ಸ್ನೇಹಿತರೇ ನಿಮಗೆ ಗೊತ್ತೇ? ಒಂದೊಮ್ಮೆ ಭಗವಾನ್ ಶ್ರೀ ರಾಮಚಂದ್ರನು ತಾಯಿ ದುರ್ಗಾ ಮಾತೆಗೆ ತನ್ನ ಒಂದು ಕಣ್ಣನ್ನು ಕಾಣಿಕೆಯಾಗಿ ನೀಡಲು ಉದ್ಯುಕ್ತನಾಗಿದ್ದ ಎಂದು. ನಾವು ಶರನ್ನವರಾತ್ರಿಯನ್ನು ಹಾಗೂ ವಿಜಯದಶಮಿಯನ್ನು ಆಚರಿಸುವ ಹಿಂದಿನ ಕಾರಣಗಳು ಏನು?

ಈ ಹಬ್ಬಗಳ ಹಿಂದಿರುವ ಅತ್ಯಂತ ಶಕ್ತಿಶಾಲಿಯಾದ ಭಕ್ತಿ, ತ್ಯಾಗ ಮತ್ತು ಅಧರ್ಮದ ವಿರುದ್ಧ ಧರ್ಮದ ಜಯದ ಕುರಿತಾದ ಕಥೆಗಳಲ್ಲಿ ಇರುವ ಸಂದೇಶ ಅತ್ಯಂತ ಸ್ಪಷ್ಟವಾದದ್ದು.

ತಾಯಿ ದುರ್ಗಾ ಮಾತೆಯ ಕಥೆಯಲ್ಲಿ ಬರುವ ಮಹಿಷಾಸುರ ಓರ್ವ ಕೋಣನ ಮುಖದ ದೊಡ್ಡ ರಾಕ್ಷಸ. ಆತನ ಕಿರಿಕಿರಿಗೆ ಭೂಲೋಕದ ಜನರು ಬೇಸತ್ತು ಹೋಗಿದ್ದರೆ ಸಾಧು ಸಂತರು, ಸನ್ಯಾಸಿಗಳು ಒದ್ದಾಡಿ ಹೋಗುತ್ತಿದ್ದರು. ಆತನ ಉಪಟಳ ದೇವತೆಗಳನ್ನು ಕೂಡ ತಲುಪಿತು. ದೇವತೆಗಳಿಗೂ ಕೂಡ ಆತನನ್ನು ಮಟ್ಟ ಹಾಕಲಾಗಲಿಲ್ಲ. ಆತನ ಕಿರಿಕಿರಿಯಿಂದ ನೊಂದ ದೇವತೆಗಳು, ಸಾಧು ಸಂತರು ತ್ರಿಮೂರ್ತಿಗಳ ಬಳಿ ಬಂದು ಅಲವತ್ತುಕೊಂಡರು.

ಆ ಎಲ್ಲ ದೇವತೆಗಳನ್ನು ಕರೆದುಕೊಂಡು ತ್ರಿಮೂರ್ತಿಗಳು ತಾಯಿ ದುರ್ಗೆಯ ಬಳಿ ಬಂದರು. ಮಹಿಷಾಸುರನ ಉಪಟಳವನ್ನು ಹೇಳಿ ಆತನಿಂದ ತಮ್ಮನ್ನು ರಕ್ಷಿಸು ಎಂದು ದೇವತೆಗಳೆಲ್ಲರೂ ಬೇಡಿಕೊಂಡರು.

ತಾಯಿ ದುರ್ಗೆಯು ಸರಿಸುಮಾರು 9 ದಿನಗಳ ಕಾಲ ಹಗಲು ರಾತ್ರಿ ಮಹಿಷಾಸುರನೊಂದಿಗೆ ಕಾದಾಡಿ ಅಂತಿಮವಾಗಿ ಹತ್ತನೆಯ ದಿನ ಆತನನ್ನು ಸೋಲಿಸಿದಳು. ಆ ದಿನವನ್ನೇ ವಿಜಯದಶಮಿ ಎಂದು ಆಚರಿಸಲಾಗುತ್ತದೆ.

ಕೃತ್ತಿವಾಸಿ ರಾಮಾಯಣದ ರಚನೆಯಲ್ಲಿ ಮತ್ತೊಂದು ವಿಶೇಷ ಕಥೆ ಇದೆ. ರಾವಣನು ತಾಯಿ ದುರ್ಗಾ ಮಾತೆಯನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಪೂಜಿಸುತ್ತಿದ್ದನು.

ರಾಮ ರಾವಣರ ಯುದ್ಧದ ಮೊದಲು ಪ್ರಭು ಶ್ರೀ ರಾಮನು ಈ ಕುರಿತು ಬ್ರಹ್ಮನಿಂದ ಮಾಹಿತಿ ಪಡೆದನು. ಯುದ್ಧ ಆರಂಭವಾಗುವ ಮುನ್ನವೇ ಆತ ತಾಯಿ ಮಹಾದುರ್ಗೆಗೆ ಪೂಜೆಯನ್ನು ಸಲ್ಲಿಸಿ ತನಗೆ ಯುದ್ಧದಲ್ಲಿ ಗೆಲುವು ಸಿಗುವಂತೆ ಆಶೀರ್ವಾದ ಪಡೆಯಲು ಯೋಜಿಸಿದನು. 108 ನೀಲಿ ಕಮಲದ ಹೂಗಳನ್ನು ಕಾಣಿಕೆಯಾಗಿ ಅರ್ಪಿಸಲು ನಿಶ್ಚಯಿಸಿದನು.

