ಮಾನ್ವಿ: ಗ್ರಾಮದಲ್ಲಿ ಕೆರೆ ತುಂಬಿದ್ದರೂ ಮನೆಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಮನೆಗಳಿಗೆ ನೆಂಟರು ಆಗಮಿಸಿದ್ದು, ಕುಡಿಯಲು ಒಂದು ಹನಿ ನೀರಿಲ್ಲದೆ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ತಾಲೂಕಿನ ಬ್ಯಾಗವಾಟ ಗ್ರಾಮದ ನೂರಾರು ನಿವಾಸಿಗಳು ಶುಕ್ರವಾರ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಕಳೆದ ಆರು ದಿನಗಳಿಂದ ಗ್ರಾಮದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಾದರೂ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದ ನಿವಾಸಿ ರವಿ ಪಾಟೀಲ್ ಮಾತನಾಡಿ, ಬ್ಯಾಗವಾಟ ಗ್ರಾಮದ ಕುಡಿಯುವ ನೀರಿನ ಕೆರೆ ಸಂಪೂರ್ಣ ತುಂಬಿದೆ. ಆದರೆ ಕೆರೆಯ ನೀರನ್ನು ಶುದ್ಧೀಕರಿಸಿ ಮನೆಗಳಿಗೆ ಸರಬರಾಜು ಮಾಡುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ವಿಫಲವಾಗಿದೆ. ನೀರು ಸರಬರಾಜು ಸಿಬ್ಬಂದಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಅವರ ನಿರ್ಲಕ್ಷ್ಯದಿಂದ ಮಲ್ಲಿಕಾರ್ಜುನ ಗುಡ್ಡದ ಬಳಿಯ ಕುಡಿಯುವ ನೀರಿನ ಟ್ಯಾಂಕ್‌ಗೆ ನೀರು ತುಂಬಿಸುವ ಕಾರ್ಯ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಗ್ರಾಮದ ಜನವಸತಿ ಪ್ರದೇಶದಲ್ಲಿರುವ ಹಳೆಯ ನೀರಿನ ಟ್ಯಾಂಕ್ ಶಿಥಿಲಾವಸ್ಥೆಗೆ ತಲುಪಿದ್ದು, ಅದರಲ್ಲಿ ನೀರು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಅಂಬೇಡ್ಕರ್ ನಗರ ಸೇರಿದಂತೆ ನಾಲ್ಕು ವಾರ್ಡ್‌ಗಳ ನಿವಾಸಿಗಳಿಗೆ ಕಳೆದ ಆರು ದಿನಗಳಿಂದ ಸಮರ್ಪಕ ನೀರು ದೊರೆಯುತ್ತಿಲ್ಲ. ನೀರಿನ ಸಮಸ್ಯೆ ಕುರಿತು ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸಿದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಚೇರಿಯಲ್ಲಿ ಲಭ್ಯವಾಗುತ್ತಿಲ್ಲ ಎಂದು ದೂರಿದರು.

ನಾಡಹಬ್ಬ ದಸರಾ ಆಚರಣೆಯ ಸಂಭ್ರಮದಲ್ಲಿರುವ ಗ್ರಾಮಸ್ಥರಿಗೆ ನೀರಿನ ಕೊರತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಗ್ರಾಮದ ದೇವಸ್ಥಾನಗಳಲ್ಲಿ ಪ್ರತಿದಿನ ಶ್ರೀದೇವಿ ಪುರಾಣ ಹಾಗೂ ಪ್ರವಚನ ಕಾರ್ಯಕ್ರಮಗಳು ನಡೆಯುತ್ತಿದ್ದು, ಅನ್ನದಾಸೋಹಕ್ಕೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರು ಒದಗಿಸಲು ಟ್ಯಾಂಕರ್‌ಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಬ್ಬದ ಸಂದರ್ಭದಲ್ಲಿಯೂ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಮಾಡದಿರುವುದು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಹಳೆಯ ನೀರಿನ ಟ್ಯಾಂಕ್ ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಅಪಾಯವಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅದನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಹೊಸ ಟ್ಯಾಂಕ್ ನಿರ್ಮಿಸಬೇಕು. ಅಲ್ಲದೆ, ಮಲ್ಲಿಕಾರ್ಜುನ ಗುಡ್ಡದ ಬಳಿಯ ಟ್ಯಾಂಕ್‌ಗೆ ನೀರು ತುಂಬಿಸಿ ಎಲ್ಲ ವಾರ್ಡ್‌ಗಳಿಗೂ ನಿಯಮಿತವಾಗಿ ಶುದ್ಧ ಕುಡಿಯುವ ನೀರು ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಲು ನೂರಾರು ಗ್ರಾಮಸ್ಥರು ಕಚೇರಿಗೆ ಆಗಮಿಸಿದ್ದರು. ಆದರೆ ಅಧಿಕಾರಿ ಶಿವಕುಮಾರ ಅವರು ಕಚೇರಿಯಲ್ಲಿ ಇಲ್ಲದಿರುವುದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಸಂಬಂಧಪಟ್ಟ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ನಾಗರಾಜ ಹೂಗಾರ, ನಾಗರಾಜ ಗುಗ್ಗರಿ, ವೃಷಭೇಂದ್ರಸ್ವಾಮಿ ಸಿರವಾರಮಠ, ಬಸವರಾಜ ಜಕ್ಕರೆಡ್ಡಿ, ಅಂಬರೇಶ ಸುರಪುರ, ಮಹಾಂತೇಶ ಸುರಪುರ, ಚಂದ್ರಶೇಖರ ಹೂಗಾರ, ಪಂಪಾಪತಿ, ಸಾಲಿ ಮಹಾಂತೇಶ, ಮಹಾಂತೇಶ ಸಿರವಾರಮಠ, ಮಲ್ಲಪ್ಪ ಬಂಡೆಗುಡಿ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.