ಮಾನ್ವಿ: ತಾಲೂಕಿನ ಗೊಲ್ಲದಿನ್ನಿ ಎಸ್ಕೇಪ್ ಮೂಲಕ ನಂದಿಹಾಳ ಹಳ್ಳಕ್ಕೆ ನೀರು ಹರಿಸಿ ಜನರು ಹಾಗೂ ಜಾನುವಾರುಗಳಿಗೆ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ಮತ್ತು ಗ್ರಾಮಸ್ಥರು ನಂದಿಹಾಳ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುಡಿಯುವ ನೀರಿಗೂ ಜನರು ಪರದಾಡುವಂತಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿಯೂ ಜನರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿ ನೀರು ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾನ್ವಿ ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಜನರೊಂದಿಗೆ ಜಾನುವಾರುಗಳಿಗೂ ನೀರಿನ ಕೊರತೆ ಎದುರಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಗೊಲ್ಲದಿನ್ನಿ ಎಸ್ಕೇಪ್ ಮೂಲಕ ನಂದಿಹಾಳ ಹಳ್ಳಕ್ಕೆ ತಕ್ಷಣ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಗ್ರಾಮಸ್ಥರ ಅಹವಾಲು ಆಲಿಸಿ ಮಾತನಾಡಿ, ಅಕ್ಟೋಬರ್ 19ರಂದು ನಡೆಯಲಿರುವ ಎರಡನೇ ಐಸಿಸಿ ಸಭೆಯಲ್ಲಿ ನಂದಿಹಾಳ ಹಾಗೂ ಪೋತ್ನಾಳ ಹಳ್ಳಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಹರಿಸುವ ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.
ಈ ಎರಡೂ ಹಳ್ಳಗಳಿಗೆ ನೀರು ಹರಿಸುವುದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗುವುದರ ಜೊತೆಗೆ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಸಭೆಗೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು. ಸಿರವಾರ ನೀರಾವರಿ ಇಲಾಖೆ ವಿಭಾಗದಿಂದಲೂ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರವು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕಂದಾಯ ಇಲಾಖೆಗೆ ಅಗತ್ಯ ಅನುದಾನ ಒದಗಿಸಿದೆ. ನೀರಿನ ಅಭಾವ ತೀವ್ರವಾಗಿರುವ ಗ್ರಾಮಗಳನ್ನು ಗುರುತಿಸಿ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಗ್ರಾಮಸ್ಥರ ಬೇಡಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ತಹಶೀಲ್ದಾರ್ ವಿವರಿಸಿದರು.
ಈ ಸಂದರ್ಭದಲ್ಲಿ ಶಿವಶಂಕ್ರಯ್ಯ ಸ್ವಾಮಿ, ತಿಮ್ಮರೆಡ್ಡಿ ಭೋಗಾವತಿ ಹಾಗೂ ಶರಣಪ್ಪ ನಕ್ಕುಂದಿ ಮಾತನಾಡಿ, ನಂದಿಹಾಳ ಹಳ್ಳಕ್ಕೆ ನೀರು ಹರಿಸುವುದರಿಂದ ಸುತ್ತಮುತ್ತಲಿನ ಹಲವು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಅಧಿಕಾರಿಗಳು ಕೇವಲ ಭರವಸೆ ನೀಡದೆ ನೀರು ಹರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಾನೇಕಲ್, ಅಮರಾವತಿ, ನಸ್ಲಾಪುರ, ನಂದಿಹಾಳ, ರಾಜಲದಿನ್ನಿ, ಯರಮಲದೊಡ್ಡಿ, ಮುಸ್ಟೂರು, ರಂಗದಾಳ ಹಾಗೂ ಬುದ್ದಿನ್ನಿ ಗ್ರಾಮಗಳ ನೂರಾರು ರೈತರು ಮತ್ತು ಗ್ರಾಮಸ್ಥರು ಭಾಗವಹಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜಾ ರಾಮಚಂದ್ರನಾಯಕ, ಶ್ರೀಧರಸ್ವಾಮಿ, ಮೌನೇಶಗೌಡ ಹೆಚ್., ವೀರಭದ್ರಗೌಡ ಭೋಗಾವತಿ, ಶರಣಬಸವ ನಸ್ಲಾಪುರ, ಜಗದೀಶ ಓತ್ತೂರು, ರಾಮನಗೌಡ ನಂದಿಹಾಳ, ನಬೀಸಾಬ್, ಅಮರೇಶಗೌಡ ಪೊ. ಪಾಟೀಲ್, ಚನ್ನಬಸವ, ಹುಸೇನಪ್ಪ, ರವಿಕುಮಾರ ಪಾಟೀಲ್, ಈರಯ್ಯ ಪೂಜಾರಿ, ಶಿವಣ್ಣ, ಶರಣಬಸಪ್ಪಗೌಡ, ರಾಜಾ ವಿರೂಪಾಕ್ಷಯ್ಯ ಸ್ವಾಮಿ, ಮಲ್ಲಯ್ಯ ಸ್ವಾಮಿ, ರಮೇಶ, ಶೇಷಾರೆಡ್ಡಿ, ಮಧುಸೂಧನ್ ರೆಡ್ಡಿ, ಅಂಜಿನಯ್ಯನಾಯಕ, ಲಕ್ಷ್ಮೀರೆಡ್ಡಿ, ಎಸ್.ವಿ. ರಾಮಕೃಷ್ಣ, ವಿಠೋಬನಾಯಕ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



