ನಮ್ಮ ಒಂದು ದಿನದ ಪ್ರವಾಸ ಪಟ್ಟಿಯಲ್ಲಿ ಪಾರ್ವತಮ್ಮನ ಬೆಟ್ಟ ಹತ್ತುವ ವಿಚಾರ ಆ ಮೊದಲು ನನಗೆ ತಿಳಿದಿರಲಿಲ್ಲ. ನಾಳೆ ಬೆಳಿಗ್ಗೆ ಐದಕ್ಕೆ ರೆಡಿಯಾಗಿರಿ. ಬಿಸಿಲೆ ಘಾಟ್‌ನಲ್ಲಿ ಬೆಳಗಿನ ಸೂರ್ಯೋದಯದ ಮಂಜಿನ ಸುಂದರ ದೃಶ್ಯ ವೀಕ್ಷಿಸೋಣ. ಹಕ್ಕಿಗಳ ಕಲರವ ಕೇಳಲು ಚೆಂದ ಎಂದಿದ್ದರು ಬಿ.ಎಸ್. ದೇಸಾಯಿ. ಅವರು ಒಳ್ಳೆಯ ಛಾಯಾಗ್ರಾಹಕರು, ಜೊತೆಗೆ ನವ್ಯ ಚಿತ್ರಕಲಾವಿದರು. ಸಕಲೇಶಪುರ ಮಾರ್ಗ ಬಿಸಿಲೆಗೆ ಹೋಗಬಹುದೆಂದು ನಾನು ಭಾವಿಸಿ ಕಿ.ಮೀ. ಲೆಕ್ಕ ಹಾಕಿದೆ. ಸಕಲೇಶಪುರದಿಂದ ಬಿಸಿಲೆಗೆ 60 ಕಿ.ಮೀ. ದೂರ ಸೇರಿಸಿ ಹಾಸನದಿಂದ ನೂರಕ್ಕೂ ಹೆಚ್ಚು ಕಿ.ಮೀ. ಆಗಬಹುದೆಂದು ಭಾವಿಸಿ ಏಳರ ಒಳಗೆ ಅಲ್ಲಿಗೆ ಹೋಗಬಹುದೆಂದು ಅಂದಾಜಿಸಿ ಮಲಗಿದೆ. ಬೆಳಗಿನ ನಾಲ್ಕು ಕಾಲು ಗಂಟೆಗೆ ಎಚ್ಚರವಾಯಿತು. ಐದಕ್ಕೆ ಸರಿಯಾಗಿ ದೇಸಾಯಿ ಫೋನ್ ಮಾಡಿದರು. ನಾನು ಅಷ್ಟೊತ್ತಿಗೆ ಸಿದ್ಧ ಎಂದೆ. ಇನ್ನೂ ಹತ್ತು ನಿಮಿಷದಲ್ಲಿ ರಿಂಗ್ ರೋಡ್ ಮಾರ್ಗ ನಿಮ್ಮ ಮನೆ ಬಳಿಯ ಬೈಪಾಸ್ ರೋಡಿಗೆ ಬರುತ್ತೇವೆ. ಅಬ್ದುಲ್ ಕಲಾಂ ಪಾರ್ಕ್ ಬಳಿಗೆ ಬನ್ನಿ ಎಂದರು. ಆದರೆ ಅವರು ಅಲ್ಲಿಗೆ ಬಂದಿದ್ದು ಆರು ಕಾಲು ಗಂಟೆಗೆ. ಅವರೊಂದಿಗೆ ಬಿಜಾಪುರದಿಂದ ಬಂದಿದ್ದ ಇಬ್ಬರು ಚಿತ್ರಕಲಾವಿದರು ಪಿ.ಎಸ್. ಕಡೇಮನಿ ಮತ್ತು ವಿದ್ಯಾಧರ ಸಾಲಿ ಇದ್ದರು. ಪಾರ್ಕಿನ ಮುಂದಿನ ಆಟೋಸ್ಟ್ಯಾಂಡ್‌ನಲ್ಲಿ ಒಂದು ಗಂಟೆ ಕಾರು ಬರುವುದನ್ನೇ ಕಾಯುತ್ತಾ ನಿದ್ದೆಯೂ ಮಾಡದೆ ಒದ್ದಾಡಿದೆ.

