ಬೆಂಬಲಿಸುವಂತೆ ಕೋರಿದರು.

ಚುನಾವಣೆಯ ಹಿನ್ನೆಲೆಯಲ್ಲಿ ಮಾನ್ವಿ ಪಟ್ಟಣದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದ ಜೆಡಿಎಸ್ ಮುಖಂಡರು, ಶಿಕ್ಷಕರೊಂದಿಗೆ ಚರ್ಚಿಸಿ ಅವರ ಸಮಸ್ಯೆಗಳು ಹಾಗೂ ಬೇಡಿಕೆಗಳ ಕುರಿತು ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾನ್ವಿ ತಾಲೂಕು ಜೆಡಿಎಸ್ ಅಧ್ಯಕ್ಷ ಈರಣ್ಣ ಮರ್ಲಟ್ಟಿ, ಸಿರವಾರ ತಾಲೂಕು ಅಧ್ಯಕ್ಷ ಟಿ. ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ರಾಜ್ಯ ಯುವ ಜೆಡಿಎಸ್ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಮುಖಂಡರಾದ ವಕೀಲ ಪಿ. ರವಿಕುಮಾರ್, ನಾಗರಾಜ ಭೋಗಾವತಿ, ಎಚ್. ಮೌನೇಶ್ ಗೌಡ, ಸುಭಾನ್ ಬೇಗ್, ಉಸ್ಮಾನ್ ಸಾಬ್, ಬಾಷಾಸಾಬ್, ಮೌಲಾಸಾಬ್, ಶರಣಪ್ಪಗೌಡ ಮದ್ಲಾಪುರ, ವಿಜಯ ನಾಯಕ ಕೊಟ್ನೇಕಲ್, ಮೌನೇಶ್ ನಾಯಕ ಹೀರಾ, ಅಮರೇಶ್ ಗೌಡ ಖರಾಬದಿನ್ನಿ, ದೇವರಾಜ ನಾಯಕ, ಬಸವರಾಜ ಸ್ವಾಮಿ, ಅಮರೇಶ್ ನಾಯಕ, ನಾಗರಾಜ ನಾಯಕ ಪೆರಿಕಲ್, ಮಲ್ಲನಗೌಡ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.