ಮನೆಯ ಎಲ್ಲಾ ಕೆಲಸಗಳನ್ನು ಆಕೆ ತಲೆಯ ಮೇಲೆ ಹೊತ್ತು ಮಾಡುತ್ತಿದ್ದಳು. ಮನೆಯ ಪ್ರತಿಯೊಬ್ಬರ ಅಗತ್ಯಗಳು ಆಕೆಗೆ ಗೊತ್ತಿತ್ತು. ಕಳೆದ ಮೂರು ದಶಕಗಳಿಂದ ಗಂಡನ ಮನೆಯನ್ನು ತನ್ನದೇ ಎಂದು ಭಾವಿಸಿ ಆಕೆ ಅತ್ತೆ-ಮಾವ ಬದುಕಿರುವವರೆಗೂ ಊಟ-ಉಪಚಾರ, ಔಷಧಿ, ಆರೋಗ್ಯ ಎಂದು ಎಲ್ಲ ರೀತಿಯಿಂದ ಕಾರ್ಯನಿರ್ವಹಿಸಿದಳು.
ಗಂಡನ ಹಿಂದೆ ಮುಂದೆ ಸುತ್ತಾಡಿ ಆತನ ಬೇಕು ಬೇಡಗಳನ್ನು ಪೂರೈಸಿದಳು. ಮನೆಯವರ ಅಗತ್ಯಕ್ಕೆ ತಕ್ಕಂತೆ ಎಲ್ಲ ಬಗೆಯ ಅಡುಗೆಗಳನ್ನು ಹೊತ್ತುಹೊತ್ತಿಗೆ ಮಾಡಿ ಬಡಿಸಿದಳು. ಮನೆಯ ಸಂಪ್ರದಾಯ, ರೀತಿ ನೀತಿಗಳನ್ನು ತನ್ನದಾಗಿಸಿಕೊಂಡು ನಡೆಸಿಕೊಂಡು ಬರುತ್ತಿದ್ದಾಳೆ.
ಖುದ್ದು ತನ್ನ ಮಕ್ಕಳ ಊಟ, ಉಪಚಾರ, ಓದು, ಮನೆಪಾಠ ಎಲ್ಲವನ್ನೂ ಆಕೆಯೇ ನಿರ್ವಹಿಸಿದಳು. ಅವರ ಸುಸ್ಥಿರ ಆರೋಗ್ಯಕ್ಕೆ ಅವಶ್ಯಕವಾದ ಎಲ್ಲವನ್ನೂ ಆಕೆ ನಿರ್ವಂಚನೆಯಿಂದ ಮಾಡಿದಳು. ಮಕ್ಕಳನ್ನು ಸ್ವಾವಲಂಬಿಯನ್ನಾಗಿ ಬೆಳೆಸಿದಳು.
ಊರಿನ ಪ್ರತಿಷ್ಠಿತ ಮನೆತನವಾದ ಕಾರಣ ಅವರ ಮನೆಗೆ ಬರುವ ಹೋಗುವ ಅತಿಥಿಗಳ ಸಂಖ್ಯೆ ಕೂಡ ಹೆಚ್ಚಾಗಿತ್ತು. ಅಂತೆಯೇ ಆಕೆ ಅವರೆಲ್ಲರ ಚಹಾ, ತಿಂಡಿಗಳ ಸರಬರಾಜು ಎಂದು ಎಲ್ಲವನ್ನೂ ಮಾಡುತ್ತಿದ್ದಳು.