ನಮ್ಮ ಕಾರು ಬೈರಾಪುರ ದಾಟಿದ ಮೇಲೆ ದೇಸಾಯಿ ತಮ್ಮ ಪ್ಲಾನ್ ಚೇಂಜ್ ಮಾಡಿದರು. ಮೊದಲು ಪಾರ್ವತಮ್ಮನ ಬೆಟ್ಟಕ್ಕೆ ಹೋಗೋಣ ಎಂದು ಕಾರು ಎಡಕ್ಕೆ ತಿರುಗಿಸಿದರು. ಅದು ಪಾಳ್ಯ ನಲ್ಲೂರು ಬೆಟ್ಟಳ್ಳಿ ಮಾರ್ಗ ಮಗ್ಗೆಗೆ ಹೋಗುವ ರಾಜ್ಯ ರಸ್ತೆ. ಹೆದ್ದಾರಿಯಿಂದ ಎರಡು ಕಿ.ಮೀ. ಒಳಗೆ ಹೋದಂತೆ ಹಳೇಪಾಳ್ಯದಲ್ಲಿ ಶ್ರೀ ಲಕ್ಷ್ಮೀ ಜನಾರ್ಧನಸ್ವಾಮಿ ದೇವಸ್ಥಾನ ಸಿಕ್ಕಿತು. ಈ ಕ್ಷೇತ್ರಕ್ಕೆ ಪುರಾಣ ಪ್ರಸಿದ್ಧವಾದ ಕಥೆ ಇದೆ. ಪದ್ಮಾವತಿಪುರವೆಂಬ ಪಟ್ಟಣದ ವಿತಂಟಕನೆಂಬ ರಾಕ್ಷಸನು ರಾಮನಾಥಪುರದ ರಾಮೇಶ್ವರ ದೇವರನ್ನು ಕುರಿತು ಘೋರ ತಪಸ್ಸು ಮಾಡಿ ಅವನ ತಲೆಯಲ್ಲಿ ಹೊಗೆ ಬರಲಾರಂಭಿಸಿತಂತೆ. ಆಗ ಶ್ರೀರಾಮೇಶ್ವರ ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳಲು ನಾನು ಎಲ್ಲಾ ದೇವತೆಗಳಿಗಿಂತ ಬಲಿಷ್ಠನಾಗಬೇಕೆಂದು ಕೋರಿದನು. ತಥಾಸ್ತು ಎಂದನು. ಈ ವರ ಬಲದಿಂದ ಗರ್ವಿಷ್ಠನಾದ ವಿತಂಟಕನು ವಿಷ್ಣುವಿನ ಮೇಲೆ ದಂಡೆತ್ತಿ ಹೋಗಲು ಮಹಾವಿಷ್ಣುವು ತ್ರಿಮೂರ್ತಿ ಅವತಾರವೆತ್ತಿ ರಾಕ್ಷಸನನ್ನು ಸಂಹಾರ ಮಾಡಿ ಇಂದ್ರಪ್ರಸ್ಥಪುರಕ್ಕೆ ಬಂದು ಅರ್ಚನಾ ರೂಪವನ್ನು ಸ್ವೀಕರಿಸಿ ಉದ್ಭವಮೂರ್ತಿಯಾಗಿ ನೆಲೆಸಿದರೆಂದು ಸ್ಥಳಪುರಾಣವಿದೆ. ಒಮ್ಮೆ ಇಂದ್ರನಿಗೆ ಬ್ರಹ್ಮಹತ್ಯಾದೋಷ ಬರಲು ಇಲ್ಲಿಗೆ ಬಂದು ಶ್ರೀ ಜನಾರ್ಧನನ ದರ್ಶನ ಪಡೆದಾಗ ಅವನ ದೋಷ ಪರಿಹಾರವಾಯಿತೆಂದು ಹೀಗಾಗಿ ಈ ಕ್ಷೇತ್ರಕ್ಕೆ ಇಂದ್ರಪ್ರಸ್ಥಪುರವೆಂಬ ಹೆಸರು ಬಂತೆಂದು ಹೇಳಲಾಗಿದೆ.

