ದೇವದುರ್ಗ, ಅ. 16: ರಾಯಚೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿಗೆ ಸಂಬಂಧಿಸಿದಂತೆ ಪ್ರಕಟಿಸಿರುವ ಕರಡು ಅಧಿಸೂಚನೆಯಲ್ಲಿ ಬಿಸಿಎಂ-ಬಿ (ಪ್ರವರ್ಗ-ಬಿ) ವರ್ಗಕ್ಕೆ ಒಂದೂ ಕ್ಷೇತ್ರವನ್ನು ಮೀಸಲಿಡದಿರುವುದು ಅನ್ಯಾಯವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕರಡು ಪಟ್ಟಿಯನ್ನು ಪರಿಷ್ಕರಿಸಿ ಸಮಾನ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿಯಾಪುರ ಆಗ್ರಹಿಸಿದರು.

ಪಟ್ಟಣದ ಉದ್ಯಮಿ ಬಾನುಪ್ರಕಾಶ್ ಖೇಣೆದ್ ಅವರ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದೆ. ಇದೀಗ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಕರಡು ಪಟ್ಟಿಯಲ್ಲಿಯೂ ಸಮುದಾಯವನ್ನು ಕಡೆಗಣಿಸಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ರಾಯಚೂರು ಜಿಲ್ಲೆಯಲ್ಲಿ ಒಟ್ಟು 39 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದು, ಮೀಸಲಾತಿ ನಿಗದಿಪಡಿಸುವ ಸಂದರ್ಭದಲ್ಲಿ ವಿವಿಧ ಸಮುದಾಯಗಳಿಗೆ ನ್ಯಾಯಯುತ ಪ್ರಾತಿನಿಧ್ಯ ದೊರೆಯುವಂತೆ ನೋಡಿಕೊಳ್ಳಬೇಕಿತ್ತು. ಆದರೆ ಪ್ರಕಟಿಸಿರುವ ಕರಡು ಅಧಿಸೂಚನೆಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಒಳಗೊಂಡಿರುವ ಬಿಸಿಎಂ-ಬಿ ಪ್ರವರ್ಗಕ್ಕೆ ಒಂದೇ ಒಂದು ಕ್ಷೇತ್ರವನ್ನೂ ಮೀಸಲಿಡದಿರುವುದು ಸರಿಯಲ್ಲ. ಈ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಲ್ಲಿ ಎಲ್ಲ ವರ್ಗಗಳಿಗೂ ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರೆಯುವುದು ಪ್ರಜಾಪ್ರಭುತ್ವದ ಆಶಯವಾಗಿದೆ. ಯಾವುದೇ ಒಂದು ವರ್ಗಕ್ಕೆ ಮೀಸಲಾತಿಯ ಅವಕಾಶವೇ ಸಿಗದಂತಾದರೆ ಆ ಸಮುದಾಯದ ರಾಜಕೀಯ ಪ್ರಾತಿನಿಧ್ಯಕ್ಕೆ ಹಿನ್ನಡೆಯಾಗುತ್ತದೆ. ಇದು ಕೇವಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿದ ವಿಷಯವಲ್ಲ, ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶದ ಪ್ರಶ್ನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಮೀಸಲಾತಿಯ ರೋಸ್ಟರ್ ಪದ್ಧತಿಯ ಪ್ರಮುಖ ಉದ್ದೇಶವೇ ವಿವಿಧ ವರ್ಗಗಳಿಗೆ ಕಾಲಕಾಲಕ್ಕೆ ಅವಕಾಶ ಕಲ್ಪಿಸುವುದಾಗಿದೆ. ಹಿಂದಿನ ಚುನಾವಣೆಗಳಲ್ಲಿ ಬಿಸಿಎಂ-ಬಿ ಪ್ರವರ್ಗಕ್ಕೆ ಮೀಸಲಾಗಿದ್ದ ಕ್ಷೇತ್ರಗಳು ಹಾಗೂ ಪ್ರಸ್ತುತ ರೋಸ್ಟರ್ ಚಕ್ರವನ್ನು ಸಮರ್ಪಕವಾಗಿ ಪರಿಶೀಲಿಸದೆ ಈ ಪ್ರವರ್ಗಕ್ಕೆ ಯಾವುದೇ ಸ್ಥಾನ ನೀಡದಿರುವುದು ರೋಸ್ಟರ್ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ರಾಯಚೂರು ಜಿಲ್ಲೆಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಬೆಳವಣಿಗೆಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಮಹತ್ವದ ಕೊಡುಗೆ ನೀಡಿದೆ. ಇಂತಹ ಸಮುದಾಯದ ರಾಜಕೀಯ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸದಿರುವುದು ತಾರತಮ್ಯದ ಧೋರಣೆಯಾಗಿದೆ. ಮೀಸಲಾತಿ ನಿಗದಿಯಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಎಲ್ಲ ವರ್ಗಗಳಿಗೂ ನ್ಯಾಯ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರಡು ಅಧಿಸೂಚನೆಗೆ ಸಲ್ಲಿಸಿರುವ ಆಕ್ಷೇಪಣೆಗಳನ್ನು ಗಂಭೀರವಾಗಿ ಪರಿಗಣಿಸಿ, ಮೀಸಲಾತಿ ನಿಗದಿಯ ಮಾನದಂಡಗಳು ಹಾಗೂ ರೋಸ್ಟರ್ ಕ್ರಮವನ್ನು ಮರುಪರಿಶೀಲಿಸಬೇಕು. ಬಿಸಿಎಂ-ಬಿ ಪ್ರವರ್ಗಕ್ಕೆ ನ್ಯಾಯಯುತ ಅವಕಾಶ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಬಾನುಪ್ರಕಾಶ್ ಖೇಣೆದ್, ಪ್ರಕಾಶ್ ಪಾಟೀಲ್ ಅಮರಪುರ, ಪ್ರವೀಣ್ ಕುಮಾರ ಹಾಗೂ ಶರಣಬಸವ ರಾಮದುರ್ಗ ಉಪಸ್ಥಿತರಿದ್ದರು.