ಭಾರತೀಯ ಸಂಸ್ಕೃತಿಯಲ್ಲಿ ಸಾಂಪ್ರದಾಯಿಕವಾಗಿ ನಡೆದು ಬಂದ ಎಲ್ಲ ಪದ್ಧತಿಗಳನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿದ್ದ ಆಕೆಗೆ ಓರ್ವ ಪರಿಪೂರ್ಣ ಗೃಹಿಣಿ, ಕರ್ತವ್ಯನಿಷ್ಠ ವ್ಯಕ್ತಿ ಎಂಬ ತೃಪ್ತಿ ದೊರಕಿತ್ತು... ಆದರೆ ಆಕೆಗೆ ದೊರೆಯಬೇಕಾದ ಗೌರವ ಸಮ್ಮಾನಗಳು? ಇಂದಿಗೂ ಆಕೆ ಅವುಗಳನ್ನು ನಿರೀಕ್ಷಿಸುತ್ತಿದ್ದಾಳೆ.
ಇದೀಗ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ ಎಂಬುದು ನಿಜ. ಆದರೆ ವೈಯಕ್ತಿಕ ನೆಲೆಯಲ್ಲಿ ಆಕೆಗೆ ಮಾತ್ರ ಮಕ್ಕಳಿಂದ ಯಾವುದೇ ರೀತಿಯ ಸಹಾಯ ಸಹಕಾರ ದೊರೆಯುತ್ತಿಲ್ಲ.
ಇನ್ನು ಪತಿಯನ್ನಂತೂ ಕೇಳಲೇಬೇಡಿ.
ಮಾಡೋಕೆ ಆಗದಿದ್ದರೆ ಹೊರಗಿನಿಂದ ತರಿಸಿ ಇಡು. ಅಷ್ಟಕ್ಕೂ ಇರೋ ನಾಲ್ಕು ಜನರಿಗೆ ಅಡುಗೆ ಮಾಡೋದು ಕೂಡ ಒಂದು ಕಷ್ಟದ ಕೆಲಸವೇ? ಎಂದು ಹೀಗಳೆಯುತ್ತಾರೆ. ಇಂತಹ ಗಂಡಸರು ಅಡುಗೆ ಮನೆಯ ಕೆಲಸ ಎಂದರೆ ಕೇವಲ ಅಡುಗೆ ಮಾಡುವುದು ಮಾತ್ರ ಎಂದು ಭಾವಿಸಿರುತ್ತಾರೆ.
ಅಡುಗೆ ಮನೆಯಲ್ಲಿ ಗ್ಯಾಸ್ ಕಟ್ಟೆಯನ್ನು ಒರೆಸುವುದರಿಂದ ಹಿಡಿದು ಪಾತ್ರೆ ತೊಳೆಯುವ, ಎಲ್ಲವನ್ನೂ ನೀಟಾಗಿ ಜೋಡಿಸಿಡುವ, ತರಕಾರಿಗಳನ್ನು ತೊಳೆದು ಹೆಚ್ಚಿ ಒಗ್ಗರಣೆ ಹಾಕಿ ಪಲ್ಯ ಮಾಡುವ, ಅದಕ್ಕೆ ಜೊತೆಯಾಗಿ ಅನ್ನ, ಸಾರು, ಚಪಾತಿ, ರೊಟ್ಟಿ ಮಾಡುವ ಕೆಲಸ ಒಂದೇ, ಎರಡೇ? ಇನ್ನು ಇದರ ಜೊತೆಗೆ ಸಾರಿಗೆ, ಪಲ್ಯಗಳಿಗೆ ಹಾಕುವ ಮಸಾಲೆ ಪುಡಿ ಮತ್ತಿತರ ಪುಡಿಗಳ ತಯಾರಿ ಸುಮ್ಮನೆ ಆಗುತ್ತದೆಯೇ?