ಇಲ್ಲಿ 1974ರಲ್ಲಿ ಸಿ.ವಿ. ಶಿವಶಂಕರ್ ಅವರು ಹೊಯ್ಸಳ ಚಿತ್ರ ನಿರ್ಮಿಸಲು ಪಾಳ್ಯ ಗ್ರಾಮದ ಜನಾರ್ಧನಸ್ವಾಮಿ ದೇವಾಲಯದ ಸಮೀಪದಲ್ಲಿ ಹುಲಿಯೊಂದಿಗೆ ಹೋರಾಡುವ ದೃಶ್ಯವನ್ನು ರೋಮಾಂಚನಕಾರಿಯಾಗಿ ಚಿತ್ರೀಕರಿಸಿಕೊಂಡ ಕಥೆಯನ್ನು ನನ್ನ ಅನುಭವಾಮೃತ ಸೇವಾಮೃತ ಕೃತಿಯಲ್ಲಿ ದಾಖಲಿಸಿದ್ದೇನೆ. ಅದು ನೆನಪಾಯಿತು. ಹುಲಿಯೇನೋ ಈಗ ನಾವು ಹೋಗುತ್ತಿರುವ ಜಾಗ ಆನೆಗಳ ವಾಸಸ್ಥಾನ ಎಂದು ದೇಸಾಯಿ ಹೇಳಿದಾಗ ನನಗೆ ಒಳಗೊಳಗೆ ಭಯವಾಯಿತು. ನಮ್ಮ ಕಾರು ನಲ್ಲೂರು ಬೆಟ್ಟಳ್ಳಿ ದಾಟಿ ಪಾರ್ವತಮ್ಮನ ಬೆಟ್ಟದ ಬಳಿ ಬಂತು. ಬೆಟ್ಟಕ್ಕೆ ಹೋಗುವ ಮಾರ್ಗದ ದೇವಸ್ಥಾನದ ಆರ್ಚ್ ನಮ್ಮನ್ನು ಸ್ವಾಗತಿಸಿತು. ಕೆಲ ದಿನಗಳ ಹಿಂದೆ ಇಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದಿರುವ ಅಲಂಕಾರ ಲಕ್ಷಣಗಳು ಗೋಚರಿಸಿದವು. ಅಲ್ಲಿಂದ ಅಂದಾಜು ಒಂದು ಕಿ.ಮೀ. ಕಾರು ಮೇಲೆ ಟಾರು ರಸ್ತೆಯಲ್ಲಿ ಸಾಗಿತು. ಮೇಲೆ ಸಮತಟ್ಟಾದ ಸ್ಥಳದಲ್ಲಿ ಕಾರು ನಿಲ್ಲಿಸಿ ಅಲ್ಲಿಂದ ಕಾಲ್ನಡಿಗೆಯಲ್ಲಿ ಮೇಲೆ ಸಾಗಿದೆವು. ಅಲ್ಲಿಂದ ಬೆಟ್ಟದ ಮೇಲಿನ ದೇಗುಲ ಕಾಣಿಸುತ್ತಿಲ್ಲ. ಇನ್ನೂ ಎಷ್ಟು ದೂರ ಬೆಟ್ಟ ಹತ್ತಬೇಕಪ್ಪ ಎಂದು ಕೊಂಚ ಹೆದರಿದೆ. ಆನೆಗಳ ಭಯ ಬೇರೆ ಮನಸ್ಸಿನ ಮೇಲೆ ದಾಳಿ ಮಾಡುತ್ತಿತ್ತು. ಇನ್ನೂ ಮೇಲೆ ನೇರ ಬಂಡೆ ಮೇಲಿನ ಮೆಟ್ಟಿಲು ಹತ್ತಿದರೆ ಒಂದು ಕಿ.ಮೀ. ಆಗಬಹುದು ಎಂದರು ದೇಸಾಯಿ. ಮಣ್ಣಿನ ರಸ್ತೆಯಲ್ಲಿ ಸುತ್ತಿ ಬಳಸಿ ಹೋದರೆ ಎರಡು ಕಿ.