ಜಾಲಹಳ್ಳಿ: ಯುವಜನರ ವ್ಯಕ್ತಿತ್ವ ವಿಕಸನದಲ್ಲಿ ಕ್ರೀಡೆ ಮತ್ತು ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತವೆ. ಕ್ರೀಡಾ ಚಟುವಟಿಕೆಗಳು ಯುವಕರಲ್ಲಿ ಶಿಸ್ತು, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಮನೋಭಾವ ಬೆಳೆಸುತ್ತವೆ. ಕ್ರೀಡೆಯೊಂದಿಗೆ ಶಿಕ್ಷಣಕ್ಕೂ ಸಮಾನ ಆದ್ಯತೆ ನೀಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಮೂಲಕ ಯುವಕರು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಕೀಲ ವೇಣುಗೋಪಾಲಗೌಡ ಸಲಹೆ ನೀಡಿದರು.

ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಹೊರಟ್ಟಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮಂತಿ ಶಿವಬಸಪ್ಪ ರಾಂಪಳ್ಳಿ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಇಂದಿನ ಯುವಕರು ಕೇವಲ ಮನರಂಜನೆಗಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳದೆ, ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಆತ್ಮವಿಶ್ವಾಸ, ಶಿಸ್ತು, ನಾಯಕತ್ವದ ಗುಣ ಹಾಗೂ ಪರಸ್ಪರ ಸಹಕಾರದ ಮನೋಭಾವ ಬೆಳೆಯುತ್ತದೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಪ್ರತಿಯೊಬ್ಬ ಕ್ರೀಡಾಪಟು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಯುವಕರು ದುಶ್ಚಟಗಳಿಂದ ದೂರವಿದ್ದು, ತಮ್ಮ ಅಮೂಲ್ಯ ಸಮಯವನ್ನು ಶಿಕ್ಷಣ, ಕ್ರೀಡೆ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಮೀಸಲಿಡಬೇಕು. ಗ್ರಾಮೀಣ ಭಾಗದ ಯುವಕರಲ್ಲಿಯೂ ಅಪಾರ ಪ್ರತಿಭೆಯಿದ್ದು, ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ ಉನ್ನತ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದು ಅಗತ್ಯವಾಗಿದೆ. ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಯುವಕರು ಓದನ್ನು ನಿರ್ಲಕ್ಷಿಸದೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬೇಕು. ಗ್ರಾಮೀಣ ಯುವಕರ ಪ್ರತಿಭೆ ಅನಾವರಣಗೊಳಿಸುವ ಇಂತಹ ಕ್ರೀಡಾಕೂಟಗಳಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಕ್ರೀಡಾಪಟು ಶಿವರಾಜ ಬಿದರಾಣಿ ಗುರುತೋಟದ್, ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜ ಗೋಪಾಳಪುರ, ಮುದಿಯಪ್ಪ ಪೊಲೀಸ್ ಪಾಟೀಲ್ ಹಾಗೂ ಮುಖಂಡ ರಂಗನಾಥ ಮುರಾಳ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಶಿವನಗೌಡ ವಂದ್ಲಿ, ಮಂಜುನಾಥ ಪಾಟೀಲ್, ಶ್ರೀಧರ ಪಾಟೀಲ್, ಶರಣು ಹಂಪರಗುಂದಿ, ಶಿವಲಿಂಗಪ್ಪ ಗೆಜ್ಜೆಬಾವಿ, ಗುರು ನಾಯಕ, ಬಸವರಾಜ ಲಿಂಗದಹಳ್ಳಿ, ಹನುಮಂತ ಮಡಿವಾಳ, ಯಂಕೋಬ ಪೂಜಾರಿ, ಭೀಮಣ್ಣ ಗುಂಡಗುರ್ತಿ, ದುರುಗಪ್ಪ ಹೊರಟ್ಟಿ, ಶಿವಮಾನ್ಯಪ್ಪ ಸಾಹುಕಾರ, ಸಿದ್ದು ಡೆಂಗಿ, ರವಿ ತ್ಯಾಪ್ಲಿ, ಜೆ.ಎಸ್. ಹನ್ಮಂತ, ರಮೇಶ ಆರ್.ಡಿ., ಸುರೇಶ, ತಿಮ್ಮಣ್ಣ ಪೂಜಾರಿ, ರಮೇಶ ದಚ್ಚು, ಹಮ್ಮಣ್ಣ, ರಂಗನಾಥ ವಂದ್ಲಿ, ಹುಲಿರಾಜ, ತಿಮ್ಮಣ್ಣ ವಠಾರ ಸೇರಿದಂತೆ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.