ನನ್ನ ಪ್ರೀತಿಯ ಸ್ನೇಹಿತರೆ,

ನನಗೆ ಗೊತ್ತು ನೀವೆಲ್ಲಾ ನವರಾತ್ರಿ ಹಬ್ಬದ ಸಡಗರ ಸಂಭ್ರಮದಲ್ಲಿ ಮುಳುಗಿ ಹೋಗಿದ್ದೀರಿ ಎಂದು. ಪ್ರತಿದಿನ ಮುಂಜಾನೆ, ಸಾಯಂಕಾಲ ದೇವಸ್ಥಾನಗಳಲ್ಲಿ ನಡೆಯುವ ಪೂಜೆ, ಪುನಸ್ಕಾರ, ಮಂಗಳಾರತಿಗಳಲ್ಲಿ ಪಾಲ್ಗೊಳ್ಳುವ ಮೂಲಕ ತಾಯಿಯ ಕೃಪೆಗೆ ಪಾತ್ರರಾಗುವ ಸದವಕಾಶ ನಮ್ಮದಾಗಿದೆ. ಆಯಾ ದಿನದ ದೇವಿಯ ಅವತಾರದ ಬಣ್ಣದ ವಿಧವಿಧದ ಬಟ್ಟೆಗಳನ್ನು, ಸೀರೆಗಳನ್ನು ಹೊರತೆಗೆದು ಉಟ್ಟು ತೊಟ್ಟು ಸಿಂಗಾರ ಸಿರಿಗೌರಿಯಾಗಿ ಶ್ರೀದೇವಿಯ ಪೂಜೆಯಲ್ಲಿ ಭಾಗಿಯಾಗಿ ದೇವಿಯ ಹೆಸರಿನ ಉಡಿಯನ್ನು ತುಂಬಿಸಿಕೊಂಡು ಕೃತಾರ್ಥರಾದ ಭಾವ ನಿಮ್ಮದಾಗಿದೆ. ಸಾಯಂಕಾಲ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ದೊರೆಯುತ್ತಿದ್ದು, ಹಲವಾರು ವರ್ಷಗಳಿಂದ ಅದುಮಿಟ್ಟಿದ್ದ ನಿಮ್ಮ ಲಲಿತಕಲೆಗಳಿಗೆ ಇದೀಗ ವೇದಿಕೆ ದೊರಕಿದೆ... ಮತ್ತೊಮ್ಮೆ ನಕ್ಕು ನಲಿಯುವ, ಹಾಡಿ ಸಂಭ್ರಮಿಸುವ, ಕುಣಿದು ಕುಪ್ಪಳಿಸುವ ಮೂಲಕ ನಿಮ್ಮಲ್ಲಿ ಮತ್ತೆ ಹೊಸ ಚೈತನ್ಯವನ್ನು ತುಂಬಿಕೊಳ್ಳುವ ಈ ಗಳಿಗೆಯನ್ನು ನೀವು ಖಂಡಿತವಾಗಿಯೂ ತಪ್ಪಿಸಿಕೊಳ್ಳುವುದಿಲ್ಲ ಎಂದು ನನಗೆ ಗೊತ್ತಿದೆ.

ಆದರೂ ಕೂಡ ಓರ್ವ ಹಿರಿಯಕ್ಕನಾಗಿ ನನ್ನ ಮುದ್ದಿನ ಸ್ನೇಹಿತೆಯರಿಗೆ ಹಾಗೂ ಅಕ್ಕರೆಯ ಸೋದರಿಯರಿಗೆ ಒಂದಷ್ಟು ಕಿವಿಮಾತುಗಳನ್ನು ಹೇಳಲು ಬಯಸುತ್ತೇನೆ.