ಮೀ. ಆಗಬಹುದೇನೋ. ಆ ಮಣ್ಣಿನ ರಸ್ತೆ ಕೊರಕಲು ಬಿದ್ದು ಕೆಲ ಹುಡುಗರು ಸಾಹಸ ಮಾಡಿ ಬೈಕ್ ನೂಕಿ ಹತ್ತಿಸುವ ಸಾಹಸ ಮಾಡುತ್ತಿದ್ದರು. ಇದೇ ಚಾರಣವೇ ಎಂದುಕೊಂಡೆ. ಅವರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡರೆ..? ಬದಲಿಗೆ ಟಾರ್ ರಸ್ತೆ ಮಾಡಿದರೆ ಒಳಿತೆಂದು ಭಾವಿಸಿದೆ. ಈ ಕಡೆ ಕಪ್ಪು ಬಂಡೆಕಲ್ಲನ್ನು ಕೊರೆದು ಚಿಕ್ಕ ಚಿಕ್ಕ ಮೆಟ್ಟಿಲುಗಳ ಸ್ಟೆಪ್ ಮಾಡಿದ್ದರು. ಇದು ನೇರ ಬೆಟ್ಟ ಹತ್ತಲು ಸಹಕಾರಿಯಾಗಿದೆ. ಅರ್ಧ ಬೆಟ್ಟ ಹತ್ತಿ ಅಲ್ಲಿ ಕುಳಿತು ವಿಶ್ರಮಿಸುತ್ತಾ ಬೆಟ್ಟದ ಸುತ್ತಲ ಪ್ರಕೃತಿ ದೃಶ್ಯಗಳನ್ನು ಸೆರೆ ಹಿಡಿದೆವು. ದೇಸಾಯಿ ಒಂದು ಲೆನ್ಸ್ ಕ್ಯಾಮೆರಾ ತಂದಿದ್ದರು. ಅದರಲ್ಲಿ ಕಾಫಿ ತೋಟದಲ್ಲಿ ಎತ್ತರವಾಗಿ ಬೆಳೆದ ಮರಗಳ ಮೇಲೆ ಕುಳಿತ ನಾನಾ ಬಗೆಯ ಪಕ್ಷಿಗಳ ಫೋಟೋ ತೆಗೆದರು. ಅವರು ತಮ್ಮ ಮೊಬೈಲ್‌ನಲ್ಲಿ ವಿಶೇಷ ರೀತಿ ಫೋಟೋ ತೆಗೆಯುವುದಾಗಿ ತಿಳಿಸಿ ಅಲ್ಲಿಯೇ ಕಂಡ ಒಂದು ಕೊಳದ ಆ ಕಡೆ ಮೇಲ್ಗಡೆ ನಾವು ಮೂವರು ಸ್ವಲ್ಪ ದೂರ ದೂರವಾಗಿ ನಿಲ್ಲಲು ಹೇಳಿದರು. ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸ್ವೆಟರ್ ಧರಿಸಿದ್ದ ನನ್ನನ್ನು ಮಧ್ಯೆ ನಿಂತಿದ್ದ ಕಡೇಮನಿ ಪಕ್ಕದಿಂದ ಸರಿದು ತಮ್ಮ ಹಿಂದೆ ಬಂದು ಸ್ವೆಟರ್ ಬಿಚ್ಚಾಕ್ಕಿ ಸಾಲಿ ಪಕ್ಕ ಹೋಗಿ ನಿಲ್ಲಲು ತಿಳಿಸಿದರು. ಆ ಫೋಟೋದಲ್ಲಿ ನಾನು ಎರಡು ಕಡೆ ನಿಂತಿರುವುದು ಸೆರೆಯಾಗಿತ್ತು. ಮತ್ತೊಮ್ಮೆ ಕೊಳದ ಮೇಲಿನ ಸಮತಟ್ಟಾದ ಜಾಗದಲ್ಲಿ ನೀವು ಕೊಂಚ ದೂರ ಓಡಿ ಮೇಲಕ್ಕೆ ಜಿಗಿಯಿರಿ ಎಂದರು. ಅದನ್ನು ನೋಡಿದಾಗ ಸ್ಲೋಮೋಷನ್‌ನಲ್ಲಿ ನಾನು ಓಡುತ್ತಿರುವುದು ಕಂಡು ವಿಷ್ಣುವರ್ಧನ ನಟಿಸಿರುವ ನಾಗರಹಾವು ಚಿತ್ರದಲ್ಲಿ ಬಾರೆ ಬಾರೆ.. ಚೆಂದದ ಚೆಲುವಿನ ತಾರೆ.. ಹಾಡಿಗೆ ಓಡುವ ದೃಶ್ಯ ನೆನಪಾಯಿತು. ಅಲ್ಲಿ ಕುಳಿತು ಎದುರಿನ ಬೆಟ್ಟಗುಡ್ಡ ಮರಗಿಡಗಳ ಮಂಜಿನ ರಮ್ಯ ದೃಶ್ಯ ನೋಡುತ್ತಿರಲು ಒಂದು ಬೆಟ್ಟ ಕಾಣಿಸಿತು.

ಅದು ಮಗನ ತಿಂದ ಮಹಾರಾಜನ ದುರ್ಗ. ಸ್ಥಳೀಯ ಐತಿಹ್ಯ ಪ್ರಕಾರ ಕ್ರಿ.ಶ. 1595ರಲ್ಲಿ ಮಹಾದೇವ ಎಂಬಾತನು ವಿಜಯನಗರದ ಸಾಮಂತನಾಗಿ ಆಳುತ್ತಿದ್ದು ಅವನಿಗೆ ಪ್ರತಿದಿನವೂ ಊಟಕ್ಕೆ ಮಾಂಸ ಬೇಕಿತ್ತಂತೆ. ಒಂದು ದಿನ ಅಡುಗೆಗೆ ಯಾವ ಪ್ರಾಣಿಗಳೂ ಬೇಟೆಗೆ ಸಿಗದೆ ಅವನ ಶತ್ರುಗಳು ಸಂಚು ಹೂಡಿ ರಾಜನಿಗೆ ತಿಳಿಯದಂತೆ ಅವನ ಮಗನನ್ನೇ ಕೊಂದು ಆ ಮಗನ ಮಾಂಸವನ್ನು ಬೇಯಿಸಿ ರಾಜನಿಗೆ ಅಡುಗೆ ಮಾಡಿ ತಿನ್ನಿಸುತ್ತಾರೆ. ಈ ವಿಷಯ ತಿಳಿದ ರಾಜನು ತೀವ್ರವಾಗಿ ನೊಂದು ಕುದುರೆಯೇರಿ ಬೆಟ್ಟದ ಮೇಲಿಂದ ಹಾರಿ ಪ್ರಾಣ ಬಿಟ್ಟನೆಂದು ಕಥೆ ಇದೆ. ಇದರಿಂದಾಗಿ ಮಗನ ತಿಂದ ಮಹಾರಾಜನ ದುರ್ಗ ಎಂಬ ಹೆಸರು ಬಂದಿದೆ. ಈ ಬೆಟ್ಟದಲ್ಲಿ ಬತ್ತೇರಿಗಳು, ಹಳೆಯ ಕೋಟೆಯ ಐತಿಹಾಸಿಕ ಕುರುಹುಗಳು ಶಿಥಿಲವಾಗಿದ್ದು ಈಗ ಸಾಹಸಿಗರ ಟ್ರೆಕ್ಕಿಂಗ್ ತಾಣವಾಗಿದೆ.