ಅದರಲ್ಲೂ ದಿನದ ಮೂರು ಹೊತ್ತು ಕಡ್ಡಾಯವಾಗಿ ಅಡುಗೆ, ತಿಂಡಿ ಮಾಡಲೇಬೇಕಿರುತ್ತದೆ. ಇದರ ಜೊತೆಗೆ ಅಡುಗೆ ಮನೆಯ ರಂಪವನ್ನು ಸ್ವಚ್ಛ ಮಾಡುವುದು. ಮತ್ತೆ ಮನೆಯ ಸದಸ್ಯರಿಗೆ ಹೊತ್ತುಹೊತ್ತಿಗೆ ಚಹಾ, ಕಾಫಿ, ತಿಂಡಿಯನ್ನು ಅವರು ಇದ್ದ ಜಾಗಕ್ಕೆ ಸರಬರಾಜು ಮಾಡುವುದು. ಅವರು ತಿಂದು ಕುಡಿದು ಅಲ್ಲಲ್ಲಿ ಇಟ್ಟ ತಟ್ಟೆ, ಲೋಟಗಳನ್ನು ಅಡುಗೆ ಮನೆಗೆ ತಂದು ತೊಳೆದು ಸ್ವಸ್ಥಾನಕ್ಕೆ ಸೇರಿಸುವುದು ಸುಮ್ಮನೆ ಮಾತಲ್ಲ ಅಲ್ವೇ? ಇದೆಲ್ಲಾ ಗಂಡಸರಿಗೆ ಗೊತ್ತಾಗುತ್ತದೆಯೇ?
ಇಂತಹ ನೂರಾರು ಸಾವಿರಾರು ಹೆಣ್ಣುಮಕ್ಕಳ ಗೋಳಿನ ಬಾಳನ್ನು ಗಂಡಸರು ಅರಿತಿದ್ದಾರೆಯೇ?
ಮುಂಜಾನೆಯಿಂದ ಸಾಯಂಕಾಲದವರೆಗೂ ಎಡಬಿಡದೇ ಕೆಲಸ ಮಾಡುವ ಆಕೆ ಒಂದೊಮ್ಮೆ ಎಲ್ಲಾದರೂ ಹೊರಗೆ ಸುತ್ತಾಡಿ ಬರುವ ಆಶಯವನ್ನು ವ್ಯಕ್ತಪಡಿಸಿದಾಗ ನಮ್ಮ ಹಾಗೆ ಹೊರಗೆ ಹೋಗಿ ದುಡಿದರೆ ಗೊತ್ತಾಗುತ್ತದೆ! ಎಷ್ಟು ಕಷ್ಟ ಇದೆ ಅಂತ. ತಣ್ಣಗೆ ಫ್ಯಾನಿನ ಕೆಳಗೆ ನೆರಳಲ್ಲಿ ಇರ್ತಿ ನೋಡು... ನಿನಗೇನು ಗೊತ್ತು ನಮ್ಮ ಕಷ್ಟ! ಎಂದು ಹಂಗಿಸುತ್ತಾರೆ.
ಮತ್ತೆ ಕೆಲವೊಮ್ಮೆ ಗಿಡದಲ್ಲಿ ದುಡ್ಡು ಬಿಡುತ್ತಾ ಏನು? ಹಾಗೇನಾದರೂ ಬಿಟ್ಟಿದ್ದರೆ ಹರಿದುಕೊಂಡು ಬಾ... ಬೇರೆ ದೇಶಕ್ಕೂ ಹೋಗಿ ತಿರುಗಾಡಿ ಬರೋಣಂತೆ ಎಂಬ ವ್ಯಂಗ್ಯದ ಮಾತುಗಳು ಬರುತ್ತವೆ.
ಇನ್ನು ಕೆಲವೊಮ್ಮೆ ಈ ವ್ಯಂಗ್ಯ ತುಸು ಅತಿರೇಕಕ್ಕೆ ಹೋಗಿ ಮನೆಯ ಹಿತ್ತಲಿನ ಕರಿಬೇವಿನ ಗಿಡ ಸುತ್ತು, ನಡಿ ಎಂದು ಎಲ್ಲರಿಗೂ ಹಂಗಿಸಿ ತಮಾಷೆ ಮಾಡಿ ಆಕೆ ತನ್ನ ಸುತ್ತಾಡುವ ಆಸೆಗೆ ಎಳ್ಳುನೀರು ಬಿಡುವಂತೆ ಮಾಡುತ್ತಾರೆ.
ಮತ್ತೆ ಒಂಚೂರು ಆಸೆಯಿಂದ ಸ್ನೇಹಿತೆಯರ ಜೊತೆಗೆ ಕಿಟ್ಟಿ ಪಾರ್ಟಿ, ಚೀಟಿ ಹಾಕೋದು ಅಂತ ಮಾಡುವ ಆಶಯವನ್ನು ಹೇಳಿದಾಗ ಹೂಂ, ಇದೊಂದು ಕಡಿಮೆ ಇತ್ತು. ಅದೇನು ಹೆಣ್ಣುಮಕ್ಕಳೋ ಏನೋ? ಪ್ರತಿ ತಿಂಗಳು ಕಿಟ್ಟಿ ಪಾರ್ಟಿಯಂತೆ. ವೈವಿಧ್ಯಮಯ ಬಟ್ಟೆಗಳಂತೆ, ಹುಚ್ಚುಚ್ಚಾದ ಅಲಂಕಾರಗಳಂತೆ, ಫ್ಯಾನ್ಸಿ ಡ್ರೆಸ್ ಅಂತೆ... ಇವರಿಗೆಲ್ಲ ಮಾಡೋದಿಕ್ಕೆ ಬೇರೆ ಕೆಲಸ ಇಲ್ಲ ನೋಡಿ. ಗಂಡಸರು ಕಷ್ಟಪಟ್ಟು ದುಡಿದು ತರ್ತಾರೆ, ಇವ್ರು ಚಿತ್ರವಿಚಿತ್ರವಾಗಿ ಡ್ರೆಸ್ ಮಾಡಿಕೊಂಡು ಮಜಾ ಮಾಡಿ ಫೋಟೋ ತಕ್ಕೊಂಡು ಸ್ಟೇಟಸ್ಗೆ ಇಡುವುದರಲ್ಲಿ ಆಯ್ತು... ಹೀಗಾದ್ರೆ ಗಂಡ ಉದ್ಧಾರ ಆದಹಾಗೆ ಎಂಬ ಮಾತುಗಳು ಅವರ ಬಾಯಿಂದ ಸಲೀಸಾಗಿ ಬರುತ್ತವೆ.
ಇನ್ನು ಹೆಣ್ಣುಮಕ್ಕಳೇ ಸೇರಿ ಟ್ರಿಪ್ ಹೋಗ್ತೀವಿ ಅಂತ ಹೇಳಿದಾಗ ಇನ್ನು ಇದೊಂದು ಕಡಿಮೆ ಇತ್ತು ನೋಡು. ಹೆಣ್ಣುಮಕ್ಕಳೆಲ್ಲ ತಾವು ತಾವೇ ಹೊರಟು ನಿಂತು ಬಿಟ್ಟರು. ಮನೆ, ಮಕ್ಕಳು ಎಲ್ಲವನ್ನೂ ಮರೆತಿದ್ದಾರೆ. ಸರ್ಕಾರದವರು ಇವರಿಗೆ ಬಸ್ ಫ್ರೀ ಮಾಡಿ ನಮಗೆ ಸಂಕಷ್ಟ ತಂದಿಟ್ಟರು ಎಂದು ಅವರನ್ನು ಹಂಗಿಸುತ್ತಾರೆ.