ನವರಾತ್ರಿಯ ಈ ಸಮಯದಲ್ಲಿ ಮಹಾದೇವಿಯ ಒಂಬತ್ತು ಅವತಾರಗಳನ್ನು ನಾವು ಪೂಜಿಸುತ್ತೇವಷ್ಟೇ... ಆ ಎಲ್ಲಾ ಅವತಾರಗಳ ಆಧ್ಯಾತ್ಮಿಕ ಪಯಣದಲ್ಲಿ ನಮ್ಮ ಬದುಕು ಕೂಡ ಅವಲಂಬಿತವಾಗಿದೆ. ಕೇವಲ ಭಕ್ತಿಯ ಶಕ್ತಿಯ ಅಲೆಯಲ್ಲಿ ತೇಲಿದರೆ ಸಾಲದು... ಆ ಶಕ್ತಿಯೇ ನಾವಾಗಬೇಕು. ನವದುರ್ಗೆಯರು ತೋರುವ ಬದುಕಿನ ಹಾದಿಯಲ್ಲಿ ನಾವು ಸಾಗಬೇಕು.

ತಾಯಿ ಶೈಲಪುತ್ರಿ ನಮಗೆ ಶಕ್ತಿ ಮತ್ತು ಭಕ್ತಿಯ ಅರಿವನ್ನು ಮೂಡಿಸುತ್ತಾಳಲ್ಲವೇ? ನಮ್ಮಲ್ಲೂ ಅಂತಹ ಅಚಲ ನಂಬಿಕೆ, ವಿಶ್ವಾಸ ಹಾಗೂ ಸಾಮರ್ಥ್ಯಗಳನ್ನು ನಾವು ಬೆಳೆಸಿಕೊಳ್ಳಬೇಕು.

ಯಾವುದೇ ವಿಷಯದ ಕುರಿತು ನಿಶ್ಚಿತವಾದ ಒಂದು ನಿಲುವನ್ನು ನಾವು ಹೊಂದಿರಲೇಬೇಕು. ನಮ್ಮ ಮನಸ್ಸಿನ ಚಂಚಲತೆಯನ್ನು, ಹೊಯ್ದಾಡುವಿಕೆಯನ್ನು ಹೋಗಲಾಡಿಸಿಕೊಂಡು ಸ್ಥಿರತೆಯನ್ನು ನಮ್ಮದಾಗಿಸಿಕೊಳ್ಳಬೇಕು... ಅದು ನಾವು ತಾಯಿ ಶೈಲಪುತ್ರಿಗೆ ನೀಡುವ ನಿಜವಾದ ಭಕ್ತಿಯ ಕಾಣಿಕೆಯಾಗಿರುತ್ತದೆ.

ತಾಯಿ ಬ್ರಹ್ಮಚಾರಿಣಿ ದೇವಿ ಶಿಸ್ತು ಮತ್ತು ತಪಸ್ಸಿನ ಅಧಿದೇವತೆಯಾಗಿರುವಳಲ್ಲವೇ? ತನ್ನ ಭಕ್ತರಾದ ನಮ್ಮಲ್ಲಿ ಕೂಡ ಆಕೆ ಅದೇ ಶಿಸ್ತನ್ನು ಅಪೇಕ್ಷಿಸಿದರೆ ಅದನ್ನು ಆಕೆಗೆ ಕಾಣಿಕೆಯಾಗಿ ನೀಡುವುದರಲ್ಲಿ ಸಂದೇಹವೇಕೆ?

ನಮ್ಮ ದೈನಂದಿನ ಬದುಕಿನಲ್ಲಿ ನಾವು ಒಡಗೂಡಿಸಿಕೊಳ್ಳುವ ಶಿಸ್ತು ಒಂದು ತಪಸ್ಸಿನಂತೆ. ಅದು ನಮ್ಮಲ್ಲಿ ನಿಯಮಿತತೆಯನ್ನು ತರುತ್ತದೆ. ಕುಂಟುನೆಪಗಳಿಗೆ ಅವಕಾಶ ಕೊಡದೆ ಬದುಕಿನಲ್ಲಿ ಒಳ್ಳೆಯ ಮಾರ್ಗವನ್ನು ತೋರುತ್ತದೆ. ಶಿಸ್ತನ್ನು ನಮ್ಮ ಬದುಕಿನಲ್ಲಿ ನಿರಂತರವಾಗಿ ರೂಢಿಸಿಕೊಂಡರೆ ಅದು ನಮ್ಮ ಸಾಧನೆಯ ಹಾದಿಯ ಸೋಪಾನಗಳನ್ನು ಕೆತ್ತುತ್ತದೆ. ಯಶಸ್ಸನ್ನು ನಮ್ಮದಾಗಿಸುತ್ತದೆ ಅಲ್ವೇ?

