ಲಿಂಗಸುಗೂರು: ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರ ಪರವಾಗಿ ಪಟ್ಟಣದ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ್ ಬಯ್ಯಾಪುರ ಹಾಗೂ ಪಕ್ಷದ ಕಾರ್ಯಕರ್ತರು ಶಿಕ್ಷಕರಲ್ಲಿ ಮತಯಾಚನೆ ನಡೆಸಿದರು.

ಪಟ್ಟಣದ ಬಸವೇಶ್ವರ ಕಾಲೇಜು, ಸಂಗಮೇಶ್ವರ ಕಾಲೇಜು, ಡಾ. ಸುಧಾಮೂರ್ತಿ ಕಾಲೇಜು ಹಾಗೂ ಅಮರೇಶ್ವರ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಸಭೆ ನಡೆಸಿದ ಮುಖಂಡರು, ಅಕ್ಟೋಬರ್ 23ರಂದು ನಡೆಯಲಿರುವ ಚುನಾವಣೆಯಲ್ಲಿ ಶರಣಪ್ಪ ಮಟ್ಟೂರು ಅವರನ್ನು ಬೆಂಬಲಿಸಿ ಗೆಲ್ಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶರಣಗೌಡ ಪಾಟೀಲ್ ಬಯ್ಯಾಪುರ, ಶಿಕ್ಷಕರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ, ವರ್ಗಾವಣೆ ಪ್ರಕ್ರಿಯೆಯಲ್ಲಿ ನ್ಯಾಯ, ವೇತನ ಮತ್ತು ಪಿಂಚಣಿಗೆ ಸಂಬಂಧಿಸಿದ ಬೇಡಿಕೆಗಳ ಈಡೇರಿಕೆ ಹಾಗೂ ಶೈಕ್ಷಣಿಕ ಕ್ಷೇತ್ರದ ಸುಧಾರಣೆಗಳಿಗೆ ಆದ್ಯತೆ ನೀಡುವ ನಾಯಕತ್ವ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಶಿಕ್ಷಕರ ನೋವು-ನಲಿವುಗಳನ್ನು ಅರಿತು ಅವರ ಹಕ್ಕುಗಳ ರಕ್ಷಣೆಗಾಗಿ ವಿಧಾನ ಪರಿಷತ್‌ನಲ್ಲಿ ನಿರಂತರವಾಗಿ ಧ್ವನಿ ಎತ್ತುವ ಸಾಮರ್ಥ್ಯ ಶರಣಪ್ಪ ಮಟ್ಟೂರು ಅವರಿಗಿದೆ. ಶಿಕ್ಷಕರ ಹಿತಾಸಕ್ತಿಗಾಗಿ ಕೆಲಸ ಮಾಡುವ ಅನುಭವ ಹೊಂದಿರುವ ಅವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹಾಗೂ ಶಿಕ್ಷಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಪರಿಣಾಮಕಾರಿಯಾಗಿ ಶ್ರಮಿಸುವ ನಾಯಕತ್ವವನ್ನು ಬೆಂಬಲಿಸಬೇಕು. ಅಕ್ಟೋಬರ್ 23ರಂದು ನಡೆಯಲಿರುವ ಚುನಾವಣೆಯಲ್ಲಿ ಶಿಕ್ಷಕ ಮತದಾರರು ತಮ್ಮ ಅಮೂಲ್ಯವಾದ ಪ್ರಥಮ ಪ್ರಾಶಸ್ತ್ಯದ ಮತವನ್ನು ಶರಣಪ್ಪ ಮಟ್ಟೂರು ಅವರಿಗೆ ನೀಡುವ ಮೂಲಕ ಅವರ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಪಾಮಯ್ಯ ಮುರಾರಿ, ಡಿ.ಜಿ. ಗುರಿಕಾರ, ಗುಂಡಪ್ಪ ನಾಯಕ, ಸೋಮಶೇಖರ್ ಐದನಾಳ, ಅಮರೇಶ ಮೇದನಾಪುರ, ಹುಸೇನಪ್ಪ, ಶಿವಪ್ಪ, ಚನ್ನರೆಡ್ಡಿ ಬಿರಾದಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.