ಒಂದೊಮ್ಮೆ ರಾತ್ರಿಯ ಊಟಕ್ಕೆ ಬೇಗನೇ ಗಂಡ ಮನೆಗೆ ಬರದೇ ಹೋದಾಗ ಆಕೆ ಪದೇ ಪದೇ ಕರೆ ಮಾಡಿದರೆ, ಇಡೀ ದಿನ ಮನೆಯಿಂದ ಹೊರಗೆ ಇದ್ದು ಈಗಲೂ ಕೂಡ ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಾ ಪಾರ್ಟಿ ಮಾಡುವಾಗ ಗಂಡಸರು ಕೂಡ ತಮ್ಮ ಹೆಂಡಂದಿರನ್ನು ಕುರಿತು ರಾತ್ರಿ 8 ಗಂಟೆ ಆಯ್ತು ಅಂದ್ರೆ ಶುರುವಾಯಿತು ನೋಡಪ್ಪ ಈ ಹೆಣ್ಣುಮಕ್ಕಳ ಕಿರಿಕಿರಿ. ಅಲ್ಲ, ಇವರಿಗೇನು ಕಡಿಮೆ ಮಾಡಿದ್ದೀವಿ ಅಂತ ಈ ರೀತಿ ವರ್ತಿಸ್ತಾರೋ ಗೊತ್ತಿಲ್ಲ ಎಂದು ಸ್ನೇಹಿತರೆಲ್ಲ ಸೇರಿ ಆಡಿಕೊಳ್ಳುತ್ತಾರೆ.
ಹೆಣ್ಣುಮಕ್ಕಳೇನಾದರೂ ಮನೆಯಿಂದ ಹೊರಗೆ ಹೋಗಿ ನಾಲ್ಕು ಕಾಸು ಸಂಪಾದಿಸುವ ನಿಟ್ಟಿನಲ್ಲಿ ದುಡಿಯುವ ಆಸೆಯನ್ನು ವ್ಯಕ್ತಪಡಿಸಿದರೆ ನಿನಗ್ಯಾರು ಕೊಡ್ತಾರಪ್ಪ ನೌಕರಿ? ಅಷ್ಟಕ್ಕೂ ನೀವು ಓದಿರೋದಾದ್ರೂ ಏನು? ದೊಡ್ಡ ದೊಡ್ಡ ಡಿಗ್ರಿ ಮಾಡಿದವರು ತಲೆ ಮೇಲೆ ಮಣ್ಣು ಹೊತ್ತು ನಿಂತಿದ್ದಾರೆ. ಅಂತದ್ದರಲ್ಲಿ ನಿಮ್ಮಂಥವರಿಗೆ ನೌಕರಿ ಕೊಟ್ಟರೆ ಅವರು ಅಂಗಡಿ ಬಾಗಿಲು ಹಾಕಿಕೊಂಡು ಹೋಗಬೇಕು ಅಷ್ಟೇ! ಎಂದು ಹಂಗಿಸುತ್ತಾರೆ.
ಅದಾಗ್ಯೂ ಅವರು ಹಠ ಬಿಡದೆ ಹೋದಾಗ ಮನೆ ಮತ್ತು ಮಕ್ಕಳ ಜವಾಬ್ದಾರಿ ನಿನ್ನದೇ... ನಂತರ ಇಲ್ಲದ ತಗಾದೆ ತಗೀಬಾರದು ಅಂತ ಹೆಂಡತಿಗೆ ತಾಕೀತು ಮಾಡುತ್ತಾರೆ. ಇನ್ನು ಮುಂದೆ ನಾನು ನಿನಗೆ ಯಾವುದಕ್ಕೂ ಹಣ ಕೊಡೋದಿಲ್ಲ. ನಿನ್ನ ದುಡಿಮೆಯಲ್ಲೇ ನಿನ್ನ ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಳ್ಳಬೇಕು ಎಂದು ಮೊದಲೇ ಆಕೆಗೆ ಎಚ್ಚರಿಸುತ್ತಾರೆ.
ಇನ್ನು ಆಕೆ ಒಳ್ಳೆಯ ಉದ್ಯೋಗದಲ್ಲಿ ಇದ್ದರೆ ದುಡಿತೀನಿ ಅಂತ ಧಿಮಾಕು ತೋರಿಸಬೇಡ. ಅದೆಷ್ಟೇ ಇದ್ದರೂ ಮಕ್ಕಳ ಅಂಡು ತೊಳೆಯೋದು ತಪ್ಪೋದಿಲ್ಲ ಎಂದು ಕಿಚಾಯಿಸುತ್ತಾರೆ.