ಕೂಷ್ಮಾಂಡಾ ದೇವಿ... ತಾಯಿ ಕೂಷ್ಮಾಂಡಾ ದೇವಿಯು ಬ್ರಹ್ಮಾಂಡದ ಸೃಷ್ಟಿದೇವತೆ ಹಾಗೂ ಚೈತನ್ಯಶಕ್ತಿ. ಒಳ್ಳೆಯ ಚಿಂತನ, ಮನನ ಹಾಗೂ ನಡವಳಿಕೆಗಳಿಂದ ನಮ್ಮ ಚೈತನ್ಯಶಕ್ತಿಯನ್ನು ಪುನರುಜ್ಜೀವನಗೊಳಿಸಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯ. ಇತರರು ನಮಗೆ ನೀಡುವ ಚೈತನ್ಯಶಕ್ತಿಯು ಮುಗಿದು ಹೋಗುವ ಇಂಧನದಂತೆ.

ಆದರೆ ಪ್ರತಿದಿನ, ಪ್ರತಿಗಳಿಗೆ, ಪ್ರತಿಕ್ಷಣ ನಮ್ಮ ಮೈಮನಗಳಲ್ಲಿ ಚೈತನ್ಯಶಕ್ತಿ ಉಕ್ಕುತ್ತಿರಲು ನಾವು ಸದಾ ಸಕಾರಾತ್ಮಕವಾಗಿ ಯೋಚಿಸಬೇಕು. ನಕಾರಾತ್ಮಕ ವಿಷಯಗಳನ್ನು ದೂರವಿಟ್ಟು ಸಕಾರಾತ್ಮಕ ಬದುಕಿನ ದಾರಿಯಲ್ಲಿ ಸಾಗುವ ಮೂಲಕ ಆ ದೇವಿಯ ಕೃಪೆಗೆ ಪಾತ್ರರಾಗಬೇಕು.

ಸ್ಕಂದಮಾತಾ ದೇವಿಯ ನಿಷ್ಕಳಂಕವಾದ ಪ್ರೀತಿ ಮತ್ತು ವಾತ್ಸಲ್ಯ ನಮ್ಮಲ್ಲೂ ಇರಬೇಕು. ತಾಯಿಸಹಜವಾದ ಪ್ರೀತಿ, ಮಮತೆ, ಮಮಕಾರಗಳು ಸ್ತ್ರೀತ್ವವನ್ನು ಎತ್ತಿಹಿಡಿಯುತ್ತವೆ. ಅತ್ಯಂತ ಶುದ್ಧವಾದ ಪ್ರೀತಿ ಹಾಗೂ ಅಂತಃಕರಣದ ಮನಸ್ಥಿತಿ ನಮ್ಮದಾಗಿರಬೇಕು.

ಕಾತ್ಯಾಯಿನಿ ದೇವಿ ತಾಯಿಯು ಅಧಿಕಾರದ ಶಕ್ತಿ ಹಾಗೂ ನ್ಯಾಯದ ದೇವತೆಯಾಗಿದ್ದಾಳೆ ಅಲ್ವೇ... ಆಕೆಯ ಪ್ರತಿರೂಪವಾಗಿರುವ ನಾವು ಕೂಡ ಅಷ್ಟೇ ಶಕ್ತಿಶಾಲಿಗಳು ಹಾಗೂ ನ್ಯಾಯವಂತರಾಗಿರಬೇಕು. ಆದರೆ ನಮ್ಮ ಶಕ್ತಿ ನಮಗಿಂತ ಕಡಿಮೆ ಅಂದರೆ ಅವಕಾಶವಂಚಿತರ ಮೇಲೆ ದುರ್ಬಳಕೆ ಆಗಬಾರದು. ತಪ್ಪು-ಸರಿಗಳ ವಿಚಕ್ಷಣ ಜ್ಞಾನ ನಮ್ಮಲ್ಲಿರಬೇಕು. ನ್ಯಾಯಮಾರ್ಗದಲ್ಲಿ ನಮ್ಮ ನಡೆ, ನುಡಿ ಹಾಗೂ ಬದುಕು ಇರಲೇಬೇಕು.