ನಾವು ಕುಳಿತಿದ್ದ ಜಾಗದಲ್ಲಿ ಕಲ್ಲು ಚಪ್ಪಡಿಯ ತೋರಣ ಬಾಗಿಲನ್ನು ತಬ್ಬಿ ಉತ್ತರ ಕರ್ನಾಟಕದ ಕಲಾವಿದರು ಫೋಟೋ ತೆಗೆಸಿಕೊಂಡರು. ಮುಂದೆ ಬೆಟ್ಟ ಹತ್ತಿದಂತೆ ಒಂದು ಗುಡಿಯ ಮೇಲೆ ಬಸವಣ್ಣನ ಮೂರ್ತಿ ಕುಳಿತ ಭಂಗಿಯಲ್ಲಿ ಶೋಭಿಸುತ್ತಿತ್ತು. ಬೆಟ್ಟಕ್ಕೆ ಎಳೆದಿರುವ ಲೈಟ್ ಕಂಬದ ವೈರ್‌ಗೆ ನೇರ ಕನೆಕ್ಟ್ ಮಾಡಿ ಬಲ್ಬ್‌ಗಳು ಉರಿಯುತ್ತಿದ್ದವು. ಅಲ್ಲಿಂದ ನಾವು ಮತ್ತೂ ಬೆಟ್ಟ ಏರಲು ಅಲ್ಲಿ ಬೃಹದಾಕಾರದ ಕಲ್ಲುಬಂಡೆಗಳು ಅದರ ಕೆಳಗೆ ಪ್ರಪಾತದ ದೃಶ್ಯವು ನೋಡಲು ಅದ್ಭುತ ಹಾಗೂ ಕೆಳಗೆ ನೋಡಲು ಭಯಾನಕವಾಗಿತ್ತು. ಅಲ್ಲಿಯೂ ಬಂಡೆಗಳ ಹಾಸುಪಾಸು ನಿಂತು ಫೋಟೋ ತೆಗೆಸಿಕೊಂಡೆವು. ಅಲ್ಲಿಂದ ಮತ್ತೂ ಮೇಲಕ್ಕೆ ಬೆಟ್ಟದ ತುತ್ತತುದಿಯಲ್ಲಿ ಪಾರ್ವತಮ್ಮನ ದೇವಸ್ಥಾನವನ್ನು ನಿರ್ಮಿಸಲಾಗಿದೆ. ದೇವಸ್ಥಾನವು ಕಾಂಪೌಂಡ್ ಗೋಡೆಯಿಂದ ಸುತ್ತುವರಿದಿದೆ. ದೇವಸ್ಥಾನದಲ್ಲಿ ಅರ್ಚಕರು ಯಾರೂ ಇರಲಿಲ್ಲ. ಆದರೆ ಬಲ್ಬ್‌ಗಳು ಉರಿಯುತ್ತಿದ್ದವು. ಮೈಕಿನ ರೆಕಾರ್ಡ್ ಸಾಮಗ್ರಿಗಳು ಅಲ್ಲಿದ್ದವು. ಗರ್ಭಗುಡಿಯಲ್ಲಿ ಪಾರ್ವತಮ್ಮನ ಭವ್ಯ ಮೂರ್ತಿ ಇದೆ. ಎಡಪಕ್ಕದಲ್ಲಿ ಶಿವಲಿಂಗ ಇರುವ ಗರ್ಭಗುಡಿ ಇದೆ. ಲಿಂಗದ ಎದುರು ಬಸವಣ್ಣನ ಮೂರ್ತಿ ಇದೆ. ದೇವಸ್ಥಾನವನ್ನು ಒಂದು ಸುತ್ತು ಹಾಕಿ ಮತ್ತೆ ಕೆಳಗೆ ಇಳಿದೆವು. ಕಾರು ನಿಲ್ಲಿಸಿದ ಜಾಗ ತಲುಪುವಷ್ಟರಲ್ಲಿ ಕೈಕಾಲು ಸೋತು ಸುಸ್ತಾಗಿ ಮಗ್ಗೆಗೆ ಬಂದು ತಿಂಡಿ ತಿಂದು ಸುಧಾರಿಸಿಕೊಂಡು ಮುಂದಿನ ಪ್ರಯಾಣಕ್ಕೆ ಸಿದ್ಧರಾದೆವು.

-ಗೊರೂರು ಅನಂತರಾಜು, ಹಾಸನ.