ಪೂಜೆಯ ಆ ದಿನವೂ ಬಂತು. ಪೂಜೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡ ಪ್ರಭು ಶ್ರೀ ರಾಮ 108 ನೀಲಿ ಕಮಲದ ಹೂವುಗಳನ್ನು ಹೊಂದಿಸಿ ಇಟ್ಟುಕೊಂಡಿದ್ದನು. ಪೂಜೆ ಸಾಂಗವಾಗಿ ನೆರವೇರಿತು. ಅಂತಿಮವಾಗಿ ಅಷ್ಟೋತ್ತರ ಶತನಾಮಾವಳಿಯನ್ನು ಹೇಳುತ್ತಾ ಒಂದೊಂದಾಗಿ ನೀಲಿ ಬಣ್ಣದ ಕಮಲದ ಹೂಗಳನ್ನು ಪ್ರಭು ಶ್ರೀ ರಾಮನು ಅರ್ಪಿಸತೊಡಗಿದನು. ಆದರೆ ಏನು ಆಶ್ಚರ್ಯ! ಅಂತಿಮವಾಗಿ ಒಂದು ಕಮಲದ ಹೂವು ಕಡಿಮೆ ಬಿತ್ತು. ಪ್ರಭು ಶ್ರೀರಾಮನಿಗೆ ಏನು ಮಾಡಬೇಕೆಂದು ತೋಚಲೇ ಇಲ್ಲ.

ಸ್ವತಃ ಕಮಲನಯನ ಎಂದು ಕರೆಯಲ್ಪಡುತ್ತಿದ್ದ ಪ್ರಭು ಶ್ರೀ ರಾಮ ಆಗ ತನ್ನ ಬತ್ತಳಿಕೆಯಲ್ಲಿದ್ದ ಬಾಣವೊಂದನ್ನು ತೆಗೆದು ತನ್ನ ಕಣ್ಣನ್ನು ಕಿತ್ತು ತಾಯಿ ದುರ್ಗಾ ಮಾತೆಗೆ ಅರ್ಪಿಸಲು ಯೋಚಿಸಿದನು.

ಇನ್ನೇನು ಬಾಣದ ಮೊನೆ ಆತನ ಕಣ್ಣನ್ನು ತಾಕುತ್ತಿತ್ತು ಎನ್ನುವ ಸಮಯದಲ್ಲಿ ಅಲ್ಲಿ ಪ್ರತ್ಯಕ್ಷವಾದ ತಾಯಿ ದುರ್ಗೆ ಶ್ರೀರಾಮನನ್ನು ತಡೆದಳು. ಅಲ್ಲದೆ ಆತನ ಅಚಲವಾದ ಶ್ರದ್ಧೆ ಹಾಗೂ ಭಕ್ತಿಗೆ ಮೆಚ್ಚಿ ವಿಜಯೀಭವ ಎಂದು ಆಶೀರ್ವದಿಸಿದಳು. ರಾವಣನ ವಿರುದ್ಧದ ಯುದ್ಧದಲ್ಲಿ ರಾಮನಿಗೆ ಗೆಲುವು ಶತಸಿದ್ಧ ಎಂದು ಆಕೆ ವರ ನೀಡಿದಳು.

ಈ ಶರನ್ನವರಾತ್ರಿಯಲ್ಲಿ ತಾಯಿ ದುರ್ಗೆಯನ್ನು ಪೂಜಿಸಲು ಕಾರಣ ಅಂದು ಪ್ರಭು ಶ್ರೀ ರಾಮ ಮಾಡಿದ ಪೂಜೆ ಹಾಗೂ ಪ್ರಾರ್ಥನೆ.

ನಿಜವಾದ ಭಕ್ತಿಯು ಭವ್ಯವಾದ ಕಾಣಿಕೆಗಳನ್ನು ಆಶಿಸುವುದಿಲ್ಲ. ನಿಜವಾದ ಭಕ್ತಿಗೆ ಬೇಕಾಗಿರುವುದು ನಿಷ್ಠೆ, ನಂಬಿಕೆ ಹಾಗೂ ತಾವು ನಂಬಿರುವ ದೈವ ಸ್ವರೂಪದ ಮುಂದೆ ತಲೆಬಾಗುವುದು. ಪರಿಪೂರ್ಣ ಭಕ್ತಿಗೆ ದೇವರು ಕೂಡ ಶರಣಾಗುತ್ತಾನೆ... ಅಸಾಧ್ಯವಾದದ್ದು ಕೂಡ ಸಾಧ್ಯವಾಗುತ್ತದೆ.

ಅಲ್ಲವೇ ಸ್ನೇಹಿತರೇ?

ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ, ಗದಗ