ಲಿಂಗಸುಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ನಗರದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಸಂಗ್ರಹವಾಗಿದ್ದ ಕಸದ ರಾಶಿ ಹಾಗೂ ಚರಂಡಿಯ ತ್ಯಾಜ್ಯವನ್ನು ತೆರವುಗೊಳಿಸಿ, ಸ್ವಚ್ಛ ಸಂಕಲ್ಪ ಮಾಸ–2026ರ ಅಭಿಯಾನದ ಅಂಗವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಜೆಸಿಬಿ ಯಂತ್ರ ಹಾಗೂ ಪೌರಕಾರ್ಮಿಕರ ನೆರವಿನಿಂದ ರಸ್ತೆ ಬದಿ ಮತ್ತು ಚರಂಡಿಗಳಲ್ಲಿ ಸಂಗ್ರಹವಾಗಿದ್ದ ಕಸವನ್ನು ತೆಗೆದು ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಬಳಿಕ ಸ್ವಚ್ಛಗೊಳಿಸಿದ ಸ್ಥಳದಲ್ಲಿ ರಂಗೋಲಿ ಬಿಡಿಸಿ, ವಿವಿಧ ಸಸಿಗಳನ್ನು ನೆಡುವ ಮೂಲಕ ಆ ಪ್ರದೇಶಕ್ಕೆ ಹೊಸ ರೂಪ ನೀಡಲಾಯಿತು.
ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಗಟ್ಟುವುದು, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವುದು ಹಾಗೂ ಕಸ ಸಂಗ್ರಹವಾಗುತ್ತಿದ್ದ ಸ್ಥಳಗಳನ್ನು ಸುಂದರ ಪ್ರದೇಶಗಳನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸ್ವಚ್ಛತೆ ಕೇವಲ ಪೌರಕಾರ್ಮಿಕರು ಅಥವಾ ಪುರಸಭೆಯ ಜವಾಬ್ದಾರಿಯಲ್ಲ. ಸಾರ್ವಜನಿಕರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಹಕರಿಸಬೇಕು ಎಂಬ ಸಂದೇಶವನ್ನು ಅಭಿಯಾನದ ಮೂಲಕ ಸಾರಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿ ಪ್ರಭು ಹುನಗುಂದ, ಪುರಸಭೆ ಪರಿಸರ ಅಭಿಯಂತೆ ಗಿರಿಜಾ, ನೈರ್ಮಲ್ಯ ನಿರೀಕ್ಷಕ ಗದ್ದೆಪ್ಪ ಕರಡಕಲ್, ಯುವ ಮುಖಂಡ ಶ್ರೀಕಾಂತ ಆಶಿಹಾಳ, ಸೌಮ್ಯ ವಸ್ತ್ರದ, ಗೀತಾ, ಮಾನಸದೇವಿ, ಅನ್ನಪೂರ್ಣ, ಶಶಿಕಲಾ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



