ದೇವದುರ್ಗ: ರಾಯಚೂರು–ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ (ಆರ್ಡಿಸಿಸಿ) ನಿರ್ದೇಶಕರ ಚುನಾವಣೆಯಲ್ಲಿ ಭಾಗವಹಿಸಲು ದೇವದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರತಿನಿಧಿಯಾಗಿ ಸಂಘದ ಉಪಾಧ್ಯಕ್ಷೆ ಹನುಮಂತಿ ದೊಡ್ಡ ಹನುಮಂತ್ರಾಯ ಸೋಮಕಾರ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಂಘದ ನಿರ್ದೇಶಕ ತಾಯಪ್ಪ ಗೋಸಲ್ ಅವರು ಹನುಮಂತಿ ಸೋಮಕಾರ ಅವರ ಹೆಸರನ್ನು ಪ್ರತಿನಿಧಿ ಸ್ಥಾನಕ್ಕೆ ಪ್ರಸ್ತಾಪಿಸಿದರು. ಇದಕ್ಕೆ ನಿರ್ದೇಶಕ ಭೀಮನಗೌಡ ಮಾಲಿ ಪಾಟೀಲ್ ಅನುಮೋದನೆ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ನಿರ್ದೇಶಕರು ಒಮ್ಮತದ ಬೆಂಬಲ ವ್ಯಕ್ತಪಡಿಸಿದ್ದರಿಂದ ಯಾವುದೇ ಸ್ಪರ್ಧೆಯಿಲ್ಲದೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಂಘದ ಅಧ್ಯಕ್ಷ ಭೀಮರೆಡ್ಡಿ ಪೊ.ಪಾ. ವಗಡಂಬಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆಯ್ಕೆಯಾದ ಹನುಮಂತಿ ಸೋಮಕಾರ ಅವರಿಗೆ ಸಂಘದ ಅಧ್ಯಕ್ಷರು, ನಿರ್ದೇಶಕರು ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.
ಸಭೆಯಲ್ಲಿ ನಿರ್ದೇಶಕರಾದ ಭೀಮನಗೌಡ ಮಾ.ಪಾ. ಅಂಜಳ, ನಾಗರಾಜ ಪಾಟೀಲ್ ನಿಲಗಲ್ ಗೌರಂಪೇಟೆ, ಸಿದ್ದಾಮರೆಡ್ಡಿ ಮಾ.ಪಾ. ಅಂಚೆಸೂಗೂರು, ಬಸನಗೌಡ ಪೊ.ಪಾ. ಅರಶಿಣಗಿ, ಶಿವಕುಮಾರ ಅಕ್ಕರಕಿ, ರಂಗಪ್ಪ ನಾಯಕ ಗೋಪಾಳಪುರ, ರಂಗಯ್ಯ ಅಬಕಾರಿ, ಸಿದ್ದಾಮರೆಡ್ಡಿ ಕಮತಗಿ, ಪದ್ಮಾವತಿ ಜೊಳದಹೆಡಗಿ, ತಾಯಪ್ಪ ಗೋಸಲ್, ಆರ್ಡಿಸಿಸಿ ಬ್ಯಾಂಕಿನ ವೃತ್ತ ವೀಕ್ಷಕ ಮಹಿಬೂಬ, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಎಂ. ಸೋಮಶೇಖರ ಹಾಗೂ ಸಿಬ್ಬಂದಿ ಸುಬ್ಬರಾವ್ ಉಪಸ್ಥಿತರಿದ್ದರು.