ದೇವಿ ಕಾಳರಾತ್ರಿಯು ನಿರ್ಭಯಳು ಹಾಗೂ ಅಂಧಕಾರವನ್ನು ನಾಶ ಮಾಡುವ ಶಕ್ತಿಯನ್ನು ಹೊಂದಿರುವವಳಲ್ಲವೇ? ಆಕೆ ನಮ್ಮಲ್ಲಿಯೂ ಅಂತಹದ್ದೇ ಶಕ್ತಿಯನ್ನು ಕಾಣಬಯಸುತ್ತಾಳೆ.

ತಪ್ಪು ಮಾಡದೆ ಇದ್ದಾಗ ಭಯ ಬೇಡ. ನಮ್ಮ ಮೇಲಾಗುತ್ತಿರುವ ಅನ್ಯಾಯ, ಅಕ್ರಮ, ಅನಾಚಾರಗಳನ್ನು ಎದುರಿಸುವಾಗ ನಿರ್ಭಯರಾಗಿರಬೇಕು. ನಾವು ಹೆಣ್ಣುಮಕ್ಕಳು ಜ್ಯೋತಿಸ್ವರೂಪರು... ಅಂತೆಯೇ ಅಧರ್ಮ, ಅನ್ಯಾಯ, ಅತ್ಯಾಚಾರ, ಅಜ್ಞಾನ, ಅಸಹನೆ, ಅಸಮಾಧಾನಗಳೆಂಬ ಅಂಧಕಾರಗಳನ್ನು ಕಳೆದುಕೊಳ್ಳಲು ಸುಧರ್ಮ, ನ್ಯಾಯ, ಸದಾಚಾರ, ಜ್ಞಾನ, ಸಹನೆ, ಸಮಾಧಾನಗಳೆಂಬ ಉತ್ತಮ ಗುಣಗಳನ್ನು ನಮ್ಮದಾಗಿಸಿಕೊಳ್ಳಬೇಕು.

ತಾಯಿ ಮಹಾಗೌರಿಯು ಪರಿಶುದ್ಧತೆ, ಶಾಂತಿ ಹಾಗೂ ಪುನರುಜ್ಜೀವನದ ಸಂಕೇತವಾಗಿದ್ದಾಳಲ್ಲವೇ? ನಾವು ಕೂಡ ತನುಮನದಲ್ಲಿ ಪರಿಶುದ್ಧತೆಯನ್ನು ಹೊಂದಿರಬೇಕು. ಕೆಟ್ಟ ಮಾತು, ಕೆಟ್ಟ ವಿಷಯ, ದುರ್ನಡತೆಗಳನ್ನು ದೂರವಿಟ್ಟು ಸದಾ ಹೊಸತರೆಡೆಗೆ ತುಡಿಯುವ ಜೀವನೋತ್ಸಾಹದ ಚಿಲುಮೆ ನಾವಾಗಬೇಕು. ಸದಾ ನವಜೀವ, ಭಾವಗಳನ್ನು ಹೊಂದಿ ಚೈತನ್ಯದ ಚಿಲುಮೆಯಾಗಿರಬೇಕು.

ತಾಯಿ ಸಿದ್ಧಿದಾತ್ರಿ ದೇವಿಯು ಜಾಣ್ಮೆ ಮತ್ತು ಆಧ್ಯಾತ್ಮಿಕ ಅರಿವಿನ ನೆಮ್ಮದಿಯ ಸಂಕೇತವಾಗಿದ್ದಾಳಲ್ಲವೇ? ನಾವು ಕೂಡ ಐಹಿಕ ಸುಖಭೋಗಗಳ ಕುರಿತು ಅತಿಯಾದ ಆಸಕ್ತಿಯನ್ನು ವಹಿಸದೆ ಸಂತೃಪ್ತ ಮನಸ್ಥಿತಿಯನ್ನು ಹೊಂದಿ ನೆಮ್ಮದಿಯನ್ನು ಪಡೆಯಬೇಕು. ಅತಿಯಾದ ಆಸೆ ಹಾಗೂ ಭೋಗಜೀವನ ನಮ್ಮನ್ನು ಲಾಲಸೆಗೆ ಎಳೆಯುತ್ತದೆ. ಅದಕ್ಕೆ ಅವಕಾಶ ನೀಡದ ಜಾಣ್ಮೆ ಹಾಗೂ ತಿಳುವಳಿಕೆಯನ್ನು ಹೊಂದಿ ಆಕೆಯ ಕೃಪೆಗೆ ಪಾತ್ರರಾಗಬೇಕು.

ನನ್ನ ಪ್ರೀತಿಯ ಮುದ್ದು ಸ್ನೇಹಿತರೆ ಹಾಗೂ ಸಹೋದರಿಯರೇ, ನೀವೆಲ್ಲ ತುಂಬಾ ಜಾಣರು... ಎಷ್ಟೋ ಬಾರಿ ದೀಪದ ಅಡಿಯಲ್ಲಿ ಕತ್ತಲು ಇರುವಂತೆ ನಾವು ನಮ್ಮ ಲೌಕಿಕ ಬದುಕಿನಲ್ಲಿ ಸದಾ ಕೆಲಸಕಾರ್ಯಗಳ ಒತ್ತಡದಲ್ಲಿ ವಿಪರೀತ ಎನ್ನಿಸುವಷ್ಟು ಮುಳುಗಿ ನಮ್ಮ ಅಸ್ತಿತ್ವವನ್ನು ನಮ್ಮದೇ ಕಣ್ಣಿನಲ್ಲಿ ಕೀಳಾಗಿಸಿಕೊಳ್ಳುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ನಮ್ಮನ್ನು ಗೆಲ್ಲಬೇಕು. ನಮ್ಮ ಮನವೆಂಬ ಕಡಲನ್ನು ಜ್ಞಾನ ಮತ್ತು ವಿವೇಕ ಎಂಬ ಹಗ್ಗ ಮತ್ತು ಕಡೆಗೋಲಿನ ಸಹಾಯದಿಂದ ಕಡೆದು ಸುಜ್ಞಾನವೆಂಬ ಬೆಣ್ಣೆಯನ್ನು ತೇಲಿಸಬೇಕು... ಆ ಬೆಣ್ಣೆಯನ್ನು ಚಿಂತನ ಎಂಬ ಉರಿಯ ಮೂಲಕ ಕಾಯಿಸಿ ಅರಿವಿನ ತುಪ್ಪವನ್ನು ಪಡೆಯಬೇಕು. ಆ ಅರಿವು ನಮ್ಮ ಬದುಕಿಗೆ ಬೆಳಕಾಗಬೇಕು.

ಆ ನಿಟ್ಟಿನಲ್ಲಿ ಈ ನವರಾತ್ರಿಯ ಸಮಯದಲ್ಲಿ ನಾವು ನವಶಕ್ತಿ ದೇವತೆಗಳು ನಮಗೆ ಕೊಡಮಾಡುವ ನವನಿಧಿಗಳಾದ ಸ್ಥಿರತೆ, ಶಿಸ್ತು, ಚೈತನ್ಯ, ಪ್ರೀತಿ, ನ್ಯಾಯಪರತೆ, ನಿರ್ಭಯತೆ, ಪರಿಶುದ್ಧತೆ, ಶಾಂತಿ ಹಾಗೂ ಸಂಯಮಗಳನ್ನು ನಮ್ಮದಾಗಿಸಿಕೊಳ್ಳಲೇಬೇಕು... ಪ್ರಯತ್ನ ಮಾಡುವಿರಲ್ಲವೇ ನನ್ನ ಪ್ರೀತಿಯ ಸ್ನೇಹಿತರೆ ಹಾಗೂ ಸೋದರಿಯರೇ?

ನಿಮಗೆಲ್ಲರಿಗೂ ನವಶಕ್ತಿ ದೇವತೆಯರು ಹೊಸ ಚೈತನ್ಯವನ್ನು ತುಂಬಲಿ ಎಂದು ಆಶಿಸುವ

ನಿಮ್ಮ ಪ್ರೀತಿಯ ಮುದ್ದು ಅಕ್ಕ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