ದುಡಿಯುತ್ತಿರುವ ಆಕೆ ಕೆಲಸದ ಒತ್ತಡದಲ್ಲಿ ತುಸು ಜೋರಾಗಿ ಮಾತನಾಡಿದರೆ ನಾನು ಮೊದಲೇ ಹೇಳಿದ್ದೆ ನಿನಗೆ, ನಿನ್ನ ಕೈಲಿ ಆಗುವ ಕೆಲಸ ಅಲ್ಲ ಇದು ಎಂದು. ನೀನೇನು ದುಡಿದು ಮನೆ ಮತ್ತು ಮಕ್ಕಳನ್ನು ಸಾಕಬೇಕಾಗಿಲ್ಲ, ಬಿಟ್ಟುಬಿಡು ಎಂದು ಆರಾಮಾಗಿ ಹೇಳುತ್ತಾರೆ.
ಅಕಸ್ಮಾತ್ ಆಕೆ ಏನಾದರೂ ಒಳ್ಳೆಯ ಸಂಬಳದ ನೌಕರಿಯಲ್ಲಿದ್ದರೆ ಬೇರೊಂದು ರೀತಿಯಲ್ಲಿ ಆಕೆಯನ್ನು ಶೋಷಿಸುತ್ತಾರೆ... ಹಾಗಾದರೆ ಹೆಣ್ಣುಮಕ್ಕಳ ಕಷ್ಟ ಗಂಡಸರಿಗೆ ಗೊತ್ತಾಗುತ್ತಿಲ್ಲವೇ?
ಖಂಡಿತವಾಗಿಯೂ ಗೊತ್ತಾಗುತ್ತದೆ. ಆದರೆ ಅವರದ್ದು ಧೃತರಾಷ್ಟ್ರನ ಕುರುಡು. ಗೊತ್ತಿಲ್ಲದವರಿಗೆ ತಿಳಿಸಿ ಹೇಳಬಹುದು. ಗೊತ್ತಿದ್ದು ಗೊತ್ತಿಲ್ಲದವರಂತೆ ಇದ್ದರೆ?
ಖಂಡಿತವಾಗಿಯೂ ಹೆಣ್ಣುಮಕ್ಕಳ ಬದುಕನ್ನು ಕೇವಲ ಒಂದು ದಿನ ಬದುಕಲು ಗಂಡಸರಿಗೆ ಸಾಧ್ಯವಿಲ್ಲ. ಆದರೆ ಇದನ್ನು ಒಪ್ಪಿಕೊಳ್ಳಲು ಅವರ ಸೋ ಕಾಲ್ಡ್ ಪುರುಷಾಹಂಕಾರ ಸಮ್ಮತಿ ನೀಡುವುದಿಲ್ಲ. ಹೆಂಗಸರು ಇರುವುದೇ ತಮ್ಮ ಚಾಕರಿಗೆ, ತಾವು ಇರುವುದೇ ಅವರನ್ನು ಆಳಲು ಎಂಬ ಭಾವ ಎಲ್ಲಿಯವರೆಗೂ ಪುರುಷರನ್ನು ಹಿಡಿದಿಡುತ್ತದೆಯೋ ಅಲ್ಲಿಯವರೆಗೂ ಪುರುಷರು ಖಂಡಿತವಾಗಿಯೂ ಸುಧಾರಿಸುವುದಿಲ್ಲ.
ಅರ್ಥವಾದರೂ ಸಹಾಯ ಮಾಡಲಾಗದೇ ಇರುವುದು ಕೈಲಾಗದತನವೋ, ಅವಜ್ಞೆಯೋ ನೀವೇ ಹೇಳಿ?
